ನನ್ನನ್ನು ಹೀಗಳೆಯುವ ಮೊದಲು ನೀವು RSS, ಮೋದಿ, ಅಮಿತ್ ಶಾರ ಗುಲಾಮಗಿರಿಯಿಂದ ಹೊರಬನ್ನಿ: ಜೋಶಿಗೆ ಸಿದ್ದರಾಮಯ್ಯ ತಿರುಗೇಟು

Prasthutha: July 4, 2022

ಬೆಂಗಳೂರು: “ಸಿದ್ದರಾಮಯ್ಯ ಪುಸ್ತಕ ಸುಳ್ಳಿನ ಕಂತೆ’ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಸಿದ್ದರಾಮಯ್ಯ ಸುದೀರ್ಘ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ದಿನಾಂಕ; 2-7-2022 ರಂದು ನಾನು ಮೋದಿ ಸರ್ಕಾರಕ್ಕೆ, ವರುಷ ಎಂಟು; ಅವಾಂತರ ನೂರೆಂಟು ಎಂಬ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೂಡಲೆ ಕೇಂದ್ರದ ಸಚಿವರಾದ ಪ್ರಹ್ಲಾದ್ ಜೋಶಿಯವರು, ‘ಸಿದ್ಧರಾಮಯ್ಯ ಪುಸ್ತಕ ಸುಳ್ಳಿನ ಕಂತೆ’ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿದರು.

 1. ಜೋಶಿಯವರ ಹೇಳಿಕೆಯನ್ನು ನೋಡಿದ ಮೇಲೆ ಕೇಂದ್ರದ ಸಚಿವರೊಬ್ಬರು ಇಷ್ಟೊಂದು ಹಾಸ್ಯಾಸ್ಪದವಾಗಿ ಮೋದಿಯವರ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಾರಲ್ಲಾ ಎಂದು ನನಗೆ ಮುಜುಗರವಾಯಿತು. ಒಂದು ದಿನ ತುಸು ಬಿಡುವು ಮಾಡಿಕೊಂಡು ಅವರ ಹೇಳಿಕೆಯನ್ನು ಪೂರ್ತಿಯಾಗಿ ಗಮನಿಸಿ ಈ ಹೇಳಿಕೆಯನ್ನು ಹಾಗೂ ಪ್ರಶ್ನೆಗಳನ್ನು ಬಿಡುಗಡೆ ಮಾಡುತ್ತಿದ್ದೇನೆ.
 2. ಜೋಶಿಯವರ ಹೇಳಿಕೆಯಲ್ಲಿ ನಾನು ಬರೆದ ಪುಸ್ತಕದಲ್ಲಿನ ಅಂಕಿ ಅಂಶಗಳು ಸುಳ್ಳು ಎಂದು ಹೇಳುವ ಒಂದೂ ಮಾಹಿತಿ ಇಲ್ಲ. ಇತ್ತೀಚೆಗೆ ಮೋದಿಯವರ ಸರ್ಕಾರಕ್ಕೆ 8 ವರ್ಷ ತುಂಬಿತೆಂದು ಕೇಂದ್ರ, ರಾಜ್ಯ ಸರ್ಕಾರಗಳು ನೂರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಬಿಡುಗಡೆ ಮಾಡಿದ ಜಾಹಿರಾತಿನಲ್ಲಿರುವ ಅಂಶಗಳನ್ನೆ ನನ್ನ ಪುಸ್ತಕಕ್ಕೆ ಪ್ರತಿಕ್ರಿಯೆ ನೀಡಲು ಬಳಸಿಕೊಂಡಿದ್ದಾರೆ.
 3. ರಾಷ್ಟ್ರದ ಸಾಲದ ಬಗ್ಗೆ ನಾನು ವಿಶೇಷವಾಗಿ ವಿವರಿಸಿದ್ದೇನೆ. ಜೋಶಿಯವರು ಪಾರ್ಲಿಮೆಂಟಿನಲ್ಲಿ ಕೂರುವುದರಿಂದ, ಒಕ್ಕೂಟ ಸರ್ಕಾರದ ಸಚಿವರಾಗಿರುವುದರಿಂದ ಈ ಕುರಿತು ಮಾಹಿತಿ ತರಿಸಿಕೊಳ್ಳುವುದು ಕಷ್ಟದ ವಿಚಾರವಲ್ಲ. ಆದರೂ ನಾನು ಅವರಿಗೆ ಈ ದಾಖಲೆಗಳು ಎಲ್ಲೆಲ್ಲಿ ಸಿಗುತ್ತವೆ ಎಂದು ತಿಳಿಸಬಯಸುತ್ತೇನೆ. ದಿನಾಂಕ;30-6-2022 ರಂದು ಭಾರತದ ರಿಸರ್ವ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಅವರು ವಿದೇಶಿ ಸಾಲದ ಬಗ್ಗೆ ಪ್ರೆಸ್ ಸ್ಟೇಟ್ ಮೆಂಟ್ ಬಿಡುಗಡೆ ಮಾಡಿದ್ದಾರೆ. ಅದರಂತೆ 2013 ರಲ್ಲಿ ಭಾರತದ ವಿದೇಶಿ ಸಾಲ 409.4 ಬಿಲಿಯನ್ ಡಾಲರುಗಳಷ್ಟಿತ್ತು [2013 ರಲ್ಲಿ ಸರಾಸರಿ ರೂಪಾಯಿ ಮೌಲ್ಯ 58.55 ರೂಗಳಷ್ಟಿತ್ತು ಆ ಲೆಕ್ಕದಲ್ಲಿ ನೋಡಿದರೆ 23.97 ಲಕ್ಷ ಕೋಟಿಗಳಷ್ಟು ವಿದೇಶಿ ಸಾಲ ಯುಪಿಎ ಸರ್ಕಾರ ಅವಧಿಯಲ್ಲಿತ್ತು]. ಜೂನ್ 2022 ರಲ್ಲಿ ವಿದೇಶಿ ಸಾಲ 620.7 ಬಿಲಿಯನ್ ಡಾಲರುಗಳಿಗೇರಿದೆ, ಅಂದರೆ 49004265000000 ಕೋಟಿ ರೂಪಾಯಿಗಳ[ 49.5 ಲಕ್ಷ ಕೋಟಿ ರೂಗಳು]ಷ್ಟಾಯಿತು. ರೂಪಾಯಿಯ ಮೌಲ್ಯ ಒಂದು ಡಾಲರಿಗೆ ಈಗ 79 ರೂಗೆ ಕುಸಿದಿದೆ. 2013-14 ರಲ್ಲಿ ಮೋದಿಯವರು ಸೇರಿದಂತೆ ಬಿಜೆಪಿ ಲೀಡರುಗಳು ಏನು ಮಾತಾಡಿದ್ದರು ಎಂಬುದು ನಿಮಗೆ ಮರೆತು ಹೋಯಿತೆ ಪ್ರಹ್ಲಾದ್ ಜೋಶಿಯವರೆ?
 4. “today our currency is on death bed. It is in terminal stage and urgently needs attention of a doctor.”
  Training guns at the Congress-led ruling coalition at the Centre, he said “at the time of coming to power this Government had promised to reduce inflation within 100 days, but that has eluded the country.”
  “At present both – rupee and UPA Government, have lost their value. Time has come to stop our country from destruction. The Central Government is misguiding the country”
 5. ಈ ಮಾತುಗಳನ್ನು ನರೇಂದ್ರ ಮೋದಿಯವರು ಆಗಸ್ಟ್ 24, 2013 ರಂದು ಗುಜರಾತಿನ ರಾಜ್ ಕೋಟೆಯಲ್ಲಿ ನಿಂತು ಮಾತನಾಡಿದ್ದರು. ಆ ದಿನ ಭಾರತದ ರೂಪಾಯಿಯ ಮೌಲ್ಯ ಡಾಲರಿನ ಎದುರಿಗೆ 63.76 ಬೆಲೆ ಇತ್ತು. ಇಂದು ರೂಪಾಯಿಯ ಮೌಲ್ಯ ಪಾತಾಳಕ್ಕೆ ಕುಸಿದಿದೆ 80 ರೂಪಾಯಿ ದಾಟುವ ಹಂತ ಬಂದಿದೆ. ಈಗ ದೇಶದ ಜನರು ಹೇಳಬೇಕಾದ ಪರಿಸ್ತೀತಿ ಬಂದಿದೆ, [ ಪ್ರಸ್ತುತ ರೂಪಾಯಿಯ ಹಾಗೂ ಮೋದಿ ಸರ್ಕಾರಗಳೆರಡೂ ತಮ್ಮ ಮೌಲ್ಯ ಕಳೆದುಕೊಂಡಿವೆ. ಇಂದು ರೂಪಾಯಿ ಡೆತ್ ಬೆಡ್ ನಲ್ಲಿದೆ. ಕುಸಿದು ಪಾತಾಳಕ್ಕೆ ಬೀಳುತ್ತಿರುವ ದೇಶವನ್ನು ತುರ್ತಾಗಿ ತಡೆದು ನಿಲ್ಲಿಸಬೇಕಾಗಿದೆ. ಆದರೆ ಮೋದಿ ಸರ್ಕಾರದ ಪರವಾಗಿ ಪ್ರಹ್ಲಾದ್ ಜೋಶಿಯವರೆ ನೀವು ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದೀರಿ.
 6. ದೇಶದಲ್ಲಿ ವಿದೇಶಿ ಸಾಲವೊಂದೆ ಹೆಚ್ಚಾಗಿಲ್ಲ ಮಾನ್ಯ ಜೋಶಿಯವರೆ, ಇಡೀ ದೇಶಕ್ಕೆ ದೇಶವೆ ಸಾಲದ ಸುನಾಮಿಯಲ್ಲಿ ಮುಳುಗಿ ಹೋಗಿದೆ. 2014 ರ ಮಾರ್ಚ್ ವೇಳೆಗೆ ದೇಶದ ಸಾಲ 53.11 ಲಕ್ಷ ಕೋಟಿಗಳಷ್ಟಿತ್ತು. ಈಗ ನಿಮ್ಮ ಸರ್ಕಾರದ ಬಜೆಟ್ ದಾಖಲೆಗಳ ಪ್ರಕಾರವೆ 152.18 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗಿದೆ. ಈ ಕುರಿತು ನಿಮಗೆ ಮಾಹಿತಿ ಬೇಕಿದ್ದರೆ ನಿಮ್ಮ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವ ಬಜೆಟ್ ರೆಸಿಪ್ಟ್ಸ್ ಪುಸ್ತಕದ ಪುಟ ಸಂಖ್ಯೆ 49 ಅನ್ನು ನೋಡಿ. ಆದರೆ ಅನೇಕ ಸಂಸ್ಥೆಗಳು ಮಾಡಿರುವ ಸಮೀಕ್ಷೆ ಪ್ರಕಾರ ದೇಶದ ಸಾಲ 155 ಲಕ್ಷ ಕೋಟಿಗೆ ಮುಟ್ಟುತ್ತದೆ. ಅಂದರೆ ಕಳೆದ 8 ವರ್ಷಗಳಲ್ಲಿ ಮೋದಿಯವರ ಸರ್ಕಾರ ಮಾಡಿದ ಸಾಲದ ಪ್ರಮಾಣ 102 ಲಕ್ಷ ಕೋಟಿ ರೂ.
 7. ಇದಿಷ್ಟೆ ಅಲ್ಲ ಜೋಶಿಯವರೆ, ಮೋದಿಯವರ ಸರ್ಕಾರ ರಾಜ್ಯಗಳಿಗೆ ಕೊಡಬೇಕಾದ ಪ್ರಮಾಣದಲ್ಲಿ ಅನುದಾನಗಳನ್ನು ಕೊಡುತ್ತಿಲ್ಲ, ಇದರಿಂದಾಗಿ ರಾಜ್ಯಗಳು ದೊಡ್ಡ ಮಟ್ಟದ ಸಾಲಗಾರ ರಾಜ್ಯಗಳಾಗುತ್ತಿವೆ. 2013-14 ರಲ್ಲಿ ದೇಶದ ಎಲ್ಲ ರಾಜ್ಯಗಳ ಸಾಲದ ಒಟ್ಟು ಮೊತ್ತ 22.12 ಲಕ್ಷ ಕೋಟಿ ಇತ್ತು. 2022 ರ ಮಾರ್ಚ್ ವೇಳೆಗೆ ರಾಜ್ಯಗಳ ಸಾಲದ ಪ್ರಮಾಣ 70 ಲಕ್ಷ ಕೋಟಿಗೆ ಏರಿಕೆಯಾಗಿದೆ. ಈ ವರ್ಷದ ಅಂತ್ಯದ ವೇಳೆಗೆ 80 ರಿಂದ 85 ಲಕ್ಷ ಕೋಟಿಗಳಿಗೆ ರಾಜ್ಯಗಳ ಸಾಲದ ಪ್ರಮಾಣ ಏರಿಕೆಯಾಗಲಿದೆ. ನಿಮಗೆ ಮಾಹಿತಿ ಬೇಕಿದ್ದರೆ ಆರ್ಬಿಐ ದಾಖಲೆಗಳನ್ನು ನೋಡಿ. ಈ ಕುರಿತು ಪಿಆರ್ಎಸ್ ಸಂಸ್ಥೆ ನಡೆಸಿರುವ ಅಧ್ಯಯನಗಳನ್ನು ಗಮನಿಸಿ. ಇದರಿಂದಾಗಿ ರಾಜ್ಯ ಮತ್ತು ದೇಶದ ಒಟ್ಟು ಸಾಲ ಈ ವರ್ಷದ ಕೊನೆಗೆ 235-240 ಲಕ್ಷ ಕೋಟಿಗಳಿಗೆ ಏರಿಕೆಯಾಗುತ್ತಿದೆ. ಇದು 2013-14 ರಲ್ಲಿ 75.23 ಲಕ್ಷ ಕೋಟಿಗಳಷ್ಟಿತ್ತು. ಆಗ ಪ್ರತಿ ಭಾರತೀಯರ ತಲೆಯ ಮೇಲೆ 57692 ಕೋಟಿಗಳಷ್ಟು ಸಾಲವಿದ್ದರೆ, ಇಂದು ದೇಶದಲ್ಲಿ 138+ ಕೋಟಿ ಜನಸಂಖ್ಯೆ ಇದೆ. 235-240 ಲಕ್ಷ ಕೋಟಿ ಸಾಲವಿರುವುದರಿಂದ ಪ್ರತಿಯೊಬ್ಬರ ತಲೆಯ ಮೇಲೆ 170290 ಲಕ್ಷ ರೂಪಾಯಿಗಳಿಗೂ ಹೆಚ್ಚು ಸಾಲವಿದೆ.
 8. ರಾಜ್ಯಗಳ ಸಾಲದ ಪ್ರಮಾಣ ಜಿಎಸ್ಡಿಪಿಗೆ ಎದುರಾಗಿ ಇಂದು ಶೇ.32 ನ್ನು ದಾಟುತ್ತಿದೆ. ಇದು ಶೇ. 25 ರ ಒಳಗೆ ಇರಬೇಕು. ರಾಜ್ಯ ಮತ್ತು ದೇಶದ ಒಟ್ಟು ಸಾಲ ಜಿಡಿಪಿಗೆ ಎದುರಾಗಿ ಶೇ. 60 ರ ಒಳಗೆ ಇರಬೇಕು. ಆದರೆ ಇಂದು ಶೇ.90 ರಷ್ಟನ್ನು ದಾಟುತ್ತಿದೆ. ದೇಶವು ದುಡಿದ 100 ರೂ ಹಣದಲ್ಲಿ 40 ರೂಗಿಂತ ಹೆಚ್ಚು ಹಣ ಬಡ್ಡಿ ಕಟ್ಟಲು ಖರ್ಚಾಗುತ್ತಿದೆ. ಇದೆಲ್ಲದರ ಅರಿವು ತಮಗೆ ಇಲ್ಲವೆ? ಇದು ಮೋದಿ ಸರ್ಕಾರ ಮಾಡಿದ ಮಹಾ ಡಿಸಾಸ್ಟರು ತಾನೆ?
 9. ಜೋಶಿಯವರು ಯುಪಿಎ ಸರ್ಕಾರ ಸಬ್ಸಿಡಿಗಳನ್ನು ನೀಡಿ ದೇಶವನ್ನು ಸಾಲದ ಕೂಪದಲ್ಲಿ ಮುಳುಗಿಸಿದ್ದರು. ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುವ ಕೆಟ್ಟ ಆರ್ಥಿಕ ನೀತಿಗಳನ್ನು ಸಿದ್ದರಾಮಯ್ಯನವರು ಅಭಿವೃದ್ಧಿ ಎಂದು ಕರೆಯುತ್ತಿದ್ದಾರೆ ಎಂದು ಬರೆದಿದ್ದಾರೆ. ಜೋಶಿಯವರೆ ಒಮ್ಮೆ ದೇಶದ ಜಿಡಿಪಿ ಬೆಳವಣಿಗೆಯನ್ನು ಒಮ್ಮೆ ನೋಡಿ. 2014 ರಲ್ಲಿ ಶೇ.7.41 ರಷ್ಟಿದ್ದ ಜಿಡಿಪಿ ಬೆಳವಣಿಗೆ ದರ 2016 ರ ನಂತರ ಒಂದೆ ಸಮನೆ ಕುಸಿಯುತ್ತಿದೆ. 2017 ರಲ್ಲಿ ಶೇ.6.80, 2018 ರಲ್ಲಿ ಶೇ.6.53, 2019 ರಲ್ಲಿ ಶೇ.4.04 ರಷ್ಟು, 2021 ರಲ್ಲಿ ಮೈನಸ್ ಶೇ.7.96 ರಷ್ಟಾಗಿದೆ. ಈ ಮಾಹಿತಿಯನ್ನು ಕೇಂದ್ರ ಸರ್ಕಾರವೆ ಬಿಡುಗಡೆ ಮಾಡಿದೆ. ಅದರ ಪ್ರಕಾರ ಯುಪಿಎ ನ ಮನಮೋಹನ್ ಸಿಂಗ್ ಸರ್ಕಾರದ ಜಿಡಿಪಿ ಬೆಳವಣಿಗೆ ದರ ಶೇ. 6.81 ರಷ್ಟಿತ್ತು. ಮೋದಿ ಸರ್ಕಾರದ ಜಿಡಿಪಿ ಬೆಳವಣಿಗೆ ದರ ಶೇ. 5.9 ನ್ನೂ ದಾಟುತ್ತಿಲ್ಲ. ಹಾಗಿದ್ದರೆ ಯಾರದ್ದು ಕೆಟ್ಟ ಆಡಳಿತ. ಯಾರು ದೇಶವನ್ನು ಬರ್ಬಾದು ಮಾಡುತ್ತಿದ್ದಾರೆ?
 10. ಮೋದಿಯವರ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಜನರ ಮೇಲಿನ ತೆರಿಗೆಯ ಹೊರೆಯನ್ನು ಇನ್ನಿಲ್ಲದಷ್ಟು ಹೆಚ್ಚಿಸಿದ್ದಾರೆ. 2013-14 ರಲ್ಲಿ ದೇಶದ ಬೊಕ್ಕಸಕ್ಕೆ ಜನರು ಕಟ್ಟುತ್ತಿದ್ದ ಪರೋಕ್ಷ ತೆರಿಗೆ 4.95 ಲಕ್ಷ ಕೋಟಿ. 2022-23 ರಲ್ಲಿ ನಮ್ಮದೆ ಜನರು ಜನರು ಕಟ್ಟುತ್ತಿರುವ ತೆರಿಗೆ 13.38 ಲಕ್ಷ ಕೋಟಿ. ಜನರ ಮೇಲಿನ ತೆರಿಗೆ ಹೊರೆ ಒಂದೇ ಸಮನೆ ಏರಿಕೆಯಾಗುತ್ತಿದೆ. ತೆರಿಗೆಯ ಜೊತೆಯಲ್ಲಿ ಮೋದಿಯವರ ಸರ್ಕಾರ ಸೆಸ್ಸುಗಳ ನೆಪದಲ್ಲಿ ಲೂಟಿ ಮಾಡುತ್ತಿದೆ. 2013-14 ರಲ್ಲಿ 1 ಲಕ್ಷ ಕೋಟಿಗಳಷ್ಟು ಸೆಸ್ಸನ್ನು ಸಂಗ್ರಹಿಸುತ್ತಿದ್ದರೆ ಅದು 2021-22 ರ ವೇಳೆಗೆ 4 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಲ್ಲಿ ರಾಜ್ಯಗಳಿಗೆ ನಯಾ ಪೈಸೆಯಷ್ಟು ಪಾಲಿಲ್ಲ.
 11. ಮನಮೋಹನಸಿಂಗ್ ಅವರ ನೇತೃತ್ವದ ಸರ್ಕಾರ 2013-14 ರಲ್ಲಿ ಪೆಟ್ರೋಲ್ ಮೇಲೆ 9.21 ರೂಗಳಷ್ಟು ಮತ್ತು ಡೀಸೆಲ್ ಮೇಲೆ 3.45 ರೂ ತೆರಿಗೆ ವಿಧಿಸುತ್ತಿತ್ತು. ಇದರಲ್ಲಿ ಸೆಸ್ ಇರಲಿಲ್ಲ. ಆದರೆ ಮೋದಿಯವರ ಸರ್ಕಾರ 2021 ರಲ್ಲಿ ಪೆಟ್ರೋಲ್, ಡೀಸೆಲ್ ದರಗಳನ್ನು ಪರಿಷ್ಕರಿಸಿದ ನಂತರವೂ ಸಹ ಪೆಟ್ರೋಲ್ ನಿಂದ 26.5 ರೂ ಹಾಗೂ ಡೀಸೆಲ್ ಮೇಲೆ 20 ರೂ ಸೆಸ್ ಅನ್ನು ಸಂಗ್ರಹಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಮುಂತಾದ ಸೆಸ್ ಗಳಿಂದಲೆ ಮೋದಿಯವರ ಸರ್ಕಾರ ಕಳೆದ 8 ವರ್ಷಗಳಿಂದ 26 ಲಕ್ಷ ಕೋಟಿ ರೂಗಳನ್ನು ಸಂಗ್ರಹಿಸಿದೆ.
 12. ಮೋದಿಯವರ ಸರ್ಕಾರ ಕರ್ನಾಟಕದಿಂದಲೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಸುಮಾರು 1.5 ಲಕ್ಷ ಕೋಟಿಗಳಷ್ಟು ಸೆಸ್ ಮತ್ತು ತೆರಿಗೆಗಳನ್ನು ಸಂಗ್ರಹಿಸಿದೆ. ಮನಮೋಹನಸಿಂಗ್ ಅವರ ಸರ್ಕಾರ 2013-14 ರಲ್ಲಿ ವರ್ಷಕ್ಕೆ ಗರಿಷ್ಟ ಅಂದರೆ 3.5 ಸಾವಿರ ಕೋಟಿ ರೂಗಳನ್ನು ಇಂಧನದ ಬಾಬತ್ತಿನಿಂದ ಕರ್ನಾಟಕದಿಂದ ಸಂಗ್ರಹಿಸಿದ್ದರೆ ಕಳೆದ ವರ್ಷ ಒಂದರಲ್ಲೆ 35000 ಕೋಟಿಗೂ ಹೆಚ್ಚು ಸೆಸ್ ಮತ್ತು ತೆರಿಗೆಗಳನ್ನು ಮೋದಿಯವರ ಸರ್ಕಾರ ಸಂಗ್ರಹಿಸಿದೆ.
 13. ಜನರ ಕಲ್ಯಾಣಕ್ಕಾಗಿ ನೀಡುವ ಸಬ್ಸಿಡಿಗಳನ್ನು ಜೋಶಿಯವರು ಗೇಲಿ ಮಾಡುತ್ತಿದ್ದಾರೆ. ಒಂದು ಅಡುಗೆ ಗ್ಯಾಸಿನ ಸಿಲಿಂಡರ್ ಬೆಲೆ 1000 ರೂ ದಾಟಿದೆ. ಅದು ಮನಮೋಹನಸಿಂಗ್ ರ ಕಾಲದಲ್ಲಿ 414 ರೂ ದಾಟಿರಲಿಲ್ಲ. 2014 ಕ್ಕೆ ಮೊದಲು ಒಂದು ಲೀಟರ್ ಡೀಸೆಲ್ 47 ರೂ ದಾಟಿರಲಿಲ್ಲ. ಪೆಟ್ರೋಲ್ 70 ರೂ ಆಸುಪಾಸಿನಲ್ಲಿತ್ತು. ಈಗ ಡೀಸೆಲ್ 110 ರೂ ವರೆಗೂ ತಲುಪಿತ್ತು. ಜನರ ಆಕ್ರೋಶದ ಕಾರಣಕ್ಕೆ ಈಗ ತುಸು ಇಳಿಸಲಾಗಿದೆ. ಆದರೂ ಕೆಎಸ್ಆರ್ಟಿಸಿ ಮುಂತಾದ ಸರ್ಕಾರಿ ಸಂಸ್ಥೆಗಳು ಸಗಟು ದರದಲ್ಲಿ ಖರೀದಿಸುವ ಡೀಸೆಲ್ ಮೇಲೆ ಪ್ರತಿ ಲಿಟರಿಗೆ 25 ರೂಗಳಷ್ಟು ಹೆಚ್ಚುವರಿಯಾಗಿ ಲೂಟಿ ಮಾಡುತ್ತಿದ್ದಾರೆ. ಈ ಸಂಸ್ಥೆಗಳು 113 ರೂ ಕೊಟ್ಟು ಡೀಸೆಲ್ ಖರೀದಿಸುತ್ತಿದ್ದಾರೆ. ಇದರಿಂದಾಗಿ ಪ್ರಯಾಣಿಕರ ಟಿಕೆಟ್ ದರಗಳು ಹೆಚ್ಚಾಗುತ್ತಿವೆ. ನಿಗಮಗಳು ನಷ್ಟಕ್ಕೆ ಗುರಿಯಾಗುತ್ತಿವೆ. ಎಲ್ಲಿ ಪೆಟ್ರೋಲ್, ಡೀಸೆಲ್ ದರಗಳು ಹೆಚ್ಚಾಗುತ್ತವೊ ಅಲ್ಲಿ ಅಭಿವೃದ್ಧಿ ಹಿನ್ನಡೆಯಾಗುತ್ತದೆ. ಹಣದುಬ್ಬರ, ಬೆಲೆಯೇರಿಕೆಗಳು ಸಂಭವಿಸುತ್ತವೆ.
 14. ಮೋದಿ ಸರ್ಕಾರದ ಮಹಾ ಜನದ್ರೋಹವೆಂದರೆ ಅದಾನಿ, ಅಂಬಾನಿ ಮುಂತಾದ ಕಾರ್ಪೋರೇಟ್ ಧಣಿಗಳ ಆದಾಯದÀ ಮೇಲಿನ ತೆರಿಗೆಯನ್ನು ಶೇ.30 ರಿಂದ ಶೇ. 22 ಕ್ಕೆ ಇಳಿಸಲಾಗಿದೆ. ಜನರ ಮೇಲೆ ತೆರಿಗೆ ಹೊರೆಯನ್ನು 2013 ಕ್ಕಿಂತ 2.7 ಪಟ್ಟು ಹೆಚ್ಚಿಸಲಾಗಿದೆ.
 15. ಒಂದು ಮಾತನ್ನು ತಿಳಿದುಕೊಳ್ಳಿ ಜೋಶಿಯವರೆ, ಯಾವ ಸರ್ಕಾರ ಜನರ ಬಳಿ ಇರುವ ಕಡೆಯ ಕಾಸನ್ನೂ ದೋಚಬೇಕೆಂದು ಹೊಂಚು ಹಾಕಿ ಬೆಕ್ಕಿನಂತೆ ಕುಳಿತಿರುತ್ತದೆಯೊ ಅದನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತ ಎನ್ನಲಾಗುತ್ತದೆಯೇ ಹೊರತು, ನರೇಗ [ ಉದ್ಯೋಗದ] ಆಹಾರ ಹಕ್ಕಿನ ಕಾಯಿದೆ, ಅರಣ್ಯ ಹಕ್ಕುಗಳ ಕಾಯ್ದೆ ಮತ್ತು ಹಲವಾರು ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದು ಜನರ ಜೇಬಿನಲ್ಲಿ ಹಣ ಇರುವಂತೆ ಹಾಗೂ ಜನರು ಹಸಿದು ಮಲಗದಂತೆ ನೋಡಿಕೊಳ್ಳುವುದನ್ನು ಗಾಂಧೀಜಿಯವರ ಕನಸಿನ ಆಡಳಿತ ಎನ್ನಲಾಗುತ್ತದೆ. ತುಸು ಸಮಾಧಾÀನÀದಿಂದ ಯೋಚಿಸಿ; 2012-13 ರಲ್ಲಿ ಕೇಂದ್ರದ ಬಜೆಟ್ ಗಾತ್ರ 14.91 ಲಕ್ಷ ಕೋಟಿ, ಆಗ 2.48 ಲಕ್ಷ ಕೋಟಿಗಳನ್ನು ವಿವಿಧ ಬಾಬತ್ತಿಗೆ ಸಬ್ಸಿಡಿ ರೂಪದಲ್ಲಿ ನೀಡಲಾಗಿತ್ತು. ಅದು ಬಜೆಟ್ಟಿನ ಶೇ.16.6 ರಷ್ಟು ಮೊತ್ತ. 2022-23 ರಲ್ಲಿ ಕೇಂದ್ರದ ಬಜೆಟ್ ಗಾತ್ರ 39.44 ಲಕ್ಷ ಕೋಟಿ ರೂ. ಆದರೆ ಸಬ್ಸಿಡಿ ನೀಡುತ್ತಿರುವುದು 3 ಲಕ್ಷ ಕೋಟಿ ಮಾತ್ರ. ಇದು ಬಜೆಟ್ ನ ಶೇ. 7.7 ರಷ್ಟು ಮಾತ್ರ.
 16. ಜೋಶಿಯವರೆ ಸರಿಯಾಗಿ ಓದಿಕೊಳ್ಳಿ ಮನಮೋಹನಸಿಂಗರ ಸರ್ಕಾರವಿದ್ದಾಗ ದೇಶದ ಸಾಲ ಕಡಿಮೆ ಇತ್ತು, ಜನರಿಗೆ ಸಬ್ಸಿಡಿಗಳು ಹಾಗೂ ಹಲವು ಸೌಲಭ್ಯಗಳಿದ್ದವು. ಜನರು ಕಟ್ಟುತ್ತಿದ್ದ ಪರೋಕ್ಷ ತೆರಿಗೆ ಕಡಿಮೆ ಇತ್ತು. ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿದ್ದವು. ಜನರ ಹಸಿವಿನ ಸಮಸ್ಯೆ ಕಡಿಮೆ ಮಾಡಬೇಕೆಂದು ಪ್ರಯತ್ನಿಸಿ ಆಹಾರದ ಹಕ್ಕಿನ ಕಾಯ್ದೆ ತರಲಾಗಿತ್ತು. ಆದರೆ ಮೋದಿಯವರ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಬೆಲೆಗಳು ಗಗನ ಮುಟ್ಟಿವೆ. ಜನರಿಂದ ತೆರಿಗೆಯನ್ನು ಲೂಟಿ ಮಾಡಲಾಗುತ್ತಿದೆ. ದೇಶದ ಆಂತರಿಕ ಮತ್ತು ವಿದೇಶಿ ಸಾಲ ತನ್ನೆಲ್ಲ ಮಿತಿಯನ್ನು ಮೀರಿ ಬೆಳೆದಿವೆ. ಸೆಸ್ಸುಗಳ ರೂಪದಲ್ಲಿ ಜನರನ್ನು ಲೂಟಿ ಮಾಡಲಾಗುತ್ತಿದೆ. ಯುವಜನರಿಗೆ ಉದ್ಯೋಗಾವಕಾಶಗಳಿಲ್ಲದೆ, ದುಡಿಯುವ ಅವಕಾಶಗಳಿಲ್ಲದೆ ದೇಶದ ಆರ್ಥಿಕತೆ ನೆಲ ಕಚ್ಚಿದೆ. ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದೆಯೆಂದು ನಾನು ರಾಜಕೀಯ ಮಾಡುವ ಉದ್ದೇಶದಿಂದ ಹೇಳುತ್ತಿದ್ದೇನೆಂಬ ಅರ್ಥದಲ್ಲಿ ಬರೆದಿದ್ದೀರಿ. ಆದರೆ ಇದೇ ವರ್ಷದ ಜೂನ್ 16 ಮತ್ತು 17 ರಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಸಭೆಯನ್ನು ಕೇಂದ್ರ ಸರ್ಕಾರ ಧರ್ಮಶಾಲಾದಲ್ಲಿ ನಡೆಸಿತ್ತು ,ಈ ಕುರಿತು ನಿಮಗೆ ಮಾಹಿತಿ ಇದೆಯೆ? ಆ ಸಭೆಯಲ್ಲಿ ರಾಜ್ಯಗಳು ಸಾಲ ಕಡಿಮೆ ಮಾಡಬೇಕು, ಸಬ್ಸಿಡಿಗಳಿಗೆ ಕತ್ತರಿ ಹಾಕಬೇಕು, ಇಲ್ಲದಿದ್ದರೆ ಭಾರತವು ಶ್ರೀಲಂಕಾ ಮತ್ತು ಪಾಕಿಸ್ತಾನದಂತೆ ದಿವಾಳಿಯಾಗುತ್ತದೆ, ರಾಜ್ಯಗಳ ವಿತ್ತೀಯ ಶಿಸ್ತು ಮಿತಿ ಮೀರುತ್ತಿದೆ ಹಾಗಾಗಿ ಜನರಿಂದ ಆಸ್ತಿ ತೆರಿಗೆ, ಮದ್ಯದ ಮೇಲಿನ ತೆರಿಗೆ, ಸರ್ಕಾರಿ ಸೇವೆಗಳ ಶುಲ್ಕ ಹೆಚ್ಚಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗಳ ಮೇಲೆ ಒತ್ತಡ ಹೇರಿದ್ದೀರಿ. ಆದರೆ ಕಾರ್ಪೊರೇಟ್ಗಳ ಮೇಲೆ ತೆರಿಗೆ ಹೆಚ್ಚಿಸಿ ಸಂಪನ್ಮೂಲ ಸಂಗ್ರಹಿಸಿ ಜನರ ಕಲ್ಯಾಣಕ್ಕೆ ಬಳಸಬಹುದೆಂಬ ಸಣ್ಣ ಯೋಚನೆಯೂ ನಿಮ್ಮ ಸರ್ಕಾರದ ಕನಸಿಗೂ ಬರಲು ಸಾಧ್ಯವಿಲ್ಲ ಅಲ್ಲವೆ? ಜನರನ್ನು ಹೇಗೆ ದೋಚಬಹುದು ಎಂಬ ದುಷ್ಟ ಐಡಿಯಾಗಳು ಮಾತ್ರವೆ ನಿಮ್ಮ ತಲೆಯಲ್ಲಿ ಓಡಾಡುತ್ತಿರುತ್ತವೆ. ಇಂಥ ಜನಪೀಡಕ ಸರ್ಕಾರವನ್ನು ಏನೆಂದು ಕರೆಯಬೇಕು ಹೇಳಿ? ನಿಮಗೆ ಆಡಳಿತ ನಡೆಸಲು ಬರುವುದಿಲ್ಲ, ಜಾಗ ಖಾಲಿ ಮಾಡಿ ಜನತೆಯ ಶತ್ರುಗಳೆ ಎಂದಷ್ಟೆ ಹೇಳಲು ಜನರು ತಯಾರಾಗುತ್ತಿದ್ದಾರೆ.
 17. ರಾಜ್ಯಕ್ಕೆ ಉದಾರವಾಗಿ ಅನುದಾನಗಳನ್ನು ಕೊಟ್ಟು ಉದ್ಧಾರ ಮಾಡಿದ್ದೇವೆ ಎಂದು ಬೇರೆ ಹೇಳಿಕೆ ಕೊಟ್ಟಿದ್ದೀರಿ. ಅಂದರೆ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಮಾಡುತ್ತಿರುವ ಆರ್ಥಿಕ, ರಾಜಕೀಯ ದಬ್ಬಾಳಿಕೆಗಳನ್ನು ರಾಜ್ಯದ ಸಂಸದರಾದ ನೀವೆ ಸಮರ್ಥಿಸುತ್ತಿದ್ದೀರಿ. ಹಾಗಾಗಿ ರಾಜ್ಯವು ಅನುಭವಿಸುತ್ತಿರುವ ಎಲ್ಲ ವೇದನೆ, ನೋವುಗಳಿಗೆ ನೀವೆ ಕಾರಣ. ರಾಜ್ಯದ ಪರವಾಗಿ ಪ್ರತಿಭಟನೆಗಳನ್ನು ದಾಖಲಿಸಿ ನ್ಯಾಯಯುತವಾಗಿ ಕೊಡಿಸಬೇಕಾದ ಅನುದಾನಗಳನ್ನು, ತೆರಿಗೆ ಹಂಚಿಕೆಯನ್ನು ಕೊಡಿಸಬೇಕಾದ ಜವಾಬ್ಧಾರಿ ನಿಮ್ಮ ಮೇಲೆ ಇದೆಯಲ್ಲವೆ? ಹಾಗಾದರೆ ನೀವೇನು ಮಾಡಿದ್ದೀರಿ?
 18. ರಾಜ್ಯಗಳಿಗೆ ಬೃಹತ್ ಕೊಡುಗೆ ಕೊಟ್ಟು ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದೀರಿ. ವಾಸ್ತವ ನೋಡಿ; 13 ನೇ ಹಣಕಾಸು ಆಯೋಗದವರೆಗೆ ತೆರಿಗೆ ಸಂಗ್ರಹದಲ್ಲಿ ಶೇ.32 ರಷ್ಟು ಅನುದಾನವನ್ನು ರಾಜ್ಯಗಳಿಗೆ ನಿಗಧಿಪಡಿಸಲಾಗಿತ್ತು. ಆದರೆ ವಾಸ್ತವವಾಗಿ ಶೇ.35 ಕ್ಕೂ ಹೆಚ್ಚು ಹಂಚಿಕೆಯನ್ನು ಯುಪಿಎ ಸರ್ಕಾರ ಮಾಡಿತ್ತು. ಮನಮೋಹನಸಿಂಗ್ ಅವರ ನೇತೃತ್ವದ ಸರ್ಕಾರವೆ 14 ನೆ ಹಣಕಾಸು ಆಯೋಗವನ್ನು ರಚನೆ ಮಾಡಿತ್ತು. ಈ ಆಯೋಗವು ರಾಜ್ಯಗಳಿಗೆ ಶೇ.42 ರಷ್ಟು ಪಾಲನ್ನು ಕೊಡಬೇಕೆಂದು ಶಿಫಾರಸ್ಸು ಮಾಡಿತ್ತು. ಈ ಆಯೋಗದ ಶಿಫಾರಸ್ಸುಗಳನ್ನು ಜಾರಿ ಮಾಡಬೇಕಾದ ಅವಕಾಶ ಮೋದಿ ಸರ್ಕಾರಕ್ಕೆ ಲಭಿಸಿತು. ಆದರೆ ಮೋದಿ ಸರ್ಕಾರ ಮಾಡಿದ್ದೇನು ಗೊತ್ತೆ? ಶೇ.42 ರಷ್ಟು ತೆರಿಗೆ ಹಂಚಿಕೆ ಮಾಡುವ ಬದಲಿಗೆ 2015-18 ರ ವರೆಗೆ ಶೇ. 35 ರಷ್ಟು ಹಂಚಿಕೆ ಮಾಡಿತು. 2019-20 ರಲ್ಲಿ ಶೇ.37, 2020-21 ರಲ್ಲಿ ಶೇ.29, 2021-22 ರಲ್ಲಿ ಶೇ. 31 ರಷ್ಟು ಮಾತ್ರ ಹಂಚಿಕೆ ಮಾಡಿತು. ಅಂದರೆ ರಾಜ್ಯಗಳಿಗೆ ಕೊಡಬೇಕಾದ ಅನುದಾನವನ್ನು ಕೊಡದೆ ಮೋಸ ಮಾಡಿದ ಮೋದಿಯವರ ಬಿಜೆಪಿ ಸರ್ಕಾರ ಜನರ ಮೆಚ್ಚುಗೆಗೆ ಅರ್ಹವೆ?
 19. ಮೋದಿ ಸರ್ಕಾರದ ದ್ರೋಹದಿಂದ ಕರ್ನಾಟಕದ ಸಂಕಷ್ಟವಂತೂ ಹೇಳತೀರದಾಗಿದೆ. 15ನೇ ಹಣಕಾಸು ಆಯೋಗವು ಒಟ್ಟಾರೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಭೀಕರ ಅನ್ಯಾಯ ಮಾಡಿದೆ. ಶೇ. 1.07 ರಷ್ಟು ಕಡಿಮೆ ಮಾಡಿದೆ. 14 ನೇ ಹಣಕಾಸು ಆಯೋಗವು ಶೇ.4.713 ರಷ್ಟು ಪಾಲನ್ನು ರಾಜ್ಯಕ್ಕೆ ಹಂಚಿಕೆ ಮಾಡಿದ್ದರೆ, 15ನೇ ಹಣಕಾಸು ಆಯೋಗವು ಅದನ್ನು ಶೇ.3.646 ಕ್ಕೆ ಇಳಿಸಿದೆ. ಇದರಿಂದಾಗಿ ರಾಜ್ಯಕ್ಕೆ ಶೇ.20 ಕ್ಕಿಂತ ಹೆಚ್ಚು ಅನ್ಯಾಯವಾಗಿದೆ. ಇದನ್ನು ಸರಿಪಡಿಸಲು ಜೋಶಿಯವರೆ ನೀವು ಏನು ಮಾಡಿದ್ದೀರಿ? ಈ ಹಣಕಾಸು ಆಯೋಗವು 5495 ಕೋಟಿರೂಗಳನ್ನು ಕೊಡಬೇಕೆಂದು ಶಿಫಾರಸ್ಸು ಮಾಡಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅದನ್ನು ಕೊಡುವುದಿಲ್ಲ ಎಂದರು ಅದನ್ನು ಕೊಡಿಸುವಲ್ಲಿ ಕೇಂದ್ರ ಸಚಿವರಾದ ನೀವೇನು ಮಾಡಿದ್ದೀರಿ.
 20. ಕೇಂದ್ರದ ಸಹಾಯಾನುಧನಗಳ ವಿಚಾರದಲ್ಲೂ ಅನ್ಯಾಯವಾಗುತ್ತಿದೆ. 2013-14 ರಲ್ಲಿ ಕೇಂದ್ರದ ಬಜೆಟ್ ಗಾತ್ರ 16.65 ಲಕ್ಷ ಕೋಟಿಗಳಷ್ಟಿತ್ತು. ಆಗ ಕೇಂದ್ರ ಪುರಸ್ಕøತ ಯೋಜನೆಗಳಲ್ಲಿ ರಾಜ್ಯದ ಪಾಲು 4080 ಕೋಟಿಗಳಷ್ಟಿದ್ದರೆ, ಕೇಂದ್ರದ ಪಾಲು 12231 ಕೋಟಿಗಳಷ್ಟಿತ್ತು. ಅಂದರೆ ಶೇ25 ರಷ್ಟು ರಾಜ್ಯ ಪಾಲು ನೀಡಿತ್ತು. ಶೇ.75 ರಷ್ಟು ಕೇಂದ್ರ ನೀಡಿತ್ತು. 2021-22 ರಲ್ಲಿ ಕೇಂದ್ರದ ಬಜೆಟ್ ಗಾತ್ರ 34.83 ಲಕ್ಷ ಕೋಟಿಗಳಷ್ಟಿತ್ತು. ರಾಜ್ಯದ ಕೇಂದ್ರ ಪುರಸ್ಕøತ ಯೋಜನೆಗಳಿಗಾಗಿ ಕೇಂದ್ರ ಬಿಡುಗಡೆ ಮಾಡಿದ್ದು 20383 ಕೋಟಿ, ರಾಜ್ಯ ಬಿಡುಗಡೆ ಮಾಡಿದ್ದು 22148 ಕೋಟಿ ರೂ. ಮಾತ್ರ. ದಿನೇ ದಿನೇ ರಾಜ್ಯದ ಪಾಲು ಹೆಚ್ಚಾಗುತ್ತಿದೆ, ಕೇಂದ್ರದ ಪಾಲು ಕಡಿಮೆಯಾಗುತ್ತದೆ. ಯೋಜನೆಗಳ ಹೆಸರು ಮಾತ್ರ ಕೇಂದ್ರದ್ದು ದುಡ್ಡು ಮಾತ್ರ ರಾಜ್ಯದ ಬೊಕ್ಕಸದ್ದು. ಇದನ್ನು ಸರಿಪಡಿಸಲು ತಮ್ಮಿಂದ ಯಾವ ಪ್ರಯತ್ನವಾಗಿದೆಯೆಂದು ರಾಜ್ಯದ ಜನರಿಗೆ ತಿಳಿಸುವಿರಾ?
 21. ಕೋವಿಡ್ ಅನ್ನು ಸಮರ್ಥವಾಗಿ ನಿಭಾಯಿಸಿದ್ದೇವೆಂದು ಜೋಶಿಯವರು ಹೇಳಿದ್ದಾರೆ. ಹಾಗಿದ್ದರೆ ಕಳೆದ ವರ್ಷ ಕೋವಿಡ್ ಅನ್ನು ಅತ್ಯಂತ ಕೆಟ್ಟದಾಗಿ ನಿಭಾಯಿಸಿದ ವಿಶ್ವದ 5 ಜನ ಅತಿ ಕೆಟ್ಟ ನಾಯಕರಲ್ಲಿ ಮೋದಿಯವರು ಮೊದಲ ಸ್ಥಾನದಲ್ಲಿದ್ದಾರೆ ಎಂದು ಭಾರತದ, ವಿಶ್ವದ ಅನೇಕ ಪತ್ರಿಕೆಗಳು ವರದಿ ಮಾಡಿದ್ದೇಕೆ? ನಿಮ್ಮ ಸರ್ಕಾರಕ್ಕೆ ಕನಿಷ್ಟ ಆಕ್ಸಿಜನ್, ಬೆಡ್, ವೆಂಟಿಲೇಟರುಗಳನ್ನು ಸರಿಯಾದ ಸಮಯಕ್ಕೆ ಕೊಡಲಾಗಲಿಲ್ಲ. ಪಿಎಂ ಕೇರ್ಸ್ ಎಂಬ ಹಣ ಸಂಗ್ರಹಿಸುವ ಹೊಸ ಉಪಾಯವನ್ನೂ ಮಾಡಿದಿರಿ. ಅದರಲ್ಲಿ ರಾಜ್ಯಕ್ಕೆ ಎಷ್ಟು ಕೊಟ್ಟಿದ್ದೀರಿ ಹೇಳಿ? 45-50 ಲಕ್ಷ ಜನ ಮರಣ ಹೊಂದಿದ್ದಾರೆಂದು ವಿಶ್ವದ ವಿವಿಧ ಸಂಸ್ಥೆಗಳ ವರದಿಗಳು ಹೇಳುತ್ತಿವೆ, ಮೋದಿಯವರ ಸರ್ಕಾರ ಈ ವಿಚಾರದಲ್ಲೂ ಸುಳ್ಳು ಹೇಳುತ್ತಿದೆಯೆಂದು ಹೇಳಿದರು. ಕರ್ನಾಟಕದಲ್ಲಿ ನಾವು ಎರಡು ವರ್ಷಗಳಿಂದ ಕೇಳುತ್ತಿದ್ದೇವೆ. 2020 ರ ಮಾರ್ಚ್ನಿಂದ ಈ ವರೆಗೆ ವಿವಿಧ ಕಾಯಿಲೆಗಳಿಂದ/ ಕಾರಣಗಳಿಂದ ಮರಣ ಹೊಂದಿದವರ ಸಂಖ್ಯೆ ಎಷ್ಟು ಎಂದು. ಈ ವರೆಗೂ ಮಾಹಿತಿ ನೀಡಿಲ್ಲ. ವೆಬ್ಸೈಟಿನಲ್ಲೂ ಮಾಹಿತಿ ಇಲ್ಲ. ಇದನ್ನು ಪಾರದರ್ಶಕ ಆಡಳಿತ ಎನ್ನಲು ಸಾಧ್ಯವೆ? ವ್ಯಾಕ್ಸಿನ್ ಬಗ್ಗೆ ಪ್ರಸ್ತಾಪಿಸಿದ್ದೀರಿ .ಜೋಶಿಯವರೆ, ನೀವು ವ್ಯಾಕ್ಸಿನ್ ಅಂಗಡಿ ತೆರೆಯಲು ಹೊರಟಿದ್ದಿರಿ ನೆನಪಿದೆಯೆ? ಆದರೆ ಸುಪ್ರೀಂ ಕೋರ್ಟು ಚಾಟಿ ಬೀಸಿದ ನಂತರ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದಿರಿ. ಕೆಲವು ಮೂಲಗಳ ಮಾಹಿತಿ ಪ್ರಕಾರ ಶೇ. 10-15ಕ್ಕಿಂತ ಹೆಚ್ಚು ಜನರಿಗೆ ಎರಡನೆ ವ್ಯಾಕ್ಸಿನ್ ನೀಡದೆ ನೀಡಲಾಗಿದೆಯೆಂದು ವರದಿ ಮಾಡಿ ಹಣ ನುಂಗಲಾಗಿದೆ ಎಂಬ ಮಾಹಿತಿ ಇದೆ. ಈ ಕುರಿತು ಸಮಗ್ರ ತನಿಖೆಯಾಗಬೇಕಾಗಿದೆ. ಮರಣ ಹೊಂದಿದವರಿಗೂ ವ್ಯಾಕ್ಸಿನ್ ನೀಡಲಾಗಿದೆ ಎಂದು ಸರ್ಟಿಫಿಕೇಟ್ ಕೊಟ್ಟಿರುವ ಹಲವು ದೂರುಗಳನ್ನು ಜನರು ನನಗೆ ಹೇಳಿದ್ದಾರೆ.
 22. ಯುಪಿಎ ಸರ್ಕಾರ ಭ್ರಷ್ಟಾಚಾರ ಎಸಗಿತ್ತು ಎಂದು ಹೇಳಿಕೆ ನೀಡಿದ್ದೀರಿ. ನೀವು ಅಧಿಕಾರಕ್ಕೆ ಬಂದು 8 ವರ್ಷ ಮುಗಿದು ಹೋದವು. ಈ ಎಂಟು ವರ್ಷಗಳಲ್ಲಿ ಯುಪಿಎ ಸರ್ಕಾರದಲ್ಲಿದ್ದಾಗ ಭ್ರಷ್ಟಾಚಾರ ಎಸಗಿದ್ದಾರೆಂದು ಎಷ್ಟು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಶಿಕ್ಷೆ ನೀಡಿದ್ದೀರಿ? ಎಷ್ಟು ಪ್ರಕರಣ ದಾಖಲಿಸಿದ್ದೀರಿ? ಎಷ್ಟು ಪ್ರಕರಣಗಳು ನ್ಯಾಯದಲ್ಲಿ ವಿಚಾರಣೆ ನಡೆದಿವೆ? ಹೇಳಿ. ನಿಮ್ಮದೆ ಸರ್ಕಾರವಿದೆ. ನೀವೀಗ ಆಡಳಿತ ಪಕ್ಷದ ಸದಸ್ಯರು, ನೀವು ಕಣ್ಣು ಮಿಟುಕಿಸಿದ ಕೂಡಲೆ ಹಗಲು ರಾತ್ರಿ ನಿದ್ರೆ ಬಿಟ್ಟು ಕುಣಿಯುವ ಐಟಿ, ಇಡಿ, ಸಿಬಿಐಗಳಿವೆ. ಆದರೂ ಯುಪಿಎ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿತ್ತು ಎಂದು ವಿರೋಧ ಪಕ್ಷದಲ್ಲಿ ಇರುವವರಂತೆ ಮಾತನಾಡುತ್ತಿದ್ದೀರೆ ಹೊರತು ಏನನ್ನೂ ಮಾಡಿದ್ದು ಕಾಣೆವು. ಇದರರ್ಥ ನಿಮಗೆ ಬೇಕಾದ ಸಿಎಜಿ, ಐಟಿ, ಇಡಿಗಳಲ್ಲಿದ್ದ ಜನರ ಮೂಲಕ ಯುಪಿಎ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿ ಅಧಿಕಾರಕ್ಕೆ ಬಂದಿದ್ದೀರೆ ಹೊರತು ಯುಪಿಎ ಸರ್ಕಾರ ನೈಜವಾಗಿ ಭ್ರಷ್ಟಾಚಾರ ಎಸಗಿರಲಿಲ್ಲ.
 23. ನೀವು ಹೇಳಿರುವ ಜೀವನ ಜ್ಯೋತಿ ಬಿಮಾ ಯೋಜನೆ, ಸುರಕ್ಷಾ ಯೋಜನೆ, ಜನಧನ್ ಯೋಜನೆ ಮುಂತಾದವುಗಳೆಲ್ಲ ಮಕಾಡೆ ಮಲಗಿವೆ. ನಿಮ್ಮ ಈ ಯೋಜನೆಗಳು ಎಷ್ಟು ಹುಸಿಯಾದವು ಎಂಬುದು ಕೋವಿಡ್ ಸಂದರ್ಭದಲ್ಲಿ ಪ್ರೂವ್ ಆಗಿದೆ. ಮರಣ ಹೊಂದಿದ 30 ದಿನಗಳ ಒಳಗೆ ದಾಖಲೆ ಸಮೇತ ಕ್ಲೇಮು ಸಲ್ಲಿಸಬೇಕೆಂದಿದೆ. ಮರಣ ಪ್ರಮಾಣ ಪತ್ರ ಪಡೆಯುವುದಕ್ಕೆ ಎಷ್ಟು ದಿನ ತೆಗೆದುಕೊಂಡರು ಎಂಬುದು ನಿಮ್ಮ ಅರಿವಿಗೆ ಬಂದಿದೆಯೆ?ಜನ್ಧsನ್ ಯೋಜನೆಗೆ ತೆರೆದ ಖಾಲಿ ಅಕೌಂಟುಗಳಿಗೆ ಬ್ಯಾಂಕು 3 ತಿಂಗಳಿಗೊಮ್ಮೆ ಬ್ಯಾಂಕುಗಳು 150 ರೂಗಳಿಗೂ ಹೆಚ್ಚು ಶುಲ್ಕ ವಿಧಿಸುತ್ತವೆ.
 24. ಜನರಿಗೆ ಸಾಲ ಕೊಡುವುದು, 1-2 ಲಕ್ಷ ವಿಮೆಯನ್ನು 140 ಕೋಟಿಯವರೆಗೆ ಇರುವ ಜನಸಂಖ್ಯೆಯಲ್ಲಿ 4-5 ಕೋಟಿ ಜನರಿಗೆ ಮಾಡಿಸುವುದು ದೊಡ್ಡ ಸಂಗತಿಯಲ್ಲ. ಈ ಯೋಜನೆಗಳ ವೈಫಲ್ಯಗಳ ಕುರಿತು ಗಂಟೆಗಟ್ಟಲೆ ಮಾತನಾಡಬಹುದಾಗಿದೆ. ಅಕೌಂಟು ತೆರೆಯುವ ಯೋಜನೆಗಳೆಲ್ಲ ಜನರನ್ನು ಲೂಟಿ ಮಾಡುವ ತಂತ್ರವೆ ಹೊರತು, ಜನರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳಲ್ಲ. 19-20 ಲಕ್ಷ ಕೋಟಿ ರೂಗಳನ್ನು ಸಂಗ್ರಹಿಸುವ ರಾಜ್ಯಕ್ಕೆ 741 ಕೋಟಿ, 144 ಕೋಟಿ ಕ್ಲೇಮುಗಳಾಗಿವೆ ಎಂದು ಬರೆಯುವುದೆ ಅವಮಾನಕಾರ ಸಂಗತಿ.
 25. ರಾಜ್ಯ- ಕೇಂದ್ರಗಳಲ್ಲಿ ಆಡಳಿತ ನಡೆಸುತ್ತಿರುವ ಡಬಲ್ ಎಂಜಿನ್ ಬಿಜೆಪಿ ಸರ್ಕಾರಗಳು ಯುವಜನರು, ಮಹಿಳೆಯರು, ಪರಿಶಿಷ್ಟ ಸಮುದಾಯಗಳ ಜನರಿಗೆ ಮಾಡಿರುವ ದ್ರೋಹಗಳದ್ದೆ ದೊಡ್ಡ ಕತೆಯಿದೆ. ಅದನ್ನು ಪ್ರತ್ಯೇಕವಾಗಿ ಬರೆಯುತ್ತೇನೆ.
 26. ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಭಾರತವನ್ನು ಚೀನಾದ ಗುಲಾಮಗಿರಿಗೆ ತಳ್ಳಲಾಗಿದೆ. ಜೋಶಿಯವರು ಕಲ್ಲಿದ್ದಲು ಸಚಿವರಾಗಿ ತಮ್ಮನ್ನು ತಾವು ಅದಾನಿ, ಅಂಬಾನಿ ಮುಂತಾದವರ ಗುಲಾಮಗಿರಿಗೆ ತೆತ್ತುಕೊಂಡಿದ್ದೀರಿ. ದೇಶದ ಭೀಕರ ಕಲ್ಲಿದ್ದಲಿನ ಬಿಕ್ಕಟ್ಟಿಗೆ ಇದೆ ಕಾರಣ.
 27. ಕಳೆದ ವರ್ಷ ಚೀನಾಕ್ಕೆ ಭಾರತವು ರಫ್ತು ಮಾಡಿದ್ದು 2.19 ಲಕ್ಷ ಕೋಟಿ ರೂ ಮೌಲ್ಯದ ಉತ್ಪನ್ನಗಳನ್ನು. ಆಮದು ಮಾಡಿಕೊಂಡದ್ದು 7.68 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು. ಒಂದೆ ವರ್ಷದಲ್ಲಿ 5.5 ಲಕ್ಷ ಕೋಟಿಗಳಷ್ಟು ಭಾರತೀಯರ ಸಂಪತ್ತು ಒಂದೆ ವರ್ಷದಲ್ಲಿ ಅನಾಮತ್ತಾಗಿ ಚೀನಾದ ಪಾಲಾಯಿತು. ಚೀನಾ ಭಾರತದ ಸಾವಿರಾರು ಕಿ.ಮೀಟರುಗಳಷ್ಟು ಭೂಪ್ರದೇಶವನ್ನು ಕಬಳಿಸಿದೆ. ಚೀನಾದ ದಾಳಿಯಲ್ಲಿ ನಮ್ಮ ಅನೇಕ ಯೋಧರು ಹುತಾತ್ಮರಾದರು. ಆದರೂ ಅವರೊಂದಿಗೆ ವ್ಯಾಪಾರ ಮಾಡಿಕೊಂಡು ಭಾರತವನ್ನು ಬಡತನದ ದವಡೆಗೆ ತಳ್ಳುವ ಮಹಾನ್ ಕಾರ್ಯಕ್ಕೆ ವಿಶ್ವಗುರು ಎನ್ನಲಾಗುತ್ತದೆಯೆ? ಎಂದು ಜೋಶಿಯವರು ಹೇಳಬೇಕು. ಇದನ್ನು ಗುಲಾಮಗಿರಿ ಎನ್ನದೆ ಬೇರೇನನ್ನಬೇಕು.
 28. 33913 ಕೋಟಿ ಮೌಲ್ಯದ ರಸ್ತೆ ಯೋಜನೆಗಳನ್ನು ಕರ್ನಾಟಕಕ್ಕೆ ನೀಡಲಾಗಿದೆ ಎಂದು ಜೋಶಿಯವರು ಮಾಧ್ಯಮಗಳಿಗೆ ಹೇಳಿದ್ದಾರೆ. ಅವರು ಕಳೆದ ವರ್ಷದ ಬಜೆಟ್ ನೋಡಬೇಕು. ಮೋದಿ ಸರ್ಕಾರ 2021 ರ ಬಜೆಟ್ ನಲ್ಲಿ ಒಂದೆ ವರ್ಷ ತಮಿಳುನಾಡಿಗೆ 1.03 ಲಕ್ಷ ಕೋಟಿಯಷ್ಟು ಅನುದಾನ ನೀಡಿದೆ. ಕೇರಳ ರಾಜ್ಯಕ್ಕೂ ಬೃಹತ್ ಮಟ್ಟದ ಅನುದಾನಗಳನ್ನು ಕೊಡಲಾಯಿತು. ಆದರೆ ಕರ್ನಾಟಕಕ್ಕೆ 2014 ರಿಂದ 2023 ರ ಮಾರ್ಚ್ ವರೆಗೆ 33913 ಕೋಟಿ ರೂ ನೀಡುವುದಾಗಿ ಹೇಳುತ್ತಿದ್ದಾರೆ. 19-20 ಲಕ್ಷ ಕೋಟಿ ಸಂಪನ್ಮೂಲ ಸಂಗ್ರಹಿಸುವ ರಾಜ್ಯಕ್ಕೆ ಕೇಂದ್ರ ಕೊಡುತ್ತಿರುವ ಈ ಅನುದಾನ ಅವಮಾನಕರವೆನ್ನಿಸುತ್ತಿಲ್ಲವೆ?
 29. ಶ್ರೀಮಾನ್ ಜೋಶಿಯವರೆ ನಿಮ್ಮ ಸರ್ಕಾರದ ದ್ರೋಹಗಳ ಪಟ್ಟಿ ಮುಗಿಯುವುದೆ ಇಲ್ಲ. ದೇಶದ ಆರ್ಥಿಕ ಪರಿಸ್ಥಿತಿ ವಿಪರೀತ ಹದಗೆಟ್ಟಿದೆ. ದೇಶದಲ್ಲಿ ಸಂತೋಷವೆಂಬುದು ತುಂಬಿ ತುಳುಕಾಡುತ್ತಿದ್ದರೆ ಅದು ನಿಮ್ಮ ಸರ್ಕಾರಗಳ ಮಂತ್ರಿಗಳಲ್ಲಿ, ನಿಮ್ಮ ತಾಳಕ್ಕೆ ಕುಣಿಯುವ ಅಧಿಕಾರಿಗಳಲ್ಲಿ ಹಾಗೂ 100 ಜನ ಕಾರ್ಪೊರೇಟ್ ಬಂಡವಾಳಿಗರಲ್ಲಿ, ಹೆಚ್ಚೆಂದರೆ ಶೇ.1 ರಷ್ಟು ಜನರಲ್ಲಿ ಮಾತ್ರ. ಆದರೂ ಶೇ. 30 ರಷ್ಟು ಅಮಾಯಕ ಜನರು ನಿಮ್ಮ ದ್ವೇಷ, ಎಕ್ಸ್ಕ್ಲೂಸಿವ್ ರಾಜಕಾರಣ, ಉನ್ಮಾದಕಾರಿ ಮಾತುಗಳ ಕಾರಣಕ್ಕೆ ಮತ ನೀಡುತ್ತಿದ್ದಾರೆ. ವಾಸ್ತವಾಂಶ ಅರ್ಥವಾದ ಕೂಡಲೆ ನೀವು ಶಾಶ್ವತವಾಗಿ ಅಧಿಕಾರದಿಂದ ಹೊರಗಿರುತ್ತೀರಿ ಎಂಬುದು ತಿಳಿದಿರಲಿ.
 30. ನಾನು ಹೇಳುತ್ತಿರುವ ಪ್ರತಿ ಸಂಗತಿಯನ್ನೂ ದಾಖಲೆಯನ್ನು ಆಧರಿಸಿಯೆ ಹೇಳಿಕೆ ನೀಡುತ್ತಿದ್ದೇನೆ. ನಾನು ಸುಳ್ಳು ಹೇಳಿದ್ದೇನೆಂದು ಆರೋಪಿಸಿ ಹುಸಿ ಮಾತುಗಳನ್ನು ಗಾಳಿಗೆ ತೂರಬೇಡಿ. ಒಂದು ಸಮಗ್ರ ಶ್ವೇತಪತ್ರವನ್ನು 1999 ರಿಂದ ಈ ವರೆಗೆ ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಹೊರಡಿಸಬೇಕೆಂದು ಒತ್ತಾಯಿಸುತ್ತೇನೆ.
 31. ಮೋದಿಯವರ ಸರ್ಕಾರಕ್ಕೆ ನಿಜಕ್ಕೂ ಧಮ್ ಇದ್ದರೆ ಯುಪಿಎ ಸರ್ಕಾರದ ಕಾಲಕ್ಕೆ ನಿಂತು ಹೋಗಿರುವ ಎನ್ಎಸ್ಎಸ್ಒ ಸರ್ವೆಗಳನ್ನು ಕೂಡಲೆ ಮಾಡಿಸಬೇಕು. ಸಚಿವರಾಗಿ ನೀವು ಅದರ ಜವಾಬ್ಧಾರಿ ಹೊರಬೇಕು. 2018 ರಲ್ಲಿ ಮಾಡಿದ ಸರ್ವೆ ವರದಿಯನ್ನು ಬಿಡುಗಡೆ ಮಾಡಿಸಬೇಕು. ಯುಪಿಎ ಸರ್ಕಾರದ ಅವಧಿಯಲ್ಲಿ ಸಿಎಜಿ ಆಡಿಟ್ ವರದಿಗಳೆಷ್ಟನ್ನು ಪ್ರತಿ ವರ್ಷ ಮಾಡಲಾಗುತ್ತಿತ್ತು? ಈಗ ಎಷ್ಟು ಮಾಡಲಾಗುತ್ತಿದೆ? ತಾವು ಭ್ರಷ್ಟರಲ್ಲದಿದ್ದರೆ, ಜನರ ಬದುಕು ಸುಧಾರಣೆಯಾಗಿದ್ದರೆ ಈ ಕೆಲಸಗಳನ್ನು ತಾವು ಮೊದಲು ಮಾಡಬೇಕೆಂದು ಒತ್ತಾಯಿಸುತ್ತೇನೆ. ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಾರ್ಪೊರೇಟ್ ಭ್ರಷ್ಟಾಚಾರ ಯಾವ ಮಟ್ಟದ್ದು ಎಂದು ಭವಿಷ್ಯತ್ತು ದೇಶಕ್ಕೆ ವಿವರಿಸುತ್ತದೆ. ಈಗಾಗಲೆ ಶ್ರೀಲಂಕಾ, ಆಸ್ಟ್ರೇಲಿಯ, ಮುಂತಾದ ಕಡೆ ಅದಾನಿ ಕಂಪೆನಿಗೆ ಯಾವ ಅನುಕೂಲ ಮಾಡಿಕೊಡಲು ಸರ್ಕಾರ ಏನೇನೆಲ್ಲ ಮಾಡಿದೆ ಎಂಬುದೆಲ್ಲ ಮುಂದಿನ ದಿನಗಳಲ್ಲಿ ಬೆಳಕಿಗೆ ಬರಲಿದೆ. ಸತ್ತ ಇಲಿಯ ವಾಸನೆಯನ್ನು ಬಹಳ ಕಾಲ ಬಚ್ಚಿಡಲಾಗದು.
 32. ಶ್ರೀಮಾನ್ ಜೋಶಿಯವರೆ, ನನ್ನನ್ನು ಹೀಗಳೆಯುವ ಮೊದಲು ತಾವು ಆರ್ ಎಸ್ ಎಸ್, ಮೋದಿ ಅಮಿತ್ ಶಾ ಅವರ ಗುಲಾಮಗಿರಿಯಿಂದ ಹೊರಬರಬೇಕು. ಹಾಗೆಯೆ ಅದಾನಿ, ಅಂಬಾನಿಗಳ ಗುಲಾಮಗಿರಿಯಿಂದಲೂ ಹೊರಬೇಕು. ಆ ಮೂಲಕ ನೀವು ಕನ್ನಡದ ಸ್ವಾಭಿಮಾನವನ್ನು ಎತ್ತಿ ಹಿಡಿದು ರಾಜ್ಯದ ಭವ್ಯ ಸ್ವಾಭಿಮಾನದ ಪರಂಪರೆಯನ್ನು ಉಳಿಸಬೇಕೆಂದು ಕೋರುತ್ತೇನೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ