ಬೆಂಗಳೂರು: ಶಿವಮೊಗ್ಗದ ಹರ್ಷನ ಕೊಲೆಯಲ್ಲಿ ಬೇಳೆ ಬೇಯಿಸಿಕೊಂಡ ಬಿಜೆಪಿ ಮತ್ತು ಪರಿವಾರ ಮೊಸಳೆ ಕಣ್ಣೀರು ಹಾಕಿತ್ತು. ಈಗ ಹರ್ಷನ ತಾಯಿ ಹಾಗೂ ಸಹೋದರಿಯ ನ್ಯಾಯದ ಕಣ್ಣೀರಿಗೆ ಧಮ್ಕಿ ಹಾಕುತ್ತಿದೆ. ಅಮಾಯಕ ಯುವಕರು ಇಷ್ಟಾದರೂ ಎಚ್ಚೆತ್ತುಕೊಳ್ಳದೆ ಇದ್ದರೆ ಸಂಘಪರಿವಾರದ ಉನ್ಮಾದದ ಕುಲುಮೆಯಲ್ಲಿ ನಿಮ್ಮ ಜೀವ ಕುಯ್ಲಾಗುತ್ತದೆ.. ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಹರ್ಷನ ಸಹೋದರಿ ಗೃಹ ಸಚಿವರನ್ನು ಭೇಟಿ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದ್ದರು. ಆಗ ಸಿಟ್ಟಿಗೆದ್ದ ಗೃಹ ಸಚಿವರು, ನೀವು ಹೇಳಿದ ಹಾಗೇ ಕೇಳಲು ಆಗಲ್ಲ ಎಂದು ಬೈದು ಕಳಿಸಿದ್ದರು. ಈ ಕುರಿತ ವೀಡಿಯೋ ವೈರಲ್ ಆಗಿತ್ತು. ಬಳಿಕ ಹರ್ಷನ ಸಹೋದರಿ ಮತ್ತು ತಾಯಿ ಪತ್ರಿಕಾಗೋಷ್ಠಿ ಕರೆದು ತಮಗಾದ ನೋವನ್ನು ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಬಿ.ಕೆ.ಹರಿಪ್ರಸಾದ್ ಟ್ವೀಟ್ ಮಾಡಿ ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.