►ಮಂಗಳೂರಿನ ಎ.ಬಿ ಶೆಟ್ಟಿ ಸರ್ಕಲ್ ಹೆಸರು ಬದಲಿಸುವುದು ಅಕ್ಷಮ್ಯ !
ಮಂಗಳೂರು: ಕಯ್ಯಾರ ಕಿಞಣ್ಣ ರೈ ಹೆಸರನ್ನು ಪಠ್ಯದಿಂದ ಕೈಬಿಟ್ಟಿರುವುದು ನಮ್ಮ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಯ್ಯಾರ ಕಿಞ್ಞಣ್ಣ ರೈಯವರದು ಮೇರು ವ್ಯಕ್ತಿತ್ವ. ಅವರು ಏಕೀಕರಣ ಪ್ರಶಸ್ತಿ ವಿಜೇತರು. ಹಾಗಿರುವಾಗ ಅವರ ಹೆಸರು ತೆಗೆಯುವ ಅಗತ್ಯ ಏನಿತ್ತು, ಅಲ್ಲದೆ ಎ. ಬಿ. ಶೆಟ್ಟಿ ಸರ್ಕಲ್ ಹೆಸರನ್ನು ಬದಲಿಸುತ್ತಿರುವುದಾಗಿ ತಿಳಿದು ಬಂದಿದೆ. ಇದು ಕೂಡ ಅಕ್ಷಮ್ಯ ಎಂದು ತಿಳಿಸಿದರು.
ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಯಾವ ಪ್ರಶಸ್ತಿ ಹೊಸದಾಗಿ ಬರಬೇಕಾಗಿಲ್ಲ. ಆದರೆ ಅವರ ಹೆಸರನ್ನು ಪಠ್ಯದಿಂದ ತೆಗೆದಿರುವುದು ನಮ್ಮ ಸಮಾಜಕ್ಕೆ ಮಾಡಿದ ಅವಮಾನವಾಗಿದೆ ಎಂದರು.
ಎ. ಬಿ. ಶೆಟ್ಟಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದವರು. ರಾಜಕೀಯದಲ್ಲಿ ಬಹಳಷ್ಟು ಸಾಧನೆ ಮಾಡಿದವರು. ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಬಂಟರ ಸಂಘದ ಸ್ಥಾಪನೆಯಲ್ಲೂ ಅವರ ಪಾತ್ರವಿದೆ. ಆ ಸುಂದರ ವೃತ್ತದ ಹೆಸರು ಬದಲಿಸುವುದು ಅವೈಜ್ಞಾನಿಕ ಹಾಗೂ ದುರುದ್ದೇಶದ್ದಾಗಿದೆ. ಬಿಲ್ಲವರಿಗೆ ಸಿಟ್ಟು ಬರುವಂತೆ ಮಾಡಿದ್ದಾರೆ ಎಂದು ಹೇಳಿದರು.
ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಬಿಲ್ ಮಾಡಲು ವೃತ್ತದ ಹೆಸರು ಬದಲಿಸಬೇಕೆ? ಕಂಡಲ್ಲಿ ಒಡೆದು ಅಧ್ವಾನ ಮಾಡಬೇಕೆ ಎಂದು ಅವರು ಪ್ರಶ್ನಿಸಿದರು.
ಎ. ಬಿ. ಶೆಟ್ಟಿಯವರ ನಾಲ್ಕನೆ ತಲೆಮಾರಿನ ಲಕ್ಷ್ಮೀ ಎಸ್. ಶೆಟ್ಟಿಯವರು ಮಾತನಾಡಿ, ನಮ್ಮ ಮುತ್ತಾತ ಇಡೀ ರಾಜ್ಯದಲ್ಲಿ ಹಾಗೂ ದೇಶ ಮಟ್ಟದಲ್ಲಿಯೂ ಸೇವೆ ಸಲ್ಲಿಸಿದವರು. ವೃತ್ತದ ಅವರ ಹೆಸರು ತೆಗೆಯುವುದು ನಮಗೆಲ್ಲ ನೋವು ತಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಟ್ರೆಶರರ್ ಕೃಷ್ಣ ಪ್ರಸಾದ ರೈ, ವಸಂತ ಶೆಟ್ಟಿ, ರವೀಂದ್ರನಾಥ ಶೆಟ್ಟಿ, ಸಿದ್ಧಾರ್ಥ ಮೊದಲಾದವರು ಉಪಸ್ಥಿತರಿದ್ದರು.