ಕೋಮುದ್ವೇಷದಿಂದ ಕರಾವಳಿಯಲ್ಲಿ ಮೂವರ ಹತ್ಯೆ: ಸಂತಾಪ ಸೂಚಿಸುವುದರಲ್ಲೂ ಡಿ.ಕೆ.ಶಿವಕುಮಾರ್ ರಿಂದ ತಾರತಮ್ಯ!

Prasthutha|

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದಿಂದ ನಡೆದ ಮೂರು ಹತ್ಯೆ ವಿಷಯದಲ್ಲಿ ಸರ್ಕಾರ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾರತಮ್ಯ ನೀತಿ ಅನುಸರಿಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಇದೀಗ ವಿರೋಧ ಪಕ್ಷ ಕಾಂಗ್ರೆಸ್ ಅಧ್ಯಕ್ಷರು ಕೂಡ ಸಂತಾಪ ಸೂಚಿಸುವ ವಿಷಯದಲ್ಲೂ ತಾರತಮ್ಯವೆಸಗಿದ್ದು ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

- Advertisement -

ಸಂಘಪರಿವಾರದ ಕಾರ್ಯಕರ್ತರಿಂದ ಮಸೂದ್ ಹತ್ಯೆಯಾದಾಗ ಮೌನವಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಟ್ವಿಟ್ಟರ್ ಮತ್ತು ಫೇಸ್ ಬುಕ್ ಖಾತೆಗಳು, ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಸರಣಿ ಟ್ವೀಟ್ ಸುರಿಮಳೆಯಾಗಿದ್ದವು.

ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ತಾಲೂಕಿನ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರು ಭೀಕರವಾಗಿ ಹತ್ಯೆಗೀಡಾಗಿರುವುದು ಬೇಸರದ ಸಂಗತಿ. ಅವರ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ಸಂತಾಪಗಳು. ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಪೊಲೀಸರು ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ ಎಂದು ಡಿಕೆ ಶಿವಕುಮಾರ್ ಅವರು ಪ್ರವೀಣ್ ಅವರ ಭಾವಚಿತ್ರ ಲಗತ್ತಿಸಿ ಟ್ವಿಟ್ ಮಾಡಿದ್ದರು.

- Advertisement -

ಅದಾದ  ಬಳಿಕ ಪ್ರವೀಣ್ ಅವರ ಮೃತದೇಹದ ಜಾಥಾದ ವೇಳೆ ನಡೆದ ಕಲ್ಲು ತೂರಾಟ ಮತ್ತು ದಾಂಧಲೆಯನ್ನು ಪ್ರಸ್ತಾಪಿಸಿ, ಡಿಕೆ ಶಿವಕುಮಾರ್ ಟ್ವೀಟ್ ಮಾಡಿ, ಬಿಜೆಪಿ ಕಾರ್ಯಕರ್ತರ ದಾಂಧಲೆ ಮತ್ತು ಪೊಲೀಸ್ ಅಧಿಕಾರಿಗಳ ವರ್ಗಾವಣೆಯನ್ನು ಖಂಡಿಸಿದ್ದರು.

ಆದರೆ ಪ್ರವೀಣ್ ಹತ್ಯೆಗೀಡಾದ ಅದೇ ಪ್ರದೇಶದಲ್ಲಿ ಮಸೂದ್ ಎಂಬ ಮುಸ್ಲಿಮ್ ಯುವಕ ಹತ್ಯೆಯಾಗಿದ್ದರೂ ಡಿ.ಕೆ.ಶಿವಕುಮಾರ್ ಒಂದೇ ಒಂದು ಟ್ವೀಟ್ ಆಗಲೀ, ಹೇಳಿಕೆಯಾಗಲೀ ನೀಡಿಲ್ಲ ಎಂದು ಸ್ವತಃ ಕಾಂಗ್ರೆಸ್ ಪಕ್ಷದಲ್ಲಿರುವ ಅಲ್ಪಸಂಖ್ಯಾತ ನಾಯಕರೇ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಾದ ಬಳಿಕ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಮುಸ್ಲಿಮ್ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದಾಗಲೂ ಶಿವಕುಮಾರ್ ಸಂತ್ರಸ್ತ ಕುಟುಂಬಕ್ಕೆ ಸಂತಾಪ ಸೂಚಿಸುವುದಾಗಲೀ, ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸುವುದಾಗಲೀ ಮಾಡಿಲ್ಲ. ಇದು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ. ಹೀಗಾದರೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಏನಿದೆ ವ್ಯತ್ಯಾಸ ಎಂದು ಕಾಂಗ್ರೆಸ್ ಕಾರ್ಯಕರ್ತರೇ ಪ್ರಶ್ನಿಸಿದ್ದಾರೆ.

ಜಾತ್ಯತೀತ ಪಕ್ಷವೊಂದರ ಮುಖ್ಯಸ್ಥರು ಈ ರೀತಿಯ ತಾರತಮ್ಯ ನಿಲುವು ಅನುಸರಿಸಿದರೆ ಹೇಗೆ? ರಾಜಕೀಯ ನಾಯಕರು   ಸಂತ್ರಸ್ತ ಕುಟುಂಬಕ್ಕೆ ಸಂತಾಪ ಸೂಚಿಸುವುದರಲ್ಲೂ ಕೋಮು ನೀತಿ ತೋರುವುದು ಏಕೆ ಎಂದು ಅವರು ಪ್ರಶ್ನಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿಲ್ಲ, ಅವರು ಯಾವುದಕ್ಕೂ ಟ್ವಿಟ್ ಮಾಡುವುದಿಲ್ಲ ಎಂದಾಗಿದ್ದರೆ ನಮಗೆ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಪ್ರತಿಯೊಂದು ವಿಷಯದಲ್ಲೂ ಟ್ವಿಟ್ ಮಾಡುವ ಅವರಿಗೆ ಮಸೂದ್, ಫಾಝಿಲ್ ಹತ್ಯೆ ಕಾರಣದಿರುವುದು ದುರಂತ ಎಂದು ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.



Join Whatsapp