►ಮುಸ್ಲಿಂ ಮಾಲಕತ್ವ ಎಂಬ ಕಾರಣಕ್ಕೆ ಲುಲು ಮಾಲ್ ಅನ್ನು ಗುರಿಯಾಗಿಸಿದ್ದ ಸಂಘಪರಿವಾರ
ಲಕ್ನೋ: ಇತ್ತೀಚೆಗೆ ಉದ್ಘಾಟನೆಗೊಂಡ, ಕೇರಳ ಮೂಲದ ಉದ್ಯಮಿ ಎಂ.ಎ ಯೂಸುಫ್ ಅಲಿಯ ಲುಲು ಮಾಲ್ ನಲ್ಲಿ ಮುಸ್ಲಿಮರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಸಂಘಪರಿವಾರದ ವ್ಯವಸ್ಥಿತ ಷಡ್ಯಂತ್ರಕ್ಕೆ ಮಾಲ್ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.
ಲುಲು ಮಾಲ್ ನಲ್ಲಿ ಉದ್ಯೋಗ ಮತ್ತಿತರ ವಿಚಾರವಾಗಿ ಮುಸ್ಲಿಮರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದು ಸಂಘಪರಿವಾರ ವದಂತಿ ಹರಡಿಸಿತ್ತು. ಈ ಆರೋಪವನ್ನು ತಿರಸ್ಕರಿಸಿದ ಮಾಲ್ ನ ಆಡಳಿತ ಮಂಡಳಿ ‘ನಮ್ಮ ಪೋಷಕ ಸಂಸ್ಥೆಯಾದ ಲುಲು ಗ್ರೂಪ್ ಇಂಟರ್ ನ್ಯಾಷನಲ್ ಸಂಪೂರ್ಣ ವೃತ್ತಿಪರ ಕಂಪೆನಿಯಾಗಿದ್ದು, ನಮ್ಮದು ತಾರತಮ್ಯವಿಲ್ಲದ ವ್ಯವಹಾರವಾಗಿದೆ’ ಎಂದಿದೆ.
‘ನಾವು ಕೌಶಲ್ಯ ಮತ್ತು ಅರ್ಹತೆಯ ಮೇರೆಗೆ ಉದ್ಯೋಗಿಗಳನ್ನು ಆಯ್ಕೆ ಮಾಡುತ್ತೇವೆಯೇ ಹೊರತು ಯಾವುದೇ ಜಾತಿ ಅಥವಾ ಧರ್ಮದ ಆಧಾರದಲ್ಲಿ ಅಲ್ಲ’ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಕೆಲವೊಂದು ಸ್ವಾರ್ಥ ಶಕ್ತಿಗಳು ನಮ್ಮ ಸಂಸ್ಥೆಯನ್ನು ಗುರಿಯಾಗಿಸಿ ಅಪಪ್ರಚಾರ ಮಾಡುತ್ತಿದ್ದು, ನಮ್ಮಲ್ಲಿ 80 ಶೇಕಡಾ ಉದ್ಯೋಗಿಗಳು ಹಿಂದೂಗಳಾಗಿದ್ದು, ಉಳಿದ 20 ಶೇಕಡಾ ಉದ್ಯೋಗಿಗಳು ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರ ಸಮುದಾಯದವರು ಎಂದು ಆಡಳಿತ ಮಂಡಳಿ ತಿಳಿಸಿದೆ.
ಲಕ್ನೋದಲ್ಲಿ ಲುಲು ಮಾಲ್ ಉದ್ಘಾಟನೆಗೊಂಡ ಕೆಲವೇ ದಿನಗಳಲ್ಲಿ ಅಪರಿಚಿತ ಗುಂಪೊಂದು ಮಾಲ್ ನಲ್ಲಿ ನಮಾಝ್ ನಿರ್ವಹಿಸಿದ್ದು, ಆ ಬಳಿಕ ಮಾಲ್ ನಲ್ಲಿ ಧಾರ್ಮಿಕ ಸಂಘರ್ಷ ಶುರುವಾಗಿತ್ತು.