ನಾನು, ಸಿದ್ದರಾಮಯ್ಯ ಹಳಬರಾಗಿದ್ದೇವೆ, ಈಗಿನ ಯುವಕರು ಪಕ್ಷದ ಧ್ವನಿಯಾಗಬೇಕು: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ನಿರುದ್ಯೋಗಿ ಯುವಕರನ್ನು ಹುಡುಕಿ, ಅವರಿಗೆ ಉದ್ಯೋಗ ಸೃಷ್ಟಿಸುವ ಬಗ್ಗೆ ಕಾಂಗ್ರೆಸ್ ಕಾರ್ಯಕ್ರಮ ರೂಪಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಯುವ ಕಾಂಗ್ರೆಸ್ ನ ಯುವ ಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು, ಸಿದ್ದರಾಮಯ್ಯನವರು ಸೇರಿದಂತೆ ಇತರೆ ನಾಯಕರೆಲ್ಲರೂ ಹಳಬರಾಗಿದ್ದೇವೆ. ಈಗಿನ ಯುವಕರು ಬಹಳ ಬುದ್ಧಿವಂತರಾಗಿದ್ದು, ಯುವಕರ ಧ್ವನಿ ಪಕ್ಷದ ಅಧ್ಯಕ್ಷರ ಧ್ವನಿಯಾಗಬೇಕು. ಹೀಗಾಗಿ ನೀವೆಲ್ಲರೂ ನಿಮ್ಮ ಸಲಹೆಗಳನ್ನು ನಮಗೆ ನೀಡಬೇಕು. ಪ್ರದೇಶವಾರು ಹಾಗೂ ತಾಲೂಕುವಾರು ಉದ್ಯೋಗ ನೀತಿ ರೂಪಿಸಬೇಕು ಎಂಬ ಸಲಹೆಯನ್ನು ಒಪ್ಪುತ್ತೇನೆ. ಮತ್ತೊಬ್ಬರು ಪಂಚಾಯ್ತಿ ಮಟ್ಟದಲ್ಲಿ ಉದ್ಯೋಗ ಮೇಳ ಮಾಡುವಂತೆ ಸಲಹೆ ನೀಡಿದ್ದಾರೆ. ಆದರೆ ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ಹೇಳಿದರು.

ನಾವಿಲ್ಲಿಗೆ ಚುನಾವಣಾ ಪ್ರಚಾರ, ಭಾಷಣ ಮಾಡಲು ಬಂದಿಲ್ಲ. ನಮಗೆ ಜೀವನದಲ್ಲಿ ಗುರಿ ಇದ್ದು, ನಾವದನ್ನು ತಲುಪಬೇಕು. ನಮ್ಮದು ಇತಿಹಾಸವುಳ್ಳ, ರಾಷ್ಟ್ರಧ್ವಜವುಳ್ಳ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ಕಳೆದ 60ಕ್ಕೂ ಹೆಚ್ಚು ವರ್ಷಗಳ ಕಾಲ ದೇಶದಲ್ಲಿ ಅಧಿಕಾರ ನಡೆಸಿ, ಸಾಕಷ್ಟು ಬದಲಾವಣೆ ತಂದಿದ್ದೇವೆ. ನೆಹರೂ ಅವರ ಕಾಲದಲ್ಲಿ ಉದ್ಯೋಗ ಸೃಷ್ಟಿಸಲು ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಆರಂಭಿಸಲಾಯಿತು. ಉದ್ಯೋಗ ಸೃಷ್ಟಿ ಹಾಗೂ ದೇಶ ಸ್ವಾವಲಂಬನೆ ಸಾಧಿಸಲು ಎಚ್ ಎಂಟಿ, ಐಟಿಐ, ಬೆಮೆಲ್, ಇಸ್ರೋ, ಬಿಹೆಚ್ಇಎಲ್ ಸೇರಿದಂತೆ ಹಲವು ಉದ್ದಿಮೆಗಳನ್ನು ಆರಂಭಿಸಲಾಯಿತು. ಈಗ ಅವುಗಳನ್ನೆಲ್ಲ ಮಾರಲಾಗುತ್ತಿದೆ. ಈಗ ಜಾಗತೀಕರಣ ಹಾಗೂ ಖಾಸಗಿಕರಣದತ್ತ ಸಮಾಜ ಸಾಗುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದ್ದಂತೆ ಉದ್ಯೋಗಗಳ ಅಗತ್ಯತೆಯೂ ಹೆಚ್ಚಿದೆ. ದೇಶದಲ್ಲಿ 18 ವರ್ಷದಿಂದ 40 ವರ್ಷದ ವಯೋಮಾನದವರು ಶೇ.47 ರಷ್ಟು ಜನ ಇದ್ದಾರೆ ಎಂದು ಹೇಳಿದರು.

- Advertisement -

ನಿರುದ್ಯೋಗದ ಬಗ್ಗೆ ಮಾತನಾಡಿ ಬಿಜೆಪಿ ಟೀಕಿಸಲು ನಾವಿಲ್ಲಿ ಸೇರಿಲ್ಲ. ಕಾಂಗ್ರೆಸ್ ಪಕ್ಷದ ಮುಂದಿನ ಚಿಂತನೆ ಹೇಗಿರಬೇಕು? ನೀವು ಏನನ್ನು ನಿರೀಕ್ಷಿಸುತ್ತಿದ್ದೀರಿ? ಕೋವಿಡ್ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರು ಯಾರು? ಎಷ್ಟು ಮಂದಿ ನಿರುದ್ಯೋಗಿಗಳಿದ್ದಾರೆ? ಎಂಬುದನ್ನು ತಿಳಿಯಬೇಕು ಎಂದು ಹೇಳಿದರು.

ಮುಂದೆ ನಾವು ಚುನಾವಣೆಗೆ ಹೋಗುವಾಗ ಯುವಕರಿಗೆ ಯಾವ ಭರವಸೆ ನೀಡಬೇಕು? ಪ್ರಣಾಳಿಕೆಯಲ್ಲಿ ಏನನ್ನು ಹೇಳಬೇಕು? ಕಳೆದ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ನ್ಯಾಯ್ ಯೋಜನೆಯನ್ನು ತಿಳಿಸಿದ್ದರು. ಅದೇ ರೀತಿ ಬೇರೆ ಉತ್ತಮ ಯೋಜನೆ ನೀಡಬಹುದೇ? ಎಂದು ಆಲೋಚನೆ ಮಾಡಲು ನಿಮ್ಮನ್ನೆಲ್ಲಾ ಇಲ್ಲಿಗೆ ಕರೆದಿದ್ದೇವೆ.

ಈ ವಿಚಾರವಾಗಿ ನೀವು ಸಮೀಕ್ಷೆ ಮಾಡಬೇಕು. ಪಕ್ಷ ನಿಮಗೆ ಅಗತ್ಯ ನೆರವು ನೀಡಲಿದೆ. ನೀವು ಮನೆ ಮನೆಗೂ ಹೋಗಿ ಆಫ್ ಲೈನ್ ಆದರೂ ಮಾಡಬಹುದು, ಆನ್ ಲೈನ್ ಆಗಿಯಾದರೂ ಸಮೀಕ್ಷೆ ಮಾಡಬಹುದು. ಆನ್ ಲೈನ್ ನಲ್ಲಿ ಸಮೀಕ್ಷೆ ಮಾಡಲು ಆಪ್ ಕೂಡ ಸಿದ್ಧಪಡಿಸಲಾಗಿದೆ. ಆ ಮೂಲಕ ಯುವಕರು ಏನನ್ನು ಬಯಸುತ್ತಿದ್ದಾರೆ ಎಂಬ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಈ ರೀತಿ ಮಾಡುವಾಗ ಪಕ್ಷಕ್ಕೆ ಯಾರೂ ಸ್ಪಂದಿಸುತ್ತಾರೆ, ಯಾರು ಸ್ಪಂದಿಸುವುದಿಲ್ಲ ಎಂದು ತಿಳಿಯುತ್ತದೆ. ಇದೇ ಸಂದರ್ಭದಲ್ಲಿ ಡಿಜಿಟಲ್ ಯೂಥ್ ನೇಮಕ ಮಾಡಲು, ಬೂತ್ ಮಟ್ಟದ ಸಮತಿ ಮಾಡಲು ಅವಕಾಶ ಸಿಗುತ್ತದೆ ಎಂದು ಡಿಕೆಶಿ ಹೇಳಿದರು.

ಈ ದೇಶಕ್ಕೆ ಕಾಂಗ್ರೆಸ್ ತಂದುಕೊಟ್ಟ ಸ್ವಾತಂತ್ರ್ಯವನ್ನು ಬಿಜೆಪಿಯವರು ಹೈಜಾಕ್ ಮಾಡಲು ಹೊರಟಿದ್ದಾರೆ. ಅವರು ಮನೆ, ಮನೆಯಲ್ಲೂ ತಿರಂಗಾ ಹಾರಿಸುತ್ತಾರಂತೆ, ಸಂತೋಷ. ಅವರು ಯಾರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಆದರೂ ಸ್ವಾತಂತ್ರ್ಯ ನಮ್ಮದು ಎನ್ನುತ್ತಿದ್ದಾರೆ. ಸೋನಿಯಾ ಗಾಂಧಿ ಅವರು ನಮಗೆ ಒಂದು ಕಾರ್ಯಕ್ರಮ ಕೊಟ್ಟಿದ್ದಾರೆ. ದೇಶದ 75ನೇ ಸ್ವಾತಂತ್ರ್ಯ ದಿನಾಚಾರಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ಪಾದಯಾತ್ರೆ ಮಾಡಲು ತೀರ್ಮಾನಿಸಿದೆ. ಇದರ ಜತೆಗೆ ಬೆಂಗಳೂರಿನಲ್ಲಿ ಆಗಸ್ಟ್ 15ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಕನಿಷ್ಠ 1 ಲಕ್ಷ ಮಂದಿ ರಾಷ್ಟ್ರ ಧ್ವಜ ಹಿಡಿದು ಹೆಜ್ಜೆ ಹಾಕಬೇಕು. ಆ ಮೂಲಕ ರಾಷ್ಟ್ರೀಯ ದಾಖಲೆ ನಿರ್ಮಿಸಬೇಕು. ದೂರದ ಜಿಲ್ಲೆಗಳ ಪ್ರತಿ ವಿಧಾನಸಭಾ ಕ್ಷೇತ್ರದಿಂದ 500-1000 ಜನ ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳ ಪ್ರತಿ ಕ್ಷೇತ್ರದಿಂದ ಕನಿಷ್ಠ 3 ಸಾವಿರ ಜನ ಭಾಗವಹಿಸಬೇಕು. ಈ ಪಾದಯಾತ್ರೆಯಲ್ಲಿ ಎಲ್ಲ ವರ್ಗದವರು ಕೂಡ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.



Join Whatsapp