ಮಂಗಳೂರು: ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್, ಮುಹಮ್ಮದ್ ಝುಬೈರ್ ಬಂಧನ ಖಂಡಿಸಿ SDPI ಪ್ರತಿಭಟನೆ

Prasthutha|

ಫ್ಯಾಶಿಸ್ಟ್ ಶಕ್ತಿ ತನ್ನ ಕರಾಳ ಸ್ವರೂಪ ಪ್ರದರ್ಶಿಸುತ್ತಿದೆ: ಪ್ರೊ. ಪಟ್ಟಾಭಿರಾಮ ಸೋಮಯಾಜಿ

- Advertisement -

ಮಂಗಳೂರು: ಫ್ಯಾಶಿಸ್ಟ್ ಶಕ್ತಿಗಳು ದೇಶದಲ್ಲಿ ಪ್ರಬಲಗೊಳ್ಳುತ್ತಿದ್ದು, ಅದು ತನ್ನ ಕರಾಳವಾದ ನಿಜ ಸ್ವರೂಪವನ್ನು ಪ್ರದರ್ಶಿಸುತ್ತಿದೆ. ಈ ಸಮಯದಲ್ಲಾದರೂ ನಾವು ಭಿನ್ನಾಭಿಪ್ರಾಯವನ್ನು ಬದಿಗಿಟ್ಟು ನಮ್ಮೆಡೆಗೆ ದಾಪುಗಾಲಿಟ್ಟು ನುಗ್ಗಿ ಬರುತ್ತಿರುವ ಫ್ಯಾಶಿಸ್ಟ್ ಶಕ್ತಿಯನ್ನು ತಡೆಯದಿದ್ದರೆ ಮುಂದೆ ನಮ್ಮ ಬಗ್ಗೆ ಮಾತನಾಡುವವರೇ ಇರಲಾರರು ಎಂದು ಹಿರಿಯ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ.ಪಟ್ಟಾಭಿರಾಮ ಸೋಮಯಾಜಿ ಎಚ್ಚರಿಸಿದ್ದಾರೆ.


ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ , ನಿವೃತ್ತ ಐಪಿಎಸ್ ಅಧಿಕಾರಿ ಶ್ರೀಕುಮಾರ್, ಪತ್ರಕರ್ತ ಮುಹಮ್ಮದ್ ಝುಬೈರ್ ಬಂಧನ ಖಂಡಿಸಿ ಸೋಶಿಯಲ್ ಇಂಡಿಯಾ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐ ಮಂಗಳೂರಿನ ಕ್ಲಾಕ್ ಟವರ್ ಬಳಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನ್ಯಾಯದ ಮಾರ್ಗದಲ್ಲಿ ತೀಸ್ತಾ ಸೆಟಲ್ವಾಡ್ ಹೋರಾಟ ನಡೆಸಿದ್ದಾರೆ. ಗುಜರಾತ್ ಗಲಭೆಗೆ ಸಂಬಂಧಿಸಿ ಮೋದಿಯವರ ಕೈಯಲ್ಲಿ ರಕ್ತ ಅಂಟಿದೆ ಎಂದು ಅವರು ದಾಖಲೆ ಸಮೇತ ನ್ಯಾಯಾಲಯದ ಗಮನಕ್ಕೆ ತಂದಿದ್ದರು. ಆದರೆ ನರೇಂದ್ರ ಮೋದಿ ಮಾಡಿದ್ದು ಸರಿಯೇ, ತಪ್ಪೇ ಎಂದು ಕೇಳಿದ್ದಕ್ಕೆ ಉತ್ತರಕೊಡುವುದನ್ನು ಬಿಟ್ಟು ನ್ಯಾಯಾಲಯ, ನೀವು ಕೋರ್ಟ್ ಗೆ ಬಂದಿದ್ದೇ ತಪ್ಪು ಎಂದು ಹೇಳಿದೆ. ನ್ಯಾಯಾಲಯಕ್ಕೆ ಏನಾಗಿದೆ ಎಂದು ಅವರು ಪ್ರಶ್ನಿಸಿದರು.

- Advertisement -


ತೀಸ್ತಾ ಸೆಟಲ್ವಾಡ್, ಶ್ರೀಕುಮಾರ್ ಹಾಗೂ ಸಂಜೀವ್ ಭಟ್ ಅವರ ವಿರುದ್ಧ ನೀಡಿರುವ ನ್ಯಾಯಾಲಯದ ತೀರ್ಪನ್ನು ಜಗತ್ತಿನ 2600 ಅತಿ ಗಣ್ಯ ವ್ಯಕ್ತಿಗಳು ಘಂಟಾಘೋಷವಾಗಿ ವಿರೋಧಿಸಿದ್ದಾರೆ. ಆದ್ದರಿಂದ ನಾವು ಕೂಡ ಇದನ್ನು ಬಹಿರಂಗವಾಗಿಯೇ ಖಂಡಿಸುತ್ತಿದ್ದೇವೆ. ಸತ್ಯ ಯಾವತ್ತೂ ತಲೆಲೆಕ್ಕದಲ್ಲಿ ತೀರ್ಮಾನವಾಗಬಾರದು, ಕಾನೂನಿನ ಪ್ರಕಾರ ತೀರ್ಮಾನವಾಗಬೇಕು ಎಂದು ಸೋಮಯಾಜಿ ಹೇಳಿದರು.
ಸತ್ಯ ಹೇಳುವ, ಪ್ರಜ್ಞಾವಂತಿಕೆಯ ಜನ ಸರ್ಕಾರಕ್ಕೆ ತಲೆನೋವಾಗಿದ್ದಾರೆ. ಆದ್ದರಿಂದ ಮುಹಮ್ಮದ್ ಝುಬೈರ್ ರಂತಹ ಪತ್ರಕರ್ತರನ್ನು ಬಂಧಿಸಲಾಗುತ್ತಿದೆ. ಉದಯಪುರ ಘಟನೆಯನ್ನು ಎಲ್ಲರೂ ಪೈಪೋಟಿಯಿಂದ ಖಂಡಿಸುತ್ತಿದ್ದಾರೆ. ಆರೋಪಿಗಳನ್ನು ಗಲ್ಲಿಗೇರಿಸಿ, ಕಲ್ಲು ಹೊಡೆದು ಸಾಯಿಸಿ ಎಂದು ಹೇಳುತ್ತಿದ್ದಾರೆ. ಈ ರೀತಿ ಖಂಡಿಸುವವರಲ್ಲಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ. ಯಾರೋ ಒಬ್ಬ ಹಿಂದೂ ವ್ಯಕ್ತಿ ತಪ್ಪು ಮಾಡಿದ್ದರೆ ಅವನು ಮಾತ್ರ ಅಪರಾಧಿ. ಆದರೆ ಮುಸ್ಲಿಮ್ ವ್ಯಕ್ತಿ ತಪ್ಪು ಮಾಡಿದಾಗ ಆತನ ಇಡೀ ಸಮುದಾಯ ಕೊಲೆಗಡುಕರು ಎಂದು ಕರೆಯುತ್ತಿರುವುದು ಅಪಾಯಕಾರಿ ಮನೋಸ್ಥಿತಿ ಎಂದು ಟೀಕಿಸಿದರು.
ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ, ತೀಸ್ತಾ ಸೆಟಲ್ವಾಡ್ ಕುರಿತು ನ್ಯಾಯಾಲಯ ನೀಡಿರುವ ತೀರ್ಪು ಆಘಾತಕಾರಿಯಾದುದು. ಬಿಜೆಪಿ ಮತ್ತು ಸಂಘಪರಿವಾರದ ಸುಳ್ಳುಗಳನ್ನು ಬಹಿರಂಗಪಡಿಸುತ್ತಿದ್ದುದರಿಂದ ಪತ್ರಕರ್ತ ಮುಹಮ್ಮದ್ ಝುಬೈರ್ ಅವರನ್ನು ಬಂಧಿಸಲಾಗಿದೆ. ಇಂತಹ ಕ್ರೌರ್ಯಗಳು
ಹೋರಾಟ ಹತ್ತಿಕ್ಕುವ ಪ್ರಯತ್ನಗಳಾಗಿವೆ. ಈ ದೇಶ ಜಾತ್ಯತೀತ ಸಿದ್ಧಾಂತದ ದೇಶವಾಗಿದ್ದು, ಸರ್ವಾಧಿಕಾರಿ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿದರು.


ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಮಾತನಾಡಿ, ದೇಶದಲ್ಲಿ ಸಂಘಪರಿವಾರದ ವಿಕೃತಿಗಳನ್ನು ವೈಭವೀಕರಿಸುವ ಹಾಗೂ ನ್ಯಾಯಕ್ಕಾಗಿ ಧ್ವನಿ ಎತ್ತುವುದನ್ನು ತಪ್ಪು ಎನ್ನುವಂತಹ ವಾತಾವರಣ ಸೃಷ್ಟಿಸಲಾಗಿದೆ. ಸಂಘಪರಿವಾರ ಎಂಬ ಕ್ಯಾನ್ಸರ್ ಅನ್ನು ಇಲ್ಲವಾಗಿಸಲು ಗಲ್ಲಿ ಗಲ್ಲಿಗಳಲ್ಲಿ ಹೋರಾಟ ನಡೆಯಬೇಕು. ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಯಬೇಕಾಗಿದೆ ಎಂದು ಹೇಳಿದರು.


ಪಕ್ಷದ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಮಾತನಾಡಿ, ಬಿಜೆಪಿ ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರದ ವಿರುದ್ಧ ಮಾತನಾಡುವವರನ್ನು ಜೈಲಿಗೆ ತಳ್ಳುವ ಕೆಲಸ ನಡೆಸುತ್ತಿದೆ. ಸರ್ಕಾರದ ಕ್ರೌರ್ಯ ಮತ್ತು ಜನವಿರೋಧಿ ನೀತಿಗಳನ್ನು ವಿರೋಧ ಪಕ್ಷಗಳು ಸಮರ್ಪಕವಾಗಿ ಪ್ರತಿಭಟಿಸುತ್ತಿಲ್ಲ. ಇದರಿಂದಾಗಿ ಸರ್ಕಾರ ತನ್ನ ಜನವಿರೋಧಿ ನೀತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ. ಆದರೆ ಇದನ್ನು ಎಸ್ ಡಿಪಿಐ ತೀವ್ರವಾಗಿ ವಿರೋಧಿಸಲಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದಾತ್ ಬಜತ್ತೂರು ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.



Join Whatsapp