ನವದೆಹಲಿ: ಸರ್ಕಾರಕ್ಕೆ ವಾಕ್ ಸ್ವಾತಂತ್ರ್ಯದ ನಿರಾಕರಣೆ ಬಗ್ಗೆ ಸಲಹೆ ನೀಡಿ. ಸರ್ಕಾರದ ವಿರುದ್ಧ ವಾಕ್ ಸ್ವಾತಂತ್ರ್ಯದ ಹಕ್ಕು ಚಲಾಯಿಸಿದವರ ಬೇಟೆಯಾಡುವುದನ್ನು ನಿಲ್ಲಿಸಿ ಎಂದು ಸರ್ಕಾರವನ್ನು ನಿರ್ದೇಶಿಸುವಂತೆ 72 ಮಾಜಿ ಸರ್ಕಾರಿ ಅಧಿಕಾರಿಗಳು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರಿಗೆ ಪತ್ರ ಸಂದೇಶ ರವಾನಿಸಿದ್ದಾರೆ.
ಅಲ್ಟ್ ನ್ಯೂಸ್ ಸಂಸ್ಟಾಪಕ ಝುಬೇರ್ ಬಂಧನ ವಾಕ್ ಸ್ವಾತಂತ್ರ್ಯದ ವ್ಯವಸ್ಥಿತ ನಿರಾಕರಣೆ ಎಂಬುದನ್ನು ಎತ್ತಿ ತೋರಿಸುತ್ತದೆ. ಸರ್ಕಾರಕ್ಕೆ ಅನಾನುಕೂಲವಾದವರನ್ನು ಗುರುತಿಸಿ, ಅವರ ಮೂಲಭೂತ ಸ್ವಾತಂತ್ರ್ಯ ಕಸಿಯಲು ಬೇಕಾಗಿ ವಿವಿಧ ಪ್ರಕರಣಗಳನ್ನು ಅವರ ಮೇಲೆ ದಾಖಲು ಮಾಡಲಾಗುತ್ತಿದೆ. ಅದಲ್ಲದೆ ನಿಮ್ಮ ಅಧೀನದಲ್ಲಿರುವ ಅಧಿಕಾರಿಗಳೂ ಅಂತಹ ಕಾರ್ಯಾಚರಣೆಯಲ್ಲಿ ಅತೀವ ಉತ್ಸುಕರಾಗಿದ್ದಾರೆ. ಇದು ಬಹಳ ಹತಾಶೆಯ ನಡೆ ಎಂದು ಪತ್ರದಲ್ಲಿ ಹೇಳಲಾಗಿದೆ.
ನೂಪುರ್ ಶರ್ಮಾ ಮತ್ತು ಝುಬೇರ್ ಪ್ರಕರಣದಲ್ಲಿ ಕಾನೂನಿನ ಆಯ್ದ ಅನ್ವಯವು ನ್ಯಾಯದ ಉಲ್ಲಂಘನೆಯಾಗುತ್ತದೆ. ಜೊತೆಗೆ ಝುಬೇರ್ ಬಂಧನ ಅವರ ವೈಯಕ್ತಿಕ ಸ್ವಾತಂತ್ರ್ಯದ ಕಿತ್ತುಕೊಳ್ಳುವಿಕೆ ಎಂಬುವುದು ಸ್ಪಷ್ಟವಾಗುತ್ತದೆ. ಭಿನ್ನಾಭಿಪ್ರಾಯದ ಧ್ವನಿಯು ಪ್ರಜಾಪ್ರಭುತ್ವಕ್ಕೆ ಅಗತ್ಯವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಆದ್ದರಿಂದ ವಾಕ್ ಸ್ವಾತಂತ್ರ್ಯದ ಹಕ್ಕು ಚಲಾಯಿಸಿದವರ ಬೇಟೆ ನಿಲ್ಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡುವುದರೊಂದಿಗೆ ಆಧಾರ ರಹಿತ ಆರೋಪಗಳನ್ನು ಪ್ರಕರಣವಾಗಿ ದಾಖಲಿಸದಂತೆ ಪೊಲೀಸರಿಗೆ ನಿರ್ದೇಶಿಸಿ ಎಂದು ಹೇಳಿದ್ದಾರೆ. ಅಲ್ಲದೆ ಜಾಮೀನು ಅರ್ಜಿಯ ವಾಡಿಕೆಯ ನಿರಾಕರಣೆಯೂ ಬೇಡ ಎಂದು ವಕೀಲರಿಗೆ ಆದೇಶ ಹೊರಡಿಸುವಂತೆ ಪತ್ರದಲ್ಲಿ ಹೇಳಲಾಗಿದೆ.