ನವದೆಹಲಿ; ಮುಟ್ಟುಗೋಲು ಹಾಕಿಕೊಂಡಿದ್ದ ಬ್ಯಾಂಕ್ ಖಾತೆಗಳಲ್ಲಿ ಇನ್ಮುಂದೆ ವಹಿವಾಟು ನಡೆಸಲು, ಜಾರಿ ನಿರ್ದೇಶನಾಲಯಕ್ಕೆ ಒಂದು ವಾರದೊಳಗೆ ₹950 ಕೋಟಿ ಬ್ಯಾಂಕ್ ಖಾತರಿ ನೀಡಬೇಕು ಎಂದು ದೆಹಲಿ ಹೈಕೋರ್ಟ್ ಬುಧವಾರ ವಿವೊ ಕಂಪನಿಗೆ ನಿರ್ದೇಶನ ನೀಡಿದೆ.
ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯವು ಕಂಪನಿಯ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ಇದನ್ನು ರದ್ದು ಮಾಡಬೇಕು ಎಂದು ಕೋರಿ ವಿವೊ ಕಂಪನಿಯು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಈ ಕುರಿತು ನ್ಯಾಯಮೂರ್ತಿ ಯಶ್ವಂತ್ ವರ್ಮಾ ವಿಚಾರಣೆ ನಡೆಸಿದ್ದು, ವಿವೊ ಸಲ್ಲಿಸಿರುವ ಅರ್ಜಿಯ ಕುರಿತು ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಹೈಕೋರ್ಟ್ ನೋಟಿಸ್ ನೀಡಿದೆ.
ವಿವೊ ಕಂಪನಿಗೂ ಕೆಲವು ನಿರ್ದೇಶನ ನೀಡಿರುವ ಕೋರ್ಟ್, ತನ್ನ ಬ್ಯಾಂಕ್ ವಹಿವಾಟಿನ ಕುರಿತ ಮಾಹಿತಿಯನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಬೇಕು. ಜೊತೆಗೆ ಮುಂದಿನ ಆದೇಶದ ವರೆಗೂ ಬ್ಯಾಂಕ್ ಖಾತೆಯಲ್ಲಿ ₹251 ಕೋಟಿ ಹಣ ಇಡಬೇಕು. ಈ ಹಣವನ್ನು ಬಳಸಬಾರದು ಎಂದು ಹೇಳಿದೆ.
ಜಾರಿ ನಿರ್ದೇಶನಾಲಯವು ದೆಹಲಿ, ಉತ್ತರ ಪ್ರದೇಶ ಸೇರಿದಂತೆ ದೇಶದ ವಿವಿಧೆಡೆ ಜುಲೈ 5ರಂದು ವಿವೊ ಕಂಪನಿಯ ಮೇಲೆ ದಾಳಿ ನಡೆಸಿತ್ತು. ಮುಂದಿನ ವಿಚಾರಣೆಯನ್ನು ಜುಲೈ 28ಕ್ಕೆ ಕೋರ್ಟ್ ನಿಗದು ಮಾಡಿದೆ.