ಹೊಸದಿಲ್ಲಿ: ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಹೆತ್ತವರಿಗೆ ಕೀರ್ತಿ ತರಬೇಕು ಎಂಬ ಕನಸು ಇರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಪೈಲಟ್ ಒಬ್ಬರು ವಿಮಾನವನ್ನು ಚಲಾಯಿಸುವ ಮೂಲಕ ಪೋಷಕರನ್ನು ವಿಮಾನದಲ್ಲಿ ಕೂರಿಸಿ ರಾಜಸ್ಥಾನದ ಜೈಪುರಕ್ಕೆ ಬಿಟ್ಟು, ಮನೆಗೆ ಕಳುಹಿಸಿಕೊಟ್ಟಿದ್ದಾರೆ.
ಭಾರತೀಯ ಪೈಲಟ್ ಕಮಲ್ ಕುಮಾರ್ ತನ್ನ ಪೋಷಕರನ್ನು ವಿಮಾನದಲ್ಲಿ ಕೂರಿಸಿ ಜೈಪುರಕ್ಕೆ ಕರೆದುಕೊಂಡು ಹೋಗಿದ್ದು, ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಕುಮಾರ್ “ನಾನು ವಿಮಾನದಲ್ಲಿ ಹಾರಲು ಆರಂಭಿಸಿದಾಗಿನಿಂದ ಈ ದಿನಕ್ಕಾಗಿ ಕಾಯುತ್ತಿದ್ದೆ. ಕೊನೆಗೂ ಆ ದಿನ ಬಂದೇ ಬಿಟ್ಟಿತು. ಇವತ್ತು ನಾನು ನನ್ನ ತಂದೆ ತಾಯಿಯನ್ನು ವಿಮಾನದಲ್ಲಿ ಕರೆದುಕೊಂಡು ಹೋಗಲು ಅವಕಾಶ ಸಿಕ್ಕಿತು” ಎಂದು ಹೇಳಿದ್ದಾರೆ.
ವಿಮಾನ ಹತ್ತಿದ ಪೋಷಕರಿಗೆ ವಿಮಾನ ಚಲಾಯಿಸಲು ಹೊರಟಿರುವುದು ತಮ್ಮ ಮಗ ಎಂಬ ವಿಚಾರ ತಿಳಿದಿರಲಿಲ್ಲ. ವಿಮಾನದ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಪೈಲಟ್ ಧಿರಿಸಿನಲ್ಲಿದ್ದ ತಮ್ಮ ಮಗನನ್ನು ಕಂಡು ಶಾಕ್ ಆಗಿದ್ದಾರೆ.
ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, 2.7 ಮಿಲಿಯನ್ ಗಿಂತಲೂ ಅಧಿಕ ಜನ ವೀಕ್ಷಣೆ ಮಾಡಿದ್ದಾರೆ.