ನವದೆಹಲಿ: ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ 20 ರೂ. ಬೆಲೆಯ ಒಂದು ಕಪ್ ಚಹಾ ಕ್ಕೆ 50 ರೂ. ಸೇವಾ ಶುಲ್ಕ ನೀಡಿರುವ ಕುರಿತಾದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಜೂನ್ 28ರಂದು ಪ್ರಯಾಣಿಕನೊಬ್ಬ ದಿಲ್ಲಿಯಿಂದ ಭೋಪಾಲ್ ಗೆ ಶತಾಬ್ದಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಖರೀದಿಸಿದ ಒಂದು ಕಪ್ ಚಹಾಗೆ 70 ರೂ. ಖರ್ಚು ನೀಡಬೇಕಾಗಿತ್ತು. ಅದರಲ್ಲಿ ಚಹಾಗೆ ಕೇವಲ 20 ರೂ. ಆಗಿದ್ದರೆ, ಅದರ ಸೇವಾಶುಲ್ಕವೇ 50ರೂ. ಆಗಿರುವುದು ಕಂಡು ಶಾಕ್ ಆಗಿದ್ದಾನೆ.
ಈ ಕುರಿತ ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ವಿಮಾನ ಪ್ರಯಾಣ ವೇಳೆ ಒಂದು ಕಪ್ ಚಹಾ ಸೇವಿಸಿದರೂ ಅದರ ಬೆಲೆ ದುಬಾರಿಯಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ರೈಲು ಪ್ರಯಾಣದ ವೇಳೆ ಇಷ್ಟು ದುಬಾರಿ ಸೇವಾ ಶುಲ್ಕ ಮಧ್ಯಮ ಜನರಿಗೆ ಚಿಂತಿಸುವಂತಾಗಿದೆ.
ಆದರೆ ಈ ಬಗ್ಗೆ ಸಮರ್ಥಿಸಿಕೊಂಡಿರುವ ರೈಲ್ವೆ ಇಲಾಖೆ, ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ವೇಳೆಯೇ ಪ್ರಯಾಣ ಅವಧಿಯಲ್ಲಿನ ಪ್ರೀ ಆರ್ಡರ್ ಫುಡ್ ಬಗ್ಗೆ ಯಾವುದೇ ಮಾಹಿತಿ ನೀಡದಿದ್ದರೆ, ಅವರು ಪ್ರಯಾಣದ ವೇಳೆ ಊಟ, ಉಪಾಹಾರ, ಚಹಾ, ಕಾಫಿ ಹೀಗೆ ಯಾವುದಕ್ಕೇ ಆರ್ಡರ್ ಮಾಡಿದರೂ 50 ರೂ. ಸೇವಾ ಶುಲ್ಕ ನೀಡಬೇಕಾಗುತ್ತದೆ. 2018ರಲ್ಲಿಯೇ ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಹೇಳಿದೆ.