ಕಲಬುರಗಿ: ದರ್ಗಾದಲ್ಲಿ ಸಂದರ್ಶನ ಮಾಡಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುವಾಗ ಕಾರು ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಆರು ಜನ ಮೃತಪಟ್ಟಿದ್ದಾರೆ.
ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅರಕೇರಾ ಬಳಿ ತಡರಾತ್ರಿ ನಡೆದಿದೆ.
ಮುಹಮ್ಮದ್ ವಾಜೀದ್ ಹುಸೇನ್(39), ಮುಹಮ್ಮದ್ ಮಜರ್ ಹುಸೇನ್(79), ನೂರ್ ಜಹಾನ್ ಬೇಗಂ(70), ಹೀನಾ ಬೇಗಂ(30), ಇಮ್ರಾನ್(22) ಮತ್ತು ಉಮೇಜಾ (6ತಿಂಗಳು) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡ ಬಾಲಕ ಮುಹಮ್ಮದ್ ಪಾಝಿಲ್ ಹುಸೇನ್ ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರೆಲ್ಲರೂ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ.
ತೆಲಂಗಾಣದ ಕೊಡಂಗಲ್ ಸಮೀಪದ ದರ್ಗಾದಲ್ಲಿ ಮಗಳ ಜವಳ ಕಾರ್ಯಕ್ರಮ ಮಾಡಿ ಹಟ್ಟಿ ಗ್ರಾಮಕ್ಕೆ ವಾಪಸ್ ಬರುವಾಗ ದುರಂತ ಸಂಭವಿಸಿದೆ.
ಈ ಬಗ್ಗೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.