ತೈಪೆ: ಕಳೆದ ಭಾನುವಾರ ಅಮೆರಿಕದ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ಭೇಟಿ ನೀಡಿ ಹೋದ ಮೇಲೆ ತೈಪೆಯ ಸ್ಥಿತಿ ಅತ್ತ ದರಿ ಇತ್ತ ಪುಲಿ ಎಂಬಂತಾಗಿದೆ.
ಚೀನಾದಲ್ಲಿ ಕಮ್ಯೂನಿಸ್ಟ್ ಜನ ಚಳವಳಿ ಪೀಪಲ್ಸ್ ಲಿಬರೇಶನ್ ಆರ್ಮಿ ಅಧಿಕಾರಕ್ಕೆ ಏರಿದಾಗ ರಾಜ ಸತ್ತೆಯ ಪರ ಇದ್ದವರು, ರಾಜ ಕುಟುಂಬದವರು, ಕಮ್ಯೂನಿಸ್ಟ್ ವಿರೋಧಿಗಳು ಅವರದೇ ತೈಪೆ ದ್ವೀಪದಲ್ಲಿ ನೆಲೆಸಿದರು.
ಇದಕ್ಕೆ ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳ ಬೆಂಬಲವಿತ್ತು. ಎಷ್ಟರ ಮಟ್ಟಿಗೆಂದರೆ ಅಮೆರಿಕದ ಸೇನೆ ವಿಯೆಟ್ನಾಮ್ ನಿಂದ ಓಡಿ ಬರುವ ವರೆಗೆ ತೈಪೆಯನ್ನೇ ಚೀನಾ ಎಂದು ಕರೆದು ಕಮ್ಯೂನಿಸ್ಟ್ ಚೀನಾಕ್ಕೆ ಮೂರು ದಶಕಗಳ ಕಾಲ ಮಾನ್ಯತೆ ನೀಡದೆಯೇ ಕಳೆಯಿತು. ಆದರೆ ಈಗ ಚೀನಾ ಅಮೆರಿಕ ಇಲ್ಲವೇ ಪಾಶ್ಚಾತ್ಯರ ಬೆದರಿಕೆಗೆ ಬಾಗುವ ಸ್ಥಿತಿಯಲ್ಲಿ ಇಲ್ಲ.
ಪೆಲೋಸಿ ಭೇಟಿಯು ಅಮೆರಿಕದ ಮಕ್ಕಳನ್ನು ಚಿವುಟುವ ಕೆಲಸಗಳಲ್ಲಿ ಒಂದು. ಪೆಲೋಸಿ ಮತ್ತು ಅವರ ಕುಟುಂಬಕ್ಕೇ ನಿರ್ಬಂಧ ವಿಧಿಸಿರುವ ಚೀನಾವು, ತೈಪೆ ಸುತ್ತ ಆರು ಕಡೆ ಅಣಕು ಸಮರಾಭ್ಯಾಸ ನಡೆಸುತ್ತ ಚಕ್ರವ್ಯೂಹವನ್ನು ರಚಿಸಿದೆ. ಚೀನಾದ ಈಗಿನ ನಡೆಯು ಅದು ಪಾಶ್ಚಾತ್ಯರಿಗೆ ಹಾಕಿದ ಸವಾಲಾಗಿದೆ.
ಈ ಸುತ್ತ ಅಮೆರಿಕವು ಗಿರಕಿ ಹೊಡೆಯುವ ಮತ್ತೆರಡು ದೇಶಗಳು ಜಪಾನ್ ಮತ್ತು ದಕ್ಷಿಣ ಕೊರಿಯಾ. ಶುಕ್ರವಾರ ಟೋಕಿಯೋದಲ್ಲಿ ಮಾತನಾಡಿದ ಪೆಲೋಸಿಯವರು, ನನ್ನ ಪ್ರವಾಸ ನನ್ನ ದೇಶದ್ದು, ಚೀನಾ ಯೋಜಿಸಿದ್ದಲ್ಲ. ಅಮೆರಿಕವು ತೈಪೆಯ ಸಾರ್ವಭೌಮತ್ವವನ್ನು ಮನ್ನಿಸುತ್ತದೆ. ಅದು ಒಂಟಿಯಾಗಲು ಬಿಡದೆ ಬೆಂಬಲಿಸುತ್ತದೆ. ಚೀನಾದ ಕ್ಷಿಪಣಿ ಪ್ರಯೋಗಗಳು ಅನಪೇಕ್ಷಿತ ಎಂದು ಹೇಳಿದ್ದಾರೆ.
ಪೆಲೋಸಿ ಜಪಾನಿನಲ್ಲಿರುವಾಗ ಜಪಾನಿನ ಆರ್ಥಿಕ ವಲಯದತ್ತಲೂ ಕ್ಷಿಪಣಿ ಹಾರಿಸಿದ ಚೀನಾ ಮತ್ತೊಮ್ಮೆ ತಾನೇರಿರುವ ಎತ್ತರವನ್ನು ತೋರಿಸಿ ಎಚ್ಚರಿಸಿದೆ. ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ಸ್ (ವಿದೇಶಾಂಗ ಸಚಿವ) ಅಂತೋಣಿ ಬ್ಲಿಂಕೆನ್ ಅವರು ಪೆಲೋಸಿಯ ತೈಪೆ ಭೇಟಿಯು ಬೀಜಿಂಗ್ ಸಿಟ್ಟಿಗೇಳುವಂತೆ ಮಾಡಿದೆ. ಚೀನಾ ಪೆಲೋಸಿ ಮತ್ತು ಅವರ ಕುಟುಂಬಕ್ಕೆ ಆರ್ಥಿಕ ನಿರ್ಬಂಧ ಹೇರಿದೆ ಎಂದಷ್ಟೇ ಹೇಳಿದ್ದಾರೆ.
ತೈಪೆಯ ರಕ್ಷಣಾ ಸಚಿವಾಲಯವು ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿರುವುದಾಗಿ ಹೇಳಿದೆ. ಇದಕ್ಕೆ ಮೊದಲು ಚೀನಾವು ತೈಪೆಯಿಂದ ಆಮದು ಮಾಡಿಕೊಳ್ಳುವ 2,000ದಷ್ಟು ಬಗೆಯ ಹಣ್ಣು, ತರಕಾರಿ, ಮೀನು ಇತ್ಯಾದಿಗಳ ಆಮದನ್ನು ನಿಲ್ಲಿಸಿದೆ; ಮತ್ತು ಬಂದುದನ್ನು ವಾಪಸು ಕಳುಹಿಸಿದೆ.