ಮಂಗಳೂರು : ಶಾಂತಿ ಸಭೆ ಬಹಿಷ್ಕರಿಸಿದ ಮುಸ್ಲಿಂ ಸಂಘಟನೆಗಳು

Prasthutha|

►ಸರ್ಕಾರದ ತಾರತಮ್ಯ ವಿರೋಧಿಸಿ ಬಹಿಷ್ಕಾರ

- Advertisement -

ಮಂಗಳೂರು: ದಕ್ಷಿಣ ಕನ್ನಡದಲ್ಲಿ ನಡೆದ ಮೂರು ಕೊಲೆಗಳು ಜಿಲ್ಲೆಯ ಶಾಂತಿ ಕದಡಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಕರೆದ ಶಾಂತಿ‌ ಸಭೆಯನ್ನು ಮುಸ್ಲಿಂ ಸಮುದಾಯದ ಸಂಘಟನೆಗಳು ಬಹಿಷ್ಕಾರ ಮಾಡಿದೆ.

ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆಯುತ್ತಿರುವ ಶಾಂತಿ ಸಭೆಯಲ್ಲಿ ಮುಸ್ಲಿಂ ಸಮುದಾಯದ ಪ್ರಮುಖ ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಿಲ್ಲ. ಮುಸ್ಲಿಂ ಸೆಂಟ್ರಲ್ ಕಮಿಟಿ, ಮುಸ್ಲಿಂ‌ ಒಕ್ಕೂಟ, ಉಳ್ಳಾಲ ದರ್ಗಾ ಸಮಿತಿ, ಎಸ್‌ಕೆ ಎಸ್‌ಎಸ್‌ಎಫ್, ಜಮಾಅತ್ ಇಸ್ಲಾಂ, ಸಲಫಿ ಮೂವ್‌ವೆಂಟ್, ಪಿಎಫ್‌ಐ ಸೇರಿದಂತೆ ಮುಸ್ಲಿಂ ಸಮುದಾಯದ ಪ್ರಮುಖ ಸಂಘಟನೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗಿಯಾಗದೆ ಶಾಂತಿ ಸಭೆಯನ್ನು  ಬಹಿಷ್ಕರಿಸಿದ್ದಾರೆ.

- Advertisement -

ಶಾಂತಿ ಸಭೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಡಿಸಿ ರಾಜೇಂದ್ರ ಕೆ.ವಿ ಅವರು ಶನಿವಾರ ಬೆಳಗ್ಗೆ 11 ಗಂಟೆಗೆ ಶಾಂತಿ ಸಭೆ ಕರೆದಿದ್ದರು. ಕರಾವಳಿಯಲ್ಲಿ ನಡೆದ ಮೂರು ಕೊಲೆಗಳಿಗೆ ಸಂಬಂಧಿಸಿ ಸ್ವತಃ ಸಿಎಂ ಬೊಮ್ನಾಯಿ ಅವರೇ ತಾರತಮ್ಯ, ಪಕ್ಷಪಾತ ಮಾಡಿದ್ದಾರೆ ಎಂದು ಅಸಮಾಧಾನಗೊಂಡಿರುವ ಮುಸ್ಲಿಂ ಸಮುದಾಯ ಈ ಶಾಂತಿ ಸಭೆಯನ್ನು ಬಹಿಷ್ಕರಿಸಿದ್ದಾರೆ.

ಬಿಜೆಪಿ ಸರ್ಕಾರ ಕೊಲೆಯಾದ ಬಿಜೆಪಿ ಕಾರ್ಯಕರ್ತನ ಕುಟುಂಬಕ್ಕೆ ಮಾತ್ರ ಪರಿಹಾರ ನೀಡಿದೆ. ಕೊಲೆಯಾದ ಇಬ್ಬರು ಮುಸ್ಲಿಂ ಯುವಕರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಇದು ತಾರತಮ್ಯ ಎಂದು ಮುಸ್ಲಿಂ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷಪಾತ ಮಾಡುವ ವ್ಯವಸ್ಥೆ ಶಾಂತಿಯನ್ನು ಭೋದಿಸುವ ಯೋಗ್ಯತೆ ಉಳಿಸಿಕೊಂಡಿಲ್ಲ, ಬಿಜೆಪಿ ಕಾರ್ಯಕರ್ತ ಪ್ರವೀಣ್ ಕೊಲೆಯಾದಾಗ ಮಾತ್ರ ಶಾಂತಿ‌ಕದಡಿದ್ದು, ಇಬ್ಬರು ಮುಸ್ಲಿಮರು ಕೊಲೆಯಾದಾಗ ಜಿಲ್ಲೆಯಲ್ಲಿ ಯಾವುದೇ ಶಾಂತಿ‌ ಕದಡಿಲ್ಲ. ಕೋಮುವಾದಿ ಬಿಜೆಪಿ ಸರ್ಕಾರ ಶಾಂತಿಪ್ರಿಯರಾದ ಮುಸ್ಲಿಮರಿಗೆ ಶಾಂತಿಯ ಪಾಠ ಮಾಡುವ ಅಗತ್ಯವಿಲ್ಲ, ಬೇಕಿದ್ದರೆ ಶಾಂತಿ ಕದಡುವ ಸಂಘಪರಿವಾರಕ್ಕೆ ಶಾಂತಿಯ ಪಾಠ ಮಾಡಲಿ ಎಂದು ಮುಸ್ಲಿಮರು ಮುಖಂಡರು ತಿಳಿಸಿದ್ದಾರೆ.

ಶಾಂತಿ ಸಭೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಎಡಿಜಿಪಿ ಅಲೋಕ್ ಕುಮಾರ್, ಮಂಗಳೂರು ಕಮಿಷನರ್ ಶಶಿಕುಮಾರ್, ದ.ಕ ಎಸ್‌ಪಿ ಸೋನಾವಣೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರಮುಖರು ಹಾಜರಿದ್ದಾರೆ

Join Whatsapp