ಬೆಂಗಳೂರು: ವಿವಿಧ ಬೇಡಿಕೆಗಳನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲು ರಾಜ್ಯದ ವಿವಿಧ ಭಾಗಗಳಿಂದ ನಗರಕ್ಕೆ ಬಂದಿದ್ದ ರೈತರನ್ನು ಸೋಮವಾರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೈತರು ತಂಡ ತಂಡವಾಗಿ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ಅಲ್ಲಿಂದ ಮುಖ್ಯಮಂತ್ರಿ ಕಚೇರಿಗೆ ಬಸ್ ನಲ್ಲೇ ತೆರಳಿದ್ದಾರೆ. ಆದರೆ ಸಿಎಂ ಮನೆ ಬಳಿ ಇದ್ದ ಪೊಲೀಸರು ರೈತರನ್ನು ಬಸ್ ನಿಂದ ಕೆಳಗೆ ಇಳಿಯಲು ಬಿಡದೆ ಅಲ್ಲಿಂದಲೇ ವಶಕ್ಕೆ ಪಡೆದಿದ್ದಾರೆ.
ನಾವು ಬಾಂಬ್ ಹಿಡಿದು ಬಂದಿಲ್ಲ, ಗನ್ ಹಿಡಿದು ಬಂದಿಲ್ಲ, ನಾವು ಹಸಿರು ಶಾಲು ಹಾಕಿಕೊಂಡು ಶಾಂತಿಯುತವಾಗಿ ಬಂದಿದ್ದೇವೆ. ನಾವು ಮುಖ್ಯಮಂತ್ರಿ ಜೊತೆಗೆ ಮಾತನಾಡಲು ಬಂದಿದ್ದೇವೆ. ಆದರೆ ಬಂಧಿಸಲು ಮುಂದಾಗಿದ್ದಾರೆ. ನಾವು ಸುಮ್ಮನೆ ಇರುವುದಿಲ್ಲ. ನಾವು ಕಬಿನಿ, ಕಾವೇರಿಗೆ ಸಿಎಂ ಬಾಗಿನ ಅರ್ಪಿಸಲು ಬಂದಾಗ ನಮ್ಮ ಹೆಣ್ಣುಮಕ್ಕಳು ಕಪ್ಪುಬಾವುಟ ಪ್ರದರ್ಶನ ಮಾಡಿ ಸ್ವಾಗತಿಸುತ್ತೇವೆ ಎಂದು ರೈತರು ಎಚ್ಚರಿಸಿದರು.
ಸಿಎಂ ಮನೆಗೆ ಭೇಟಿಗೆ ಅವಕಾಶ ಇಲ್ಲದಿದ್ದರೆ ಸಿಎಂ ಅವರನ್ನೇ ಇಲ್ಲಿಗೆ ಕರೆಸಬೇಕು. ಆದರೆ ರೈತರ ಮೇಲೆ ಕೈ ಹಾಕುವ ಕೆಲಸ ಮಾಡಿದ್ದಾರೆ. ಇದು ಸರ್ಕಾರ ಪತನದ ಮುನ್ಸೂಚನೆ. ನಾವು ಗುಂಡೂರಾವ್ ಸರ್ಕಾರವನ್ನೇ ಬಿಟ್ಟಿಲ್ಲ ಈ ಸರ್ಕಾರವನ್ನೂ ಬಿಡುವುದಿಲ್ಲ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ರಾಜ್ಯದ ವಿವಿಧ ಭಾಗಗಳಿಂದ ರೈತರು ಕೆಎಸ್ ಆರ್ ಟಿಸಿ ಬಸ್ ಮೂಲಕ ಸಿಎಂ ಮನೆ ಮುತ್ತಿಗೆ ಹಾಕಲು ನಗರಕ್ಕೆ ಬಂದಿದ್ದರು.