ಕೇಂದ್ರದಿಂದ ರಾಜ್ಯದ ಪಾಲು ಕೇಳಲು ಬಿಜೆಪಿಯವರಿಗೆ ನಾಲಿಗೆ ಇಲ್ಲದಿದ್ದರೆ ಸರ್ವ ಪಕ್ಷಗಳ ತಂಡ ಒಯ್ಯಲಿ: ಯು.ಟಿ.ಖಾದರ್

Prasthutha|

ಮಂಗಳೂರು: ಇಷ್ಟೊಂದು ಅತಿವೃಷ್ಟಿಯಿಂದ ರಾಜ್ಯದಲ್ಲಿ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಹಾನಿ ಆಗಿದ್ದರೂ ಸರಕಾರವಾಗಲಿ, ಉಸ್ತುವಾರಿ ಸಚಿವರಾಗಲಿ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿಲ್ಲ. ಕೇಂದ್ರದಿಂದ ಪರಿಹಾರಕ್ಕೂ ಮನವಿ ಮಾಡಿಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ ಮತ್ತು ಜನರೂ ಈ ಸರಕಾರದ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಯು. ಟಿ. ಖಾದರ್ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಗೃಹ ಸಚಿವರು ರಾಜ್ಯಕ್ಕೆ ಬಂದಾಗ ಅವರ ಪಕ್ಷದ ಬಗ್ಗೆ ಮಾತನಾಡಿದರು. ತೀವ್ರ ಮಳೆಯಿಂದ ಆದ ಹಾನಿಯ ಬಗ್ಗೆ ಮಾತನಾಡಿಲ್ಲ. ಗೃಹ ಸಚಿವರ ಕೈಯಲ್ಲೇ ವಿಪತ್ತು ಪರಿಹಾರ ನಿಧಿ ಇದೆ. ಅವರು ಬಂದಾಗಲೂ ಅವರಿಂದ ಪರಿಹಾರ ಕೇಳದಿದ್ದರೆ ಹೇಗೆ? ಈ ಸರಕಾರ 25 ಸಂಸದರು ಸುಮ್ಮನೆ ಕುಳಿತು ಕೊಳ್ಳಲು ಆಯ್ಕೆಯಾಗಿದ್ದಾರೆಯೇ ಎಂದು ಖಾದರ್ ಕಿಡಿಕಾರಿದರು.

ಕೇಂದ್ರದಿಂದ ರಾಜ್ಯದ ಪಾಲು ಕೇಳಲು ಇವರಿಗೆ ನಾಲಿಗೆ ಇಲ್ಲದಿದ್ದರೆ ಸರ್ವ ಪಕ್ಷಗಳ ತಂಡ ಒಯ್ಯಲಿ. ನಾವು ಕೇಳುತ್ತೇವೆ. ಸುಳ್ಯ ಸಂಪಾಜೆ ಪ್ರದೇಶದಲ್ಲಿ ಭಾರೀ ಹಾನಿ ಆಗಿದೆ. ನಮ್ಮ ಮೈತ್ರಿ ಸರಕಾರ ಇದ್ದಾಗ ಎಲ್ಲರಿಗೂ ಪರಿಹಾರವನ್ನು ನೀಡಿದ್ದೇವೆ. ಬಿಜೆಪಿ ಸರಕಾರದ ಕೈಲಾಗತನ ಸರಿಯಲ್ಲ ಎಂದು ಖಾದರ್ ಹೇಳಿದರು.

- Advertisement -

ಕೆಲವು ಜನರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಶಾಂತಿ ಹೆಚ್ಚಿದೆ. ವಾಹನಗಳಲ್ಲಿ ತುರ್ತು ಹೋಗುವ ವೈದ್ಯರು ಸೇರಿ ಹಲವರನ್ನು ತಡೆದು ನಿಲ್ಲಿಸಿ ಅವರು ಕೆಲಸ ಮಾಡದಂತೆ ತಡೆಯುವುದು ಯಾವ ನೀತಿ. ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆ ಆಗದಂತೆ ಬಿಜೆಪಿ ನೀತಿ ಇದೆ. ಬಿಜೆಪಿ ಸರಕಾರವು 3% ಸಮಾಜ ವಿರೋಧಿ ಶಕ್ತಿಗಳಿಗೆ ಹೆದರಿ 97% ಜನರಿಗೆ ತೊಂದರೆ ಕೊಟ್ಟರೆ ಹೇಗೆ? ಬಿಜೆಪಿ ಸರಕಾರವು ಜಿಲ್ಲೆಯ ಜನಜೀವನವು ಸಹಜವಾಗಿ ಕಾರ್ಯ ಎಸಗುವಂತೆ ಆಡಳಿತ ನೀಡಲು ಒತ್ತಾಯಿಸುವುದಾಗಿ ಖಾದರ್ ಹೇಳಿದರು.

ನಮ್ಮ ಸರಕಾರವು ಇದ್ದಾಗ ಮಾಡಿದ ನಿಯಮದಂತೆ ತಾತ್ಕಾಲಿಕ ರೂ. 10,000 ಪರಿಹಾರದಲ್ಲೇ ಎಲ್ಲ ಮುಗಿಸಲು ನೋಡುತ್ತಿದ್ದಾರೆ. ಅದು ಸರಿಯಲ್ಲ. ನಾವು ಶರತ್ ಮಡಿವಾಳನಿಂದ ಹಿಡಿದು, ಗಲಭೆಯಲ್ಲಿ ಸತ್ತವರಿಗೆ ಜಾತಿ, ಮತಭೇದ ನೋಡದೆ ಸಮಾನ ಆದ್ಯತೆಯೊಡನೆ ಪರಿಹಾರ ನೀಡಿದ್ದೇವೆ. ಫಾಝಿಲ್ ಮನೆಗೆ ಬರುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಬಂದಾಗ ಪರಿಹಾರ ಕೇಳೋಣ ಎಂದೂ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಶಾಹುಲ್ ಹಮೀದ್, ಮೋನಾಕ, ಫಾರೂಕ್, ಗೋಪಾಲ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp