ಅಲಿಗಢ: 38 ವರ್ಷದ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಲು ಯತ್ನಿಸಿದ ಆರೋಪದಲ್ಲಿ ನಾಲ್ವರು ಮೇಲ್ಜಾತಿ ಯುವಕರ ವಿರುದ್ಧ ಪ್ರಕರಣ ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.
ತನ್ನ ಪುತ್ರರ ಮೇಲೆ ಹಲ್ಲೆ ನಡೆಸುವುದನ್ನು ನಿಲ್ಲಿಸುವಂತೆ ಮನವಿ ಮಾಡಿದಾಗ ಮೇಲ್ಜಾತಿ ಯುವಕರು ದಲಿತ ಮಹಿಳೆಯ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಮಧ್ಯೆ ಕೃಷಿ ಭೂಮಿಗೆ ನೀರು ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದ ಮಾಹಿತಿ ಸಿಕ್ಕಿದಾಗ ನಾನು ನನ್ನ ಮಕ್ಕಳಿಗೆ ಹೊಡೆಯದಂತೆ ಮನವಿ ಮಾಡಿದ್ದು, ಆದರೆ ಅವರು ಇದಕ್ಕೆ ಸೊಪ್ಪು ಹಾಕಿರಲಿಲ್ಲ. ಈ ಮಧ್ಯೆ ಅವರಲ್ಲಿ ಒಬ್ಬ ನನ್ನ ಬಟ್ಟೆಗಳನ್ನು ಹರಿದು ಹಾಕಲು ಪ್ರಯತ್ನಿಸಿದ್ದರು. ಅಲ್ಲದೆ ನನ್ನನ್ನು ಜಾತಿ ನಿಂದನೆ ಮಾಡಿದ್ದರು ಎಂದು ದಲಿತೆ ಮಹಿಳೆ ತಿಳಿಸಿದ್ದಾರೆ.
ಈ ವೇಳೆ ಮೇಲ್ವರ್ಗದ ಯುವಕರು ತಮ್ಮ ಮೇಲೆ ಗುಂಡು ಹಾರಿಸಿದರು. ಆದರೆ ಇದರಿಂದ ನಾನು ತಪ್ಪಿಸಿಕೊಂಡಿದೆ ಎಂದು ದಲಿತ ಮಹಿಳೆ ದೂರಿದ್ದಾರೆ.
ಘರ್ಷಣೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಗ್ರಾಮಾಂತರ ಎಸ್ಪಿ ಪಲಾಶ್ ಬನ್ಸಾಲ್ ತಿಳಿಸಿದ್ದಾರೆ.