ಪಾಟ್ನಾ: ವಿದ್ಯಾರ್ಥಿಗಳು ತರಗತಿಗೆ ನಿರಂತರ ಗೈರು ಹಾಜರಿಯಾಗುತ್ತಾರೆ. ಆದ್ದರಿಂದ ನನಗೆ ಸಂಬಳವೇ ಬೇಡ ಎಂದು ಪ್ರಾಧ್ಯಾಪಕರೊಬ್ಬರು 24 ಲಕ್ಷ ರೂ. ಸಂಬಳವನ್ನು ಹಿಂದಿರುಗಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಮುಜಾಫರ್‌ಪುರದ ನಿತೀಶ್ವರ್ ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಲಲ್ಲನ್ ಕುಮಾರ್, ಪಾಠ ಮಾಡಲು ವಿದ್ಯಾರ್ಥಿಗಳೇ ಇಲ್ಲ ಅಂದ್ಮೇಲೆ ಸಂಬಳ ಏಕೆ? ಎಂದು ತಮ್ಮ ಎರಡು ವರ್ಷ ಮತ್ತು ಒಂಬತ್ತು ತಿಂಗಳ ಸಂಬಳವನ್ನು (23.8 ಲಕ್ಷ ರೂ.) ಹಿಂದಿರುಗಿಸಿದ್ದಾರೆ.
ನಾನಿರುವ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಬರುತ್ತಿಲ್ಲ. ವರ್ಗಾವಣೆ ಪಟ್ಟಿಯಿಂದ ಹಲವು ಬಾರಿ ನನ್ನ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಪ್ರಾಧ್ಯಾಪಕ ಲಲ್ಲನ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.ಈಗ ನನ್ನ ಸಂಬಳ ವಾಪಾಸು ಮಾಡಿ ನನ್ನ ಪ್ರತಿಭಟನೆ ಪ್ರಾರಂಭಿಸಿದ್ದೇನೆ. ನನ್ನ ಬೇಡಿಕೆ ಈಡೇರದಿದ್ದಲ್ಲಿ ಧರಣಿ ಕೂರುತ್ತೇನೆ ಎಂದು ತಿಳಿಸಿದ್ದಾರೆ.
ಪ್ರತಿಕ್ರಿಯಿಸಿದ ಕಾಲೇಜು ಪ್ರಾಂಶುಪಾಲ ಮನೋಜ್ ಕುಮಾರ್, ಶೂನ್ಯ ಹಾಜರಾತಿ ಆರೋಪಕ್ಕೆ ಯಾವುದೇ ಆಧಾರವಿಲ್ಲ. ಎರಡು ವರ್ಷಗಳಿಂದ, ಕೊರೊನಾ ಸಾಂಕ್ರಾಮಿಕ ಕಾರಣದಿಂದಾಗಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ. ವರ್ಗಾವಣೆ ಬೇಕಿದ್ದರೆ ಲಲ್ಲನ್ ಕುಮಾರ್ ಅವರು ನಮ್ಮನ್ನು ನೇರವಾಗಿಯೇ ಕೇಳಬಹುದಿತ್ತು ಎಂದು ಹೇಳಿದ್ದಾರೆ.