ನವದೆಹಲಿ: ತಮ್ಮನ್ನು ತಾವು ಸೂಫಿಗಳೆಂದು ಕರೆಸಿಕೊಳ್ಳುವ ಆರೆಸ್ಸೆಸ್ ಪರ ಗುಂಪುಗಳು ದಿಲ್ಲಿಯಲ್ಲಿ ಆಯೋಜಿಸಿದ್ದ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಜರಿದ್ದ ಕಾರ್ಯಕ್ರಮದಲ್ಲಿ ಸಂಘಟನೆಯ ವಿರುದ್ಧ ಕೈಗೊಂಡಿರುವ ನಿರ್ಣಯವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಸಾಕಿಬ್ ತಳ್ಳಿ ಹಾಕಿದ್ದಾರೆ.
ತಥಾಕಥಿತ ಅಂತರ್ ಧರ್ಮೀಯ ಕಾರ್ಯಕ್ರಮದಲ್ಲಿ, ಭಾರತೀಯ ಮುಸ್ಲಿಮ್ ಸಮುದಾಯವನ್ನು ಕಳಂಕಿತಗೊಳಿಸಿದ ಹೊರತಾಗಿ ಧರ್ಮ ಗುರುಗಳ ನಡುವೆ ಯಾವುದೇ ಪ್ರಾಮಾಣಿಕ ಚರ್ಚೆ ನಡೆದಿಲ್ಲ. ಈ ಸಭೆಯಲ್ಲಿ ಪಾಪ್ಯುಲರ್ ಫ್ರಂಟನ್ನು ನಿಷೇಧಿಸುವ ಆಗ್ರಹ ಕೇಳಿ ಬಂದಿದೆ ಎಂದು ಹೇಳಲಾಗುತ್ತಿದೆ. ಇವರು ಮೂರ್ಖತನದ ರಾಜಕೀಯ ಲಾಭಕ್ಕಾಗಿ ಸ್ವತಃ ತಮ್ಮನ್ನು ಸೂಫಿಗಳೆಂದು ಕರೆಸಿಕೊಳ್ಳುವ ಸುಳ್ಳುಗಾರರು ಮತ್ತು ಆಯೋಗ್ಯ ಜನರಾಗಿದ್ದಾರೆ. ಇವರ ಅಭಿಪ್ರಾಯಗಳಿಗೆ ಇವರ ನೆರಳು ಕೂಡ ಕ್ಯಾರೇ ಅನ್ನುತ್ತಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತಿದ್ದಾರೆ. ಇನ್ನು ಇವರನ್ನು ಮುಸ್ಲಿಮ್ ಸಮುದಾಯ ಒಪ್ಪಿಕೊಳ್ಳುದಂತೂ ದೂರದ ಮಾತಾಗಿದೆ ಎಂದು ಮುಹಮ್ಮದ್ ಸಾಕಿಬ್ ಹೇಳಿದ್ದಾರೆ.
ಈ ಒಟ್ಟು ಕಾರ್ಯಕ್ರಮವನ್ನು ಜನರನ್ನು ದಾರಿ ತಪ್ಪಿಸುವ ಗುಪ್ತ ಉದ್ದೇಶಗಳೊಂದಿಗೆ ಮುಸ್ಲಿಮ್ ಸಮುದಾಯ ಮತ್ತು ಸಂಘಟನೆಯನ್ನು ತೇಜೋವಧೆಗೊಳಿಸುವ ನಿಟ್ಟಿನಲ್ಲಿ ಫ್ಯಾಶಿಸ್ಟ್ ಶಕ್ತಿಗಳ ಪ್ರಾಯೋಜಕತ್ವದೊಂದಿಗೆ ಹಮ್ಮಿಕೊಳ್ಳಲಾಗಿತ್ತು ಎಂದು ಅನಿಸುತ್ತಿದೆ. ಈ ರೀತಿಯ ಕಾರ್ಯಕ್ರಮಗಳ ಹಿಂದೆ ಯಾವ ರೀತಿಯ ರಾಜಕೀಯ ನಡೆಯುತ್ತಿದೆ ಎಂಬುದನ್ನು ಮುಸ್ಲಿಮರು ಚೆನ್ನಾಗಿ ಅರಿತಿದ್ದಾರೆ. ಒಂದು ವೇಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಮುಸ್ಲಿಮರ ಸಮಸ್ಯೆಗಳ ಬಗ್ಗೆ ನಿಜವಾಗಿಯೂ ಕಳವಳ ಹೊಂದಿದ್ದರೆ, ಅವರು ಈ ಮೊದಲೇ ಜನರ ಮಧ್ಯೆ ಕೆಲಸ ಮಾಡುತ್ತಿರುವ ನೈಜ ಮುಸ್ಲಿಮ್ ನಾಯಕರು ಮತ್ತು ಸಂಘಟನೆಗಳ ಮಾತಿನ ಕಡೆಗೆ ಗಮನ ಹರಿಸಬೇಕಾಗಿದೆ. ಪ್ರಸಕ್ತ ಸನ್ನಿವೇಶದಲ್ಲಿ, ಮೊತ್ತ ಮೊದಲು ಕೈಗೊಳ್ಳಬೇಕಾದದ್ದು, ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಪಡಿಸುವ ಹಿಂದುತ್ವ ಭಯೋತ್ಪಾದನೆಯನ್ನು ನಿಗ್ರಹಿಸಬೇಕಾಗಿರುವುದು. ಅದರೊಂದಿಗೆ ಅಲ್ಪಸಂಖ್ಯಾತರ ಸಂಘಟನೆಗಳನ್ನು ಹಾಗೂ ನಾಯಕರನ್ನು ಗುರಿಪಡಿಸಲು ಸರಕಾರಿ ಸಂಸ್ಥೆಗಳ ಬಳಕೆ ಮಾಡುವುದನ್ನು ನಿಲ್ಲಿಸಬೇಕಾಗಿರುವುದು ಅದರ ಸಾಂವಿಧಾನಿಕ ಹಾಗೂ ಕಾನೂನು ಜವಾಬ್ದಾರಿಯಾಗಿದೆ ಎಂದೂ ಮುಹಮ್ಮದ್ ಸಾಕಿಬ್ ಬಿಜೆಪಿ ಸರಕಾರಕ್ಕೆ ನೆನಪಿಸಿದ್ದಾರೆ.