ಚಿಕ್ಕಮಗಳೂರು: ನಗರದ ಏಳನೇ ವಾರ್ಡ್‌ನ ದೋಣಖಣ, ಗಾಂಧಿನಗರ ಪ್ರದೇಶದ ಅವಸ್ಥೆ ತೀರಾ ಶೋಚನೀಯವಾಗಿದೆ. ಮುಖ್ಯ ರಸ್ತೆಯ ಬದಿಯಲ್ಲಿನ ನಿವೇಶನದ ಬಳಿ ಗಿಡಗಂಟಿ, ಪೊದೆಗಳು ಬೆಳೆದು, ತ್ಯಾಜ್ಯಗಳು ರಾಶಿಬಿದ್ದು ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿವೆ.
ಈ ಪ್ರದೇಶದ ಕೆಲವೆಡೆ ತ್ಯಾಜ್ಯ ರಾಶಿ ಬಿದ್ದು ದುರ್ನಾತ ಬೀರುತ್ತಿದ್ದು, ಕೊಳಕು ನೀರು ತುಂಬಿ ರಸ್ತೆಗಳು ಹದಗೆಟ್ಟಿವೆ.ರಸ್ತೆ ಬದಿಯ ಬೋರ್‌ವೆಲ್ ದುಃಸ್ಥಿತಿಯಲ್ಲಿದ್ದು, ಕೊಳವೆ ಬಾವಿಯಲ್ಲಿ ಮೋಟಾರ್, ಪಂಪ್ ಕೂಡಾಇಲ್ಲದೆ ‘ಸ್ಟಾರ್ಟರ್’ ಪೆಟ್ಟಿಗೆಯೂ ತುಕ್ಕುಹಿಡಿಯುವ ಹಂತಕ್ಕೆ ತಲುಪಿದೆ.
ಬಡಾವಣೆಯ ಹಲವೆಡೆ ಉದ್ಯಾನಕ್ಕೆ ಜಾಗ ಗುರುತಿಸಲಾಗಿದ್ದು, ಅಲ್ಲಿ ಕೇವಲ ಉದ್ಯಾನ ಫಲಕಗಳನ್ನು ಮಾತ್ರ ಅಳವಡಿಸಿ ಕಾಮಗಾರಿಗಳನ್ನು ಕೈಬಿಡಲಾಗಿದೆ. ಹಲವೆಡೆ ಧಾರಾಳ ಹುಲ್ಲು, ಕಳೆ ಬೆಳೆದಿದ್ದು, ಸುತ್ತ ಬೇಲಿಯನ್ನೂ ಹಾಕದೇ ಇರುವುದರಿಂದ ಈ ಜಾಗಗಳು ಜಾನುವಾರುಗಳ ಮೇವಿನ ತಾಣಗಳಾಗಿವೆ.
ಗಾಂಧಿನಗರ ಸಹಿತ ಕೆಲವೆಡೆ ಮನೆಗಳಿಗೆ ಪೂರೈಕೆಯಾಗುವ ನೀರು ಕೊಳಕಾಗಿದ್ದು, ಕೆಲವೊಮ್ಮೆ ಮಣ್ಣುಮಿಶ್ರಿತ ನೀರು ಬರುತ್ತದೆ ಎಂದು ನಿವಾಸಿಗಳು ದೂರಿದ್ದಾರೆ.
ಹಲವೆಡೆ ರಸ್ತೆಗಳು ಹದಗೆಟ್ಟಿದ್ದು, ಕೆಲವೆಡೆ ಕೇವಲ ಜಲ್ಲಿ ಹಾಕಲಾಗಿದೆ. ಕೆಲವೆಡೆ ದಾರಿದೀಪಗಳು ಹಾಳಾಗಿದ್ದು, ಈ ದಾರಿಗಳಲ್ಲಿ ವಾಹನಗಳ ಓಡಾಟ ತುಂಬಾ ಪ್ರಯಾಸಕರವಾಗಿದೆ.