RSS ಕಚೇರಿ ಮೇಲೆ ರಾಷ್ಟ್ರಧ್ವಜ ಯಾಕಿಲ್ಲ? ಪ್ರತಿಪಕ್ಷಗಳ ಪ್ರಶ್ನೆ

Prasthutha|

ನವದೆಹಲಿ: ಸಾಮಾಜಿಕ ಮಾಧ್ಯಮದ ಪ್ರೊಫೈಲ್‌ ಗಳನ್ನು ರಾಷ್ಟಧ್ವಜವನ್ನು ಹಾಕಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ ಎಸ್‌ ಎಸ್) ಕಚೇರಿ ಮೇಲೆ ಯಾಕೆ ತಿರಂಗ ಹಾರಿಸಿಲ್ಲ ಎಂದು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಪ್ರಶ್ನಿಸಿವೆ.

- Advertisement -

ಡಿಪಿ ಪ್ರೊಫೈಲ್‌ ಗಳನ್ನು ತ್ರಿವರ್ಣ ಧ್ವಜಕ್ಕೆ ಬದಲಾಯಿಸುವಂತೆ ಮೋದಿ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ರಾಜ್ಯಕೀಯ ಪಕ್ಷಗಳ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಆರೆಸ್ಸೆಸ್ ವಿರುದ್ಧ ಹರಿಹಾಯ್ದಿದ್ದಾರೆ.

  ಆರ್‌ ಎಸ್‌ ಎಸ್ ಪ್ರಧಾನ ಮಂತ್ರಿಯ ಮನವಿಯನ್ನು ಪಾಲಿಸಿಲ್ಲ. ಸಂಘಟನೆಯ ಅಧಿಕೃತ ಟ್ವಿಟರ್ ಖಾತೆ ಅಥವಾ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘದ ನಾಯಕರು ಧ್ವಜವನ್ನು ಬದಲಾಯಿಸಲಿಲ್ಲ. ಆರ್‌ ಎಸ್‌ ಎಸ್‌ ನ ಫೇಸ್‌ ಬುಕ್ ಪುಟವೂ ಅದನ್ನು ಬದಲಿಸಿಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ.

- Advertisement -

 ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಟ್ವೀಟ್ ಮಾಡಿ, ಆರ್‌ ಎಸ್‌ ಎಸ್ ಮತ್ತು ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರ ಪ್ರೊಫೈಲ್ ಫೋಟೋಗಳ ಸ್ಕ್ರೀನ್‌ ಶಾಟ್‌ ಗಳನ್ನು ಹಂಚಿಕೊಂಡಿದ್ದಾರೆ.

ಸಂಘ್ ವಾಲೋನ್, ಅಬ್ ತೋ ತಿರಂಗ ಕೋ ಅಪ್ನಾ ಲೋ (ಸಂಘದ ಜನರು, ಕನಿಷ್ಠ ಈಗಲಾದರೂ ತ್ರಿವರ್ಣ ಧ್ವಜವನ್ನು ಅಳವಡಿಸಿಕೊಳ್ಳಿ ) ಎಂದು ಅವರು ಕುಟುಕಿದ್ದಾರೆ.

 ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಟ್ವೀಟ್ ಮಾಡಿ, ನಮ್ಮ ನಾಯಕ ನೆಹರೂ ಅವರ ಡಿಪಿಯನ್ನು ನಾವು ಅವರ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದಿರುವ ಪೋಟೋ ಹಾಕಿದ್ದೇವೆ. ಆದರೆ ಪ್ರಧಾನಿಯವರ ಸಂದೇಶ ಅವರ ಕುಟುಂಬಕ್ಕೆ(ಆರ್ ಎಸ್ ಎಸ್) ತಲುಪಿಲ್ಲ ಅನ್ನಿಸುತ್ತಿದೆ. 52 ವರ್ಷಗಳಿಂದ ನಾಗಪುರದ ತಮ್ಮ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ಮಾಡದವರು ಅವರು ಪ್ರಧಾನಿಯ ಮಾತನ್ನು ಪಾಲಿಸುತ್ತಾರೆಯೇ? ಎಂದು ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನಾಯಕರು ಮಾತ್ರವಲ್ಲದೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ ಎಸ್) ಕೂಡ ಆರ್‌ ಎಸ್‌ ಎಸ್ ಮತ್ತು ಬಿಜೆಪಿ ದಶಕಗಳಿಂದ ಭಾರತೀಯ ಧ್ವಜದ ಮಹತ್ವವನ್ನು ನಿರ್ಲಕ್ಷಿಸಿದ್ದಕ್ಕಾಗಿ ಕಟುವಾಗಿ ಟೀಕಿಸಿದೆ.

ಟಿ ಆರ್‌ ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಮತ್ತು ತೆಲಂಗಾಣ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ವೈ ಸತೀಶ್ ರೆಡ್ಡಿ ಟ್ವೀಟ್ ಮಾಡಿ, 52 ವರ್ಷಗಳಿಂದ ಆರ್‌ ಎಸ್‌ ಎಸ್ ಭಾರತೀಯ ಧ್ವಜವನ್ನು ಸ್ವೀಕರಿಸಲಿಲ್ಲ ಮತ್ತು 2002 ರವರೆಗೆ ಭಾರತದ ಧ್ವಜವನ್ನು ಹಾರಿಸಲಿಲ್ಲ. ಈಗ ಆರ್‌ ಎಸ್‌ ಎಸ್ ಮತ್ತು ಬಿಜೆಪಿ ನಮಗೆ ಹರ್ ಘರ್ ತಿರಂಗ, ದೇಶಭಕ್ತಿ ಮತ್ತು ರಾಷ್ಟ್ರೀಯತೆಯ ಕುರಿತು ಉಪನ್ಯಾಸ ನೀಡುತ್ತಿವೆ. #ShameOnBJP” ಎಂದು ಟೀಕಾಪ್ರಹಾರ ನಡೆಸಿದ್ದಾರೆ.



Join Whatsapp