ಬೆಂಗಳೂರು: ನಗರಾಭಿವೃದ್ಧಿ ಇಲಾಖೆ ಪ್ರಕಟಿಸಿರುವ ಮೀಸಲಾತಿ ಕಾನೂನು ಗೈಡ್ ಲೈನ್ಸ್ ಪ್ರಕಾರ ಇಲ್ಲ. ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಬಿಜೆಪಿ ಶಾಸಕರು, ಸಂಸದರು, ಮುಖಂಡರು ಕೇಶವಕೃಪದಲ್ಲಿ ಕೂತು ಮನಬಂದಂತೆ ನೀಡಲಾಗಿರುವ ಮೀಸಲಾತಿಯನ್ನು ಕೂಡಲೇ ಹಿಂಪಡೆಯದಿದ್ದರೆ ಕಾನೂನು ಹೋರಾಟ ಮಾಡುವುದಾಗಿ ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವ ಬಿ.ಝಡ್ ಝಮೀರ್ ಅಹ್ಮದ್ ಖಾನ್ ಹೇಳಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆ ಮೀಸಲಾತಿ ಪ್ರಕಟಿಸಿರುವುದನ್ನು ವಿರೋಧಿಸಿ ಇಂದು ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರು ವಿಕಾಸ ಸೌಧದ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ, ಸರ್ಕಾರದ ವಿರುದ್ಧ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿಜೆಪಿ ಶಾಸಕರು, ಸಂಸದರು, ಮುಖಂಡರು, ಕೇಶವಕೃಪದಲ್ಲಿ ಕೂತು ನೀಡಲಾಗಿರುವ ಮೀಸಲಾತಿಯು ಕಾನೂನು ಗೈಡ್ ಲೈನ್ಸ್ ಪ್ರಕಾರ ಇಲ್ಲ. ಮನಸ್ಸಿಗೆ ಬಂದಂತೆ ಡಿ ಲಿಮಿಟೇಷನ್ ಹಾಕಲಾಗಿದ್ದು, ಅಗತ್ಯವಿಲ್ಲದ ಕಡೆ ಬಿಸಿಬಿ ಹಾಕಿದ್ದಾರೆ. ಬೇಕಾಬಿಟ್ಟಿ ರಿಸರ್ವೇಷನ್ ಮಾಡಿದ್ದಾರೆ. ಮಹಿಳಾ ಮೀಸಲಾತಿ ನೀಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಕಾಂಗ್ರೆಸ್ ನಾಯಕರಿರುವ ಕಡೆ ಮಾತ್ರ, ಬರೀ ಮಹಿಳಾ ಮೀಸಲಾತಿ ಹಾಕಲಾಗಿದೆ. ಎಲ್ಲಿ ಹಿಂದುಳಿದವರಿಲ್ಲವೋ, ಅಲ್ಲಿ ಮೀಸಲಾತಿ ನೀಡಿದ್ದಾರೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಆರೋಪಿಸಿದರು.
ಪ್ರಸ್ತುತ ಪ್ರಕಟಿಸಿರುವ ಮೀಸಲಾತಿ ವಾಪಸ್ ಪಡೆದು, ಕಾನೂನು ಗೈಡ್ ಲೈನ್ಸ್ ಪ್ರಕಾರ ಮೀಸಲಾತಿ ಪ್ರಕಟಿಸಿ. ಸುಸೂತ್ರವಾಗಿ ಚುನಾವಣೆ ನಡೆಯಬೇಕೆಂಬುದಷ್ಟೇ ನಮ್ಮೆಲ್ಲರ ಉದ್ದೇಶ. ದುರುದ್ದೇಶ ಪ್ರೇರಿತ ಮೀಸಲಾತಿಯನ್ನು ತಕ್ಷಣ ಹಿಂಪಡೆಯದಿದ್ದರೆ, ನಾವು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸುತ್ತೇವೆ. ಅಷ್ಟೇ ಅಲ್ಲ, ಕಾನೂನು ಹೋರಾಟವನ್ನು ಮಾಡುತ್ತೇವೆ ಎಂದು ಝಮೀರ್ ಅಹ್ಮದ್ ಖಾನ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನನ್ನ ಕ್ಷೇತ್ರದಲ್ಲಿ 6ಕ್ಕೆ 6 ಮಹಿಳಾ ಮೀಸಲಾತಿ ಮಾಡಿದ್ದಾರೆ. ಆಜಾದ್ ನಗರದಲ್ಲಿ ಎಸ್.ಟಿ ಜನಸಂಖ್ಯೆ 350ರಿಂದ 400 ಜನರಿದ್ದು, ಅಲ್ಲಿ ಎಸ್.ಟಿ ಮೀಸಲಾತಿ ನೀಡಿದ್ದಾರೆ. ವಾರ್ಡ್ ಮರುವಿಂಗಡಣೆಯಲ್ಲಿ ಅಧ್ವಾನ ಮಾಡಿದ್ದಾರೆ. ಚಾಮರಾಜಪೇಟೆ ಭಾಗವನ್ನು ಜಾಲಿ ಮೊಹಲ್ಲಾಗೆ, ಅಲ್ಲಿನ ಭಾಗವನ್ನು ಸಿಟಿ ಮಾರುಕಟ್ಟೆ ಸೇರಿಸಿದ್ದಾರೆ. ಕಾಂಗ್ರೆಸ್ ನವರು ಎಲ್ಲೂ ಗೆಲ್ಲದಂತೆ ಮರುವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಗೆಲ್ಲಲಿದೆ ಎಂಬ ಭಯಕ್ಕೆ ಈ ರೀತಿ ಮಾಡಿದ್ದಾರೆ ಕಿಡಿಕಾರಿದರು.
ಶಾಸಕ ರಿಝ್ವಾನ್ ಅರ್ಷದ್ ಮಾತನಾಡಿ, ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ನಗರದ ಹಿತದೃಷ್ಟಿಯಲ್ಲಿ ಮಾಡಿಲ್ಲ. ಅವರ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಮಾಡಿರುವ ಪ್ರಕ್ರಿಯೆ. ಇದರಿಂದ ಬೆಂಗಳೂರಿಗೆ ಒಳ್ಳೆಯದು ಆಗಲ್ಲ. ಮಾನದಂಡ, ಕಾನೂನು ಉಲ್ಲಂಘಿಸಿ ಈ ಪ್ರಕ್ರಿಯೆ ಮಾಡಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರ ಹಾಗೂ ಕಾಂಗ್ರೆಸ್ ಶಾಸಕರ ಕ್ಷೇತ್ರ ಹೋಲಿಕೆ ಮಾಡಿ ನೋಡಿ. 19 ಸಾವಿರ ಮತವಿರುವ ಒಂದು ವಾರ್ಡ್ ಸೃಷ್ಟಿಸಿದರೆ, ಅದರ ಪಕ್ಕದಲ್ಲಿ 45 ಸಾವಿರ ಮತವಿರುವ ವಾರ್ಡ್ ಮಾಡಲಾಗಿದೆ ಎಂದು ಹೇಳಿದರು.
ಇವರ ವೆಬ್ ಸೈಟ್ ನಲ್ಲಿ ಜನಸಂಖ್ಯೆಯನ್ನು ತಪ್ಪಾಗಿ ತೋರಿಸಲಾಗಿದೆ. 45 ಸಾವಿರ ಮತವಿದ್ದರೂ 37 ಸಾವಿರ ಜನಸಂಖ್ಯೆ ಇದೆ ಎಂದು ತೋರಿಸಲಾಗಿದೆ. ಆಯಾ ಜನರಿಗೆ ಪ್ರತಿನಿಧಿಗಳು ಸಿಗಬಾರದು ಎಂದು ಈ ರೀತಿ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ವಾರ್ಡ್ ಕಡಿಮೆ ಮಾಡಲಾಗಿದೆ. ನಮ್ಮ ಕ್ಷೇತ್ರದಲ್ಲಿ 39 ಸಾವಿರ ಜನಸಂಖ್ಯೆ ಇದ್ದರೆ, ಬಿಜೆಪಿ ಕ್ಷೇತ್ರಗಳಲ್ಲಿ 30 ಸಾವಿರ ಜನಸಂಖ್ಯೆ ಇಟ್ಟುಕೊಳ್ಳಲಾಗಿದೆ. ವೆಬ್ ಸೈಟ್ ನಲ್ಲಿ ಸುಳ್ಳು ಮಾಹಿತಿ ನೀಡಿ ಜನರ ದಾರಿ ತಪ್ಪಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಸಂಸದ ಡಿ.ಕೆ. ಸುರೇಶ್ ಮಾತನಾಡಿ, ರಾಜ್ಯದ ಎಲ್ಲ ಜನತೆಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು. ಪ್ರಧಾನಿ ನರೇಂದ್ರ ಮೋದಿ ಅವರು ಹಬ್ಬದ ಆಚರಣೆಗೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಮಾಡಿರುವ ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ಮಾಡಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ. ಸಂವಿಧಾನದ ವಿರುದ್ಧ, ಕಾನೂನು ಚೌಕಟ್ಟು ತಿರುಚುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಕೇಶವಕೃಪದಲ್ಲಿ ತೀರ್ಮಾನವಾಗಿ ವಿಕಾಸ ಸೌಧದ ನಗರಾಭಿವೃದ್ಧಿ ಇಲಾಖೆ ಕಚೇರಿಯಲ್ಲಿ ಆದೇಶ ನೀಡಲಾಗಿದೆ. ಹೀಗಾಗಿ ವಿಕಾಸ ಸೌಧದ ನಗರಾಭಿವೃದ್ಧಿ ಇಲಾಖೆ ಕಚೇರಿಯನ್ನು ಬಿಜೆಪಿ ಕಚೆರಿಯನ್ನಾಗಿ ಮಾಡಿಕೊಂಡಿದ್ದು, ಅದಕ್ಕೆ ಎಲ್ಲರೂ ಒಪ್ಪಿದರೆ ಆ ಕಚೇರಿಗೆ ಬಿಜೆಪಿ ಕಚೇರಿ ಎಂದು ನಾಮಫಲಕ ಹಾಕಲಾಗುವುದು ಎಂದು ಹೇಳಿದರು.
ಬಿಜೆಪಿಯು ಸೋಲಿನ ಭೀತಿಯಿಂದ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿ ಮೀಸಲಾತಿ ಪಟ್ಟಿ ಮಾಡಿದೆ. ಆ ಮೂಲಕ ಇಡೀ ಬೆಂಗಳೂರು ನಗರದ ಜನರ ಅವಕಾಶ ವಂಚನೆ ಮಾಡಲು ತೀರ್ಮಾನಿಸಿದೆ. ಇದನ್ನು ಉಗ್ರವಾಗಿ ವಿರೋಧಿಸುತ್ತೇವೆ. ಇದರಲ್ಲಿ ಬೆಂಗಳೂರಿನ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿಗಳ ಕೈವಾಡ ಇದರಲ್ಲಿ ನೇರವಾಗಿದೆ. ಬೆಂಗಳೂರು ಬಿಜೆಪಿ ಶಾಸಕರ ಕೈಗೊಂಬೆಯಾಗಿ ಮುಖ್ಯಮಂತ್ರಿಗಳು ಕಾನೂನು ಉಲ್ಲಂಘಿಸಿ ಮೀಸಲಾತಿ ಆದೇಶ ಹೊರಡಿಸಿದ್ದಾರೆ. 7 ದಿನದಲ್ಲಿ ಗಡವು ನೀಡಿದ್ದರೂ ಇವರು ಕಾಂಗ್ರೆಸ್ ಪ್ರಬಲ ಕ್ಷೇತ್ರಗಳಲ್ಲಿ ಸೋಲಿಸಲು ರಾಜಕೀಯ ಉದ್ದೇಶದಿಂದ ಮೀಸಲಾತಿ ಘೋಷಿಸಿಸಿದ್ದಾರೆ.
ಶಾಸಕ ಕೃಷ್ಣ ಭೈರೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಂಗಳೂರನ್ನು ಪ್ರಪಂಚದ ನಕ್ಷೆಯಲ್ಲಿ ಐಟಿ ರಾಜಧಾನಿ ಉದ್ಯಾನನಗರಿಯಾಗಿ ಮಾಡಿದ್ದೆವು. ಸ್ಟಾರ್ ಅಪ್ ಕ್ಯಾಪಿಟಲ್, ಮೋಸ್ಟ್ ಡೈನಾಮಿಕ್ ಸಿಟಿ ಎಂದು ಮಾಡಿದ್ದೆವು. ಆದರೆ ಇಂದು ಪ್ರಪಂಚದ ರಸ್ತೆಗುಂಟಿ ರಾಜಧಾನಿ ನಗರವಾಗಿದೆ. ಬಿಜೆಪಿ ಸರ್ಕಾರ ಬೆಂಗಳೂರಿಗೆ ಮಾಡಿರುವ ಅನ್ಯಾಯ ರಸ್ತೆಯಲ್ಲಿ ಕಾಣುತ್ತಿದೆ. ನಗರದಲ್ಲಿನ ವಾಹನ ದಟ್ಟಣೆ ಸಮಸ್ಯೆಗೆ ಪರಿಹಾರ ಮಾಡಿಲ್ಲ. ಇವರು ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಹಣ ಮಾಡುತ್ತಿದ್ದಾರೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿ ಹೆಚ್ಚಿನ ನಿರುದ್ಯೋಗ, ಭ್ರಷ್ಟಾಚಾರ ಹೆಚ್ಚಿದೆ. ಇದೆಲ್ಲ ಕಾರಣಕ್ಕೆ ಬಿಜೆಪಿ ನೇರ ಮಾರ್ಗದಲ್ಲಿ ಚುನಾವಣೆ ಮಾಡಿದರೆ ಗೆಲ್ಲುವುದಿಲ್ಲ ಎಂದು ಕಾನೂನು ಬಾಹಿರವಾಗಿ ತಮಗೆ ಇಚ್ಛಿಸಿದಂತೆ ವಾರ್ಡ್ ಮೀಸಲಾತಿ ಮಾಡಲಾಗಿದೆ. ಕಾಂಗ್ರೆಸ್ ಪ್ರಬಲ ಅಭ್ಯರ್ಥಿಗಳಿಗೆ ಅವಕಾಶ ತಪ್ಪಿಸಿದ್ದಾರೆ. ಇದು ಬಿಜೆಪಿ ಹತಾಶೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.
ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, ಬಿಜೆಪಿ ಬಂದಾಗಿನಿಂದ ಅನುದಾನ, ಕೆಲಸ ಕಾಮಗಾರಿಯವರೆಗೆ, ಎಲ್ಲದರಲ್ಲೂ ತಾರತಮ್ಯ ಮಾಡಿಕೊಂಡು ಬಂದಿದ್ದಾರೆ. ಸಿದ್ದರಾಮಯ್ಯ ಅವರ ಕಾಲದಲ್ಲಿನ ಬೆಂಗಳೂರಿನ ಸಮಗ್ರ ಅಭಿವೃದ್ಧಿ ಯೋಜನೆ ಹಾಗೂ ಮೈತ್ರಿ ಸರ್ಕಾರದ ಯೋಜನೆ ತಡೆದು, ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡಿದ್ದಾರೆ. ಬೆಂಗಳೂರು ನಗರಕ್ಕೆ ಬದಲಾವಣೆ ತರದೇ ಕಾಯ್ದೆ ತಂದರು. ಕಾಯ್ದೆ ಬಂದು ಒಂದು ವರ್ಷ ಆಗಿದ್ದರೂ ಮೀಸಲಾತಿ, ವಾರ್ಡ್ ಮರುವಿಂಗಡಣೆ ವಿಚಾರದಲ್ಲಿ ಗೊಂದಲ ಮೂಡಿಸಿದ್ದಾರೆ. ಬಿಜೆಪಿ ಶಾಸಕರ ಕ್ಷೇತ್ರದಲ್ಲಿ ಅವರ ಅಭ್ಯರ್ಥಿಗಳಿಗೆ ಅನುಕೂಲ ಮಾಡಲು ಈ ರೀತಿ ಮಾಡಿದ್ದಾರೆ. ಕಾಂಗ್ರೆಸ್ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಗಳು ಗೆಲ್ಲಬಾರದು ಎಂಬ ಕಾರಣಕ್ಕೆ ಮಾಡಿದ್ದಾರೆ. ಎಲ್ಲ ವರ್ಗದ ಜನರಿಗೆ ಪ್ರಾತಿನಿಧ್ಯ ಸಿಗಬೇಕು ಎಂದು ವಾರ್ಡ್ ಮರುವಿಂಗಡಣೆ ಹಾಗೂ ಮೀಸಲಾತಿ ನೀಡಲಾಗುವುದು. ಬಿಜೆಪಿ ಕ್ಷೇತ್ರದಲ್ಲಿ ಬಿಸಿಬಿ ಇದೆ. ಎಲ್ಲಿ ಸಾಮಾನ್ಯ ವರ್ಗ ಹೆಚ್ಚಿದೆ ಅಲ್ಲಿ ಬಿಸಿಬಿ ನೀಡಿದ್ದಾರೆ. ಬಿಜೆಪಿ ಕ್ಷೇತ್ರದಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ಚಿಕ್ಕಪೇಟೆಯಲ್ಲಿ ಮಹಿಳೆಯರಿಗೆ ಮೀಸಲಾತಿ ಇಲ್ಲ, ಗಾಂಧಿ ನಗರದಲ್ಲಿ ಎಲ್ಲ ವಾರ್ಡ್ ಗಳ ಮೀಸಲಾತಿ ಮಹಿಳೆಯರಿಗೆ ನೀಡಿದ್ದಾರೆ ಎಂದು ಹೇಳಿದರು.
ಎಚ್.ಎಂ ರೇವಣ್ಣ ಮಾತನಾಡಿ, ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಪಡೆಯುತ್ತಿದೆ. ಹಿಂದುಳಿದವರಿಗೆ ಮೀಸಲಾತಿ ನೀಡಿದ್ದೇವೆ. ಇಷ್ಟೆಲ್ಲಾ ಮಾಡಿದ ನಂತರ ಜನಪ್ರತಿನಿಧಿಗಳು ನೇರವಾಗಿ ಆಯ್ಕೆಯಾಗ ಬೇಕೆ ಹರತು. ವಾಮಮಾರ್ಗದ ಮೂಲಕ ಅಲ್ಲ. ಇದನ್ನು ನಾವು ಖಂಡಿಸುತ್ತೇವೆ. ಮೀಸಲಾತಿಗಳನ್ನು ಒಂದೇ ಕ್ಷೇತ್ರಗಳಿಗೆ ನೀಡಲಾಗಿದೆ. ಎಸ್ ಸಿ ಮೀಸಲಾತಿಗೆ ಅದರದೇ ಆದ ಮಾನದಂಡಗಳಿವೆ. ಜನಸಂಖ್ಯೆ ಇಲ್ಲದಿದ್ದರೂ ಅಲ್ಲಿ ಮೀಸಲಾತಿ ನೀಡಲಾಗಿದೆ ಎಂದು ಹೇಳಿದರು.