ಪ್ರತಿಭಟನೆಯ ನೆಪದಲ್ಲಿ ಮುಸ್ಲಿಮರ ಅಂಗಡಿ ಮೇಲೆ ದಾಳಿ: ಬಜರಂಗ ದಳ ಗೂಂಡಾಗಳ ವಿರುದ್ಧ ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

Prasthutha|

ಶಿವಮೊಗ್ಗ: ಪ್ರತಿಭಟನೆಯ ನೆಪದಲ್ಲಿ ಭದ್ರಾವತಿಯಲ್ಲಿ ಮುಸ್ಲಿಮರ ಅಂಗಡಿ ಮತ್ತು ಅಲ್ಲಿನ ಸಿಬ್ಬಂದಿ ಮೇಲೆ ದಾಳಿ ನಡೆಸಿ ಶಾಂತಿ ಕದಡಲು ಯತ್ನಿಸಿದ ಬಜರಂಗ ದಳದ ಗೂಂಡಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಶಿವಮೊಗ್ಗ ಜಿಲ್ಲಾಧ್ಯಕ್ಷ ಉಬೆದುಲ್ಲಾ ಶರೀಫ್ ಆಗ್ರಹಿಸಿದ್ದಾರೆ.

- Advertisement -

ಉದಯಪುರ ಘಟನೆಯಲ್ಲಿ ಆರೆಸ್ಸೆಸ್-ಬಿಜೆಪಿ ಅಂಗಸಂಸ್ಥೆಯ ಕಾರ್ಯಕರ್ತನ ಕೈವಾಡವಿರುವುದು ಬಯಲಾಗಿದ್ದರೂ, ಹತ್ಯೆ ಘಟನೆ ಖಂಡಿಸಿ ಈಗ ಬಜರಂಗ ದಳ ಪ್ರತಿಭಟನೆಯ ಹೆಸರಿನಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರುತ್ತಿದೆ. ಈ ಪ್ರತಿಭಟನೆಯ ಹಿಂದೆ ಶಾಂತಿ ಕದಡುವ ದುರುದ್ದೇಶ ಹೊಂದಿರುವುದು ಸ್ಪಷ್ಟವಾಗಿದೆ. ಪೊಲೀಸರ ಸಮ್ಮುಖದಲ್ಲೇ ಮುಸ್ಲಿಮ್ ವ್ಯಕ್ತಿಯ ಮಾಲಿಕತ್ವದ ಬಟ್ಟೆ ಅಂಗಡಿಯ ಮೇಲೆ ದಾಳಿ ಮಾಡಿ ಗಾಜಿಗೆ ಹಾನಿ ಮಾಡಿ, ಅಲ್ಲಿನ ಇಬ್ಬರು ಸಿಬ್ಬಂದಿಗೆ ಥಳಿಸಲಾಗಿದೆ. ಈ ವೇಳೆ ಪೊಲೀಸರ ನಿಷ್ಕ್ರಿಯತೆ ಖಂಡನಾರ್ಹವಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಈ ಹಿಂದೆ ರೌಡಿಶೀಟರ್ ಹರ್ಷ ಕೊಲೆಯ ನಂತರ ಮೆರವಣಿಗೆಯ ನೆಪದಲ್ಲಿ ಮುಸ್ಲಿಮರ ಅಪಾರ ಆಸ್ತಿ-ಪಾಸ್ತಿ ಹಾನಿ ಉಂಟು ಮಾಡಲಾಗಿತ್ತು. ಹಿಜಾಬ್ ವಿಷಯದಲ್ಲಿ ಅನಗತ್ಯ ವಿವಾದ ಸೃಷ್ಟಿಸಿ ಕಾಲೇಜು ಕ್ಯಾಂಪಸ್ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಸಂಘಪರಿವಾರದ ಗೂಂಡಾಗಳು ಕಾನೂನಿಗೆ ಸವಾಲೊಡ್ಡಿ ಜಿಲ್ಲೆಯಲ್ಲಿ ಶಾಂತಿ ಕದಡಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಆದರೂ ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಇಂತಹ ಅಹಿತಕರ ಘಟನೆಗಳು ಪುನರಾವರ್ತನೆಯಾಗಲು ಕಾರಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ಅಂಗಡಿಯ ಮೇಲೆ ದಾಳಿ ನಡೆಸಿ ದಾಂಧಲೆ ಮತ್ತು ಹಲ್ಲೆ ನಡೆಸಿದ ಬಜರಂಗ ದಳದ ಗೂಂಡಾಗಳನ್ನು ಕೂಡಲೇ ಬಂಧಿಸಬೇಕು. ಈ ವೇಳೆ ನಿಷ್ಕ್ರಿಯತೆ ತೋರಿದ ಪೊಲೀಸರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಗಲಭೆ ಸೃಷ್ಟಿಸುವ ದುರುದ್ದೇಶದಿಂದ ಪ್ರತಿಭಟನೆ ಆಯೋಜಿಸಿದ್ದು, ಈ ನಿಟ್ಟಿನಲ್ಲಿ ಸಂಘಟಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಮುಸ್ಲಿಮರಿಗೆ ಭದ್ರತೆಯನ್ನು ಖಾತರಿಪಡಿಸಬೇಕು ಮತ್ತು ಜಿಲ್ಲೆಯ ಶಾಂತಿಯ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಒತ್ತು ನೀಡಬೇಕೆಂದು ಉಬೆದುಲ್ಲಾ ಶರೀಫ್ ಒತ್ತಾಯಿಸಿದ್ದಾರೆ.



Join Whatsapp