ಹಿಂದೂ ರುದ್ರಭೂಮಿಯಲ್ಲಿ ಬಿಬಿಎಂಪಿ ಕಚೇರಿ: ಆಮ್ ಆದ್ಮಿ ಪಾರ್ಟಿ ವಿರೋಧ

Prasthutha|

ಬೆಂಗಳೂರು: ಚಾಮರಾಜಪೇಟೆಯ ಜಗಜೀವನ್ ರಾಮ್ ನಗರದ ಹಿಂದೂ ರುದ್ರಭೂಮಿಯಲ್ಲಿ ನಗರ ಪಾಲಿಕೆ ಸೌಧ ನಿರ್ಮಿಸಿರುವುದಕ್ಕೆ ಆಮ್ ಆದ್ಮಿ ಪಾರ್ಟಿ ವಿರೋಧ ವ್ಯಕ್ತಪಡಿಸಿದ್ದು, ಶೀಘ್ರವೇ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದೆ.

- Advertisement -

ಮಧ್ಯಮಗಳ ಜೊತೆ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ, “ಕಾನೂನಿನ ಪ್ರಕಾರ ಹಕ್ಕನ್ನು ಪಡೆಯದೇ ಅಕ್ರಮವಾಗಿ ನಗರ ಪಾಲಿಕೆ ಸೌಧ ನಿರ್ಮಿಸಲಾಗಿದೆ. (ಆಸ್ತಿ ಗುರುತಿನ ಸಂಖ್ಯೆ ಪಿಐಡಿ 136-10034-115) ಕಾನೂನುಗಳನ್ನು ಗಾಳಿಗೆ ತೂರಿ ಹಿಂದೂಗಳ ಭಾವನೆಗೆ ಧಕ್ಕೆ ತರಲಾಗಿದೆ. ಕೇವಲ ಚುನಾವಣೆ ದೃಷ್ಟಿಯಿಂದ ಬಿಜೆಪಿಯು ಹಿಂದುತ್ವವನ್ನು ಬಳಸಿಕೊಳ್ಳುತ್ತಿದೆಯೇ ಹೊರತು ಹಿಂದೂಗಳ ನಂಬಿಕೆ ಬಗ್ಗೆ ಅದಕ್ಕೆ ಯಾವುದೇ ಕಾಳಜಿ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

“ರುದ್ರಭೂಮಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕಾದ ಬಿಬಿಎಂಪಿಯೇ ಅದನ್ನು ಒತ್ತುವರಿ ಮಾಡಿಕೊಂಡು ತನ್ನ ಕಚೇರಿ ನಿರ್ಮಿಸಿಕೊಂಡಿರುವುದು ಖಂಡನೀಯ. ಸ್ಥಳೀಯ ಶಾಸಕ ಜಮೀರ್ ಅಹ್ಮದ್ ಕೂಡ ಈ ವಿಚಾರದಲ್ಲಿ ಬಿಜೆಪಿ ಜೊತೆ ಶಾಮೀಲಾಗಿದ್ದು, ರುದ್ರಭೂಮಿ ಕಬಳಿಕೆಗೆ ಸಹಕಾರ ನೀಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಹಿಂದೂಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿಯಿದ್ದರೆ, ತಕ್ಷಣವೇ ಪಾಲಿಕೆ ಕಟ್ಟಡವನ್ನು ತೆರವುಗೊಳಿಸಿ, ಆ ಜಾಗವನ್ನು ಹಿಂದೂ ರುದ್ರಭೂಮಿಗೆ ಬಿಟ್ಟುಕೊಡಲಿ” ಎಂದು ಮೋಹನ್ ದಾಸರಿ ಆಗ್ರಹಿಸಿದರು.



Join Whatsapp