ಬೆಳಗಾವಿ: ತುಂಬಿ ಹರಿಯುತ್ತಿದ್ದ ಕಾಲುವೆಗೆ ಕಾರು ಬಿದ್ದು, ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದ ಕಾಲುವೆಯಲ್ಲಿ ನಡೆದಿದೆ.
ಅಥಣಿಯ ಮಹಾದೇವ ಚಿಗರಿ (26) ಮೃತದೇಹ ಕಾರಿನಲ್ಲೇ ಪತ್ತೆಯಾಗಿದ್ದು, ಸುರೇಶ ಬಡಚಿ (27) ನೀರು ಪಾಲಾಗಿದ್ದಾರೆ.
ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಂದ ಹಿನ್ನೆಲೆಯಲ್ಲಿ ಹಲ್ಯಾಳ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆ ತುಂಬಿ ಹರಿಯುತ್ತಿದೆ.
ತೋಟದ ವಸತಿಗಳಿಗೆ ತೆರಳುವ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿ ಬಿದ್ದು ಈ ದುರ್ಘಟನೆ ಸಂಭವಿಸಿದೆ.
ಘಟನೆ ವೇಳೆ ಕಾರಿನಲ್ಲಿದ್ದ ಶ್ರೀಕಾಂತ್ ನಡುವಿನಮನಿ ಎನ್ನುವವರು ಈಜಿ ದಡ ಸೇರಿದ್ದಾರೆ. ನೀರು ಪಾಲಾದ ಸುರೇಶ ಬಡಚಿ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಸ್ಥಳೀಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವ್ಯಕ್ತಿಯ ಶೋಧ ಕಾರ್ಯ ಮುಂದುವರಿದಿದೆ