ಮುಂಬೈ: ಮಹಾವಿಕಾಸ್ ಆಘಾಡಿ ಮೈತ್ರಿ ಸರ್ಕಾರ ವಿಶ್ವಾಸಮತ ಕಳೆದುಕೊಂಡಿರುವ ಕಾರಣ ಬಹುಮತ ಸಾಬೀತು ಪ್ರಕ್ರಿಯೆ ನಡೆಸುವಂತೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ರಾಜ್ಯಪಾಲರು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ದೇವೇಂದ್ರ ಫಡ್ನವೀಸ್ ಅವರು ರಾಜ್ ಠಾಕ್ರೆ ಜೊತೆ ದೂರವಾಣಿ ಮೂಲಕ ಮಾತನಾಡಿ, ವಿಶ್ವಾಸಮತಯಾಚನೆ ವೇಳೆ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ಇದಕ್ಕೆ ಠಾಕ್ರೆ ಸಹಮತ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ 288 ವಿಧಾನಸಭೆಯಲ್ಲಿ ಎಂಎನ್ ಎಸ್ ಓರ್ವ ಶಾಸಕನನ್ನು ಹೊಂದಿದೆ. ಬಿಜೆಪಿ 105 ಸದಸ್ಯ ಬಲ ಹೊಂದಿದೆ. ಉಳಿದಂತೆ, ಸಮ್ಮಿಶ್ರ ಆಘಾಡಿ ಸರ್ಕಾರದಲ್ಲಿ 169 ಸದಸ್ಯರಿದ್ದಾರೆ. ಎನ್ಸಿಪಿ 53, ಕಾಂಗ್ರೆಸ್ 44 ಹಾಗೂ ಶಿವಸೇನೆಯ 56 ಶಾಸಕರಿದ್ದಾರೆ. ಇದೀಗ ಶಿವಸೇನೆಯ 50 ಶಾಸಕರು ಬಂಡಾಯವೆದ್ದ ಕಾರಣ ಮೈತ್ರಿ ಸರ್ಕಾರ ಪತನದ ಹಾದಿ ಹಿಡಿದಿದೆ.