ಶಿವಮೊಗ್ಗ: ಮುಹಮ್ಮದ್ ಫಾಝಿಲ್ ಮತ್ತು ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ತನಿಖೆಯ ವಿಚಾರದಲ್ಲಿ ಸರ್ಕಾರ ತಾರತಮ್ಯ ನಡೆಸುತ್ತಿದೆ ಎಂದು ಆರೋಪಿಸುತ್ತಿರುವ ವಿರೋಧ ಪಕ್ಷಗಳ ಆರೋಪ ಸುಳ್ಳು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಈಗಿರುವ ಮಾಹಿತಿ ಪ್ರಕಾರ ಪ್ರವೀಣ್ ಕೊಲೆ ಪ್ರಕರಣದ ಆರೋಪಿಗಳಿಗೆ ಎರಡು ರಾಜ್ಯಗಳ (ಕರ್ನಾಟಕ, ಕೇರಳ) ನಂಟಿದೆ ಎನ್ನಲಾಗಿರುವುದರಿಂದ ತನಿಖೆಯ ಹೊಣೆ ಎನ್ ಐಎಗೆ ಒಪ್ಪಿಸಿರುವುದು. ಫಾಝಿಲ್ ಕೊಲೆ ಪ್ರಕರಣದ ತನಿಖೆ ಪ್ರಾಥಮಿಕ ಹಂತದಲ್ಲಿದೆ. ಪ್ರಕರಣದ ಹಿನ್ನೆಲೆ ಅರಿಯದೇ ಎನ್ ಐಎಗೆ ಕೊಡಲು ಆಗುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಚಿವರು ತಿಳಿಸಿದರು.
ಸಾವಿಗೆ ಸಾವು ಪರಿಹಾರ ಎಂಬುದು ನಮ್ಮ ನಂಬಿಕೆ ಅಲ್ಲ. ಯಾವುದೇ ವ್ಯಕ್ತಿ ಸತ್ತಾಗ ಮಾನಸಿಕವಾಗಿ ಹಾಗೆ ಅನ್ನಿಸುತ್ತದೆ. ಅದು ಸಹಜ. ಪ್ರಾಣ ತೆಗೆಯುವುದು ರಕ್ತ ಹರಿಸುವುದು ಹುಡುಗಾಟಿಕೆಯ ಮಾತಲ್ಲ. ಅದನ್ನು ನಾವು ನಿಲ್ಲಿಸುತ್ತೇವೆ ಎಂದರು.
ಕೊಲೆ ಪ್ರಕರಣಗಳ ತ್ವರಿತ ವಿಚಾರಣೆಗೆ ನೆರವಾಗಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡುತ್ತಿದ್ದು, ಆದ್ಯತೆಯ ಮೇರೆಗೆ ಪ್ರಕರಣಗಳನ್ನು ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಮನವಿ ಮಾಡಲಾಗುವುದು. ಮೇಲ್ವಿಚಾರಣೆಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಅವರು ಹೇಳಿದರು.