ಸಿಡ್ನಿ: ಇಂಗ್ಲೆಂಡ್-ಟೀಮ್ ಇಂಡಿಯಾ ನಡುವೆ ಎಡ್ಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಮಹತ್ವದ ಟೆಸ್ಟ್ ಪಂದ್ಯವು ಕುತೂಹಲಕಾರಿ ಘಟ್ಟ ತಲುಪಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಭಾರತ, 245 ರನ್ಗಳಿಗೆ ಆಲೌಟ್ ಆಗಿದ್ದು, ಇಂಗ್ಲೆಂಡ್ ತಂಡ 378 ರನ್ಗಳ ಗೆಲುವಿನ ಗುರಿ ಪಡೆದಿದೆ.
ಮಂಗಳವಾರ ಟೆಸ್ಟ್ ಪಂದ್ಯದ ಕೊನೆಯ ದಿನವಾಗಿದ್ದು, ಪಂದ್ಯವು ಸ್ಪಷ್ಟ ಫಲಿತಾಂಶ ಪಡೆಯುವುದು ನಿಶ್ಚಿತವಾಗಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದಲ್ಲಿ ಮುನ್ನಡೆಯಲ್ಲಿದೆ. ಹೀಗಾಗಿ ಎಡ್ಜ್ಬಾಸ್ಟನ್ನಲ್ಲಿ ಗೆಲುವು ಅಥವಾ ಕನಿಷ್ಠ ಡ್ರಾ ಸಾಧಿಸಿದರೆ, ಸರಣಿ ಭಾರತದ ಕೈ ವಶವಾಗಲಿದೆ. ಮತ್ತೊಂದೆಡೆ ಇಂಗ್ಲೆಂಡ್ ಗೆದ್ದರೆ ಸರಣಿ ಸಮಬಲದಲ್ಲಿ ಅಂತ್ಯಕಾಣಲಿದೆ.
3 ವಿಕೆಟ್ ನಷ್ಟದಲ್ಲಿ 125 ರನ್ಗಳಿಂದ ನಾಲ್ಕನೇ ದಿನದಾಟ ಆರಂಭಿಸಿದ ಭಾರತಕ್ಕೆ, ಬೆನ್ ಸ್ಟೋಕ್ಸ್ ನೇತೃತ್ವದಲ್ಲಿಆಂಗ್ಲನ್ನರ ಕಠಿಣ ಬೌಲಿಂಗ್ ಪರೀಕ್ಷೆ ಎದುರಾಯಿತು. ಚೇತೇಶ್ವರ್ ಪೂಜಾರ ಮತ್ತು ರಿಷಭ್ ಪಂತ್ ನೆಲಕಚ್ಚಿ ಆಡುವ ಭರವಸೆ ಮೂಡಿಸಿದರಾದರೂ ಸುದೀರ್ಘ ಇನ್ನಿಂಗ್ಸ್ ಕಟ್ಟುವಲ್ಲಿ ಯಶಸ್ವಿಯಾಗಲಿಲ್ಲ. ಚೇತೇಶ್ವರ್ ಪೂಜಾರ 66 ರನ್ ಮತ್ತು ರಿಷಭ್ ಪಂತ್ 57 ರನ್ಗಳಿಸಿ ನಿರ್ಗಮಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಶತಕ ದಾಖಲಿಸಿದ್ದ ಆಲ್ರೌಂಡರ್ ಜಡೇಜಾ, 23 ರನ್ಗಳಿಸಿದ್ದ ವೇಳೆ ಬೆನ್ ಸ್ಟೋಕ್ಸ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ಶ್ರೇಯಸ್ ಅಯ್ಯರ್ 19 ಹಾಗೂ ಮುಹಮ್ಮದ್ ಶಮಿ 13 ರನ್ಗಳಿಸಿದರು.
11.3 ಓವರ್ಗಳ ದಾಳಿಯಲ್ಲಿ ಕೇವಲ 33 ರನ್ ನೀಡಿ 4 ವಿಕೆಟ್ ಪಡೆದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಭಾರತದ ದೊಡ್ಡ ಮೊತ್ತದ ಗುರಿಗೆ ಅಡ್ಡಿಯಾದರು. ಸ್ಟುವರ್ಟ್ ಬ್ರಾಡ್ ಮತ್ತು ಮ್ಯಾಥ್ಯೂ ಪಾಟ್ಸ್ ತಲಾ ಎರಡು ವಿಕೆಟ್ ಪಡೆದರು. ಉಳಿದಂತೆ ಜೇಮ್ಸ್ ಆಂಡರ್ಸನ್ ಮತ್ತು ಜ್ಯಾಕ್ ಲೀಚ್ ತಲಾ ಒಂದು ವಿಕೆಟ್ ಪಡೆದರು.