ಕಲಬುರಗಿ: ‘ಹೆಂಡತಿಯನ್ನು ನಿಯಂತ್ರಿಸಲು ಆಗದಿದ್ದರೆ ಓಡಿ ಹೋಗುತ್ತಾಳೆ’ ಎಂದು ಮಹಾರಾಷ್ಟ್ರ ರಾಜಕೀಯ ಘಟನೆಗಳನ್ನು ಉಲ್ಲೇಖಿಸಿ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವ ಪಕ್ಷದಲ್ಲಿ ಶಿಸ್ತು ಮತ್ತು ನಾಯಕತ್ವ ಇರುವುದಿಲ್ಲವೋ, ಆ ಪಕ್ಷದಲ್ಲಿ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ರಾಜ್ ಠಾಕ್ರೆ ಮಗ ಉದ್ಧವ್ ಠಾಕ್ರೆ ಹಿಂದುತ್ವವನ್ನೇ ಮಾರಿದ್ದಾರೆ ಎಂದು ಹೇಳಿದರು.
ಪತ್ನಿಯನ್ನು ನಿಯಂತ್ರಿಸಬೇಕು ಎಂಬ ಹೇಳಿಕೆ ಪುರುಷ ಪ್ರಧಾನ ಸಮಾಜವನ್ನು ಪ್ರತಿಬಿಂಬಿಸುತ್ತದೆ ಎಂದು ಮಹಿಳಾ ಸಂಘಟನೆಗಳು ಟೀಕಿಸಿವೆ.
‘ಸಿದ್ದರಾಮಯ್ಯ ಅವರನ್ನು ಜನರು ತಿರಸ್ಕೃತರ ಪಟ್ಟಿಗೆ ಸೇರಿಸಿದ್ದಾರೆ. ತಮ್ಮ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಸಿದ್ದರಾಮಯ್ಯ ಅವರು ಆಗಸ್ಟ್ 3ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ’ ವ್ಯಂಗ್ಯವಾಡಿದರು.
‘ಸಿದ್ದರಾಮಯ್ಯ ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿಲ್ಲ. ಕಲಾವಿದೆಯೊಬ್ಬರು ಕಾಳಿದೇವಿ ಬಾಯಿಯಲ್ಲಿ ಸಿಗರೇಟು ಇಟ್ಟಿರುವ ಬಗ್ಗೆ ಕಾಂಗ್ರೆಸ್ ನಾಯಕರು ಯಾರೂ ಪ್ರತಿಕ್ರಿಯೆ ನೀಡಿಲ್ಲ. ಹಿಂದೂ ಧರ್ಮಕ್ಕೆ ಆಗುತ್ತಿರುವ ಅನ್ಯಾಯ ಸಹಿಸಿಕೊಂಡಿದ್ದೇವೆ ಎಂದು ಹೇಳಿದರು,