ಮಂಗಳೂರು: ಮಕ್ಕಳಿಗೆ ವಿವಾದಿತ ಪಠ್ಯ ಪುಸ್ತಕ ಇನ್ನೂ ತಲುಪಿಲ್ಲ. ಈಗಾಗಲೇ ಪುಸ್ತಕ ತಯಾರಾಗಿದೆ. ಆದರೆ ಮುಖ್ಯಮಂತ್ರಿಗಳು ಪರಿಷ್ಕರಿಸುತ್ತೇವೆ ಎಂದು ಹೇಳಿದ್ದು ಯಾವುದನ್ನು? ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಪ್ರಶ್ನಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಗೆ ವಿವಾದಿತ ಚಕ್ರತೀರ್ಥರನ್ನು ಕರೆಸಿ ಸನ್ಮಾನ ಹಮ್ಮಿಕೊಂಡ ಸೇವಾಂಜಲಿ ಸಂಸ್ಥೆ ಯಾವುದು? ನಾವು ಈ ಬೆದರಿಕೆಗೆ ಬಗ್ಗುವುದಿಲ್ಲ. ತಾಕತ್ತಿಲ್ಲದ ಅವರು ಸನ್ಮಾನ ಕಾರ್ಯಕ್ರಮ ರದ್ದುಗೊಳಿಸಿದೆ. ಇನ್ನೊಮ್ಮೆ ಮಾಡಲಿ ಇಲ್ಲಿನ ವಿಚಾರಪ್ರಿಯರೂ ಹೆದರುವುದಿಲ್ಲ ಎಂದೂ ಹರೀಶ್ ಕುಮಾರ್ ಹೇಳಿದರು.
ನಾರಾಯಣ ಗುರುಗಳ ಟ್ಯಾಬ್ಲೋ ಕೈಬಿಟ್ಟದ್ದು, ವಿಜಯ ಬ್ಯಾಂಕನ್ನು ಬೇರೆ ಬ್ಯಾಂಕಿನೊಳಕ್ಕೆ ಸೇರಿಸಿದ್ದು ಎಂದು ತುಳುವರನ್ನು ಅವಮಾನಿಸುವ ಕೆಲಸವನ್ನು ಬಿಜೆಪಿಯವರು ಮಾಡಿದ್ದಾರೆ. ಈಗ ಏಕೀಕರಣ ಹೋರಾಟದಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರು ಬದಲಿಸಿ ಮಂಗೇಶ್ಕರ ಗೋವಿಂದ ಪೈ ಹೆಸರು ಸೇರಿಸಿದ್ದಾರೆ. ಪೈಗಳು ಭಾಷಾ ವಿಜ್ಞಾನಿ, ರಾಷ್ಟ್ರ ಕವಿ. ಆದರೆ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು ಕಯ್ಯಾರ ಕಿಞ್ಞಣ್ಣ ರೈಗಳು. ಕವಿಯಾದ ಅವರು ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಆದರೆ ಅವರನ್ನು 16 ವರುಷ ಬದಿಯಡ್ಕ ಅಧ್ಯಕ್ಷರಾಗಿ ಗೆದ್ದವರು ಮಾಡಿದ್ದರು ಎಂದು ಮಿಥುನ್ ರೈ ಹೇಳಿದರು.
ತುಳುವರನ್ನು ಅವಮಾನಿಸುವ ಬಿಜೆಪಿಯವರನ್ನು, ಚಕ್ರತೀರ್ಥರಂಥವರಿಗೆ ತುಳುವರು ಪಾಠ ಕಲಿಸುವರು. ಹೋರಾಟಗಾರ ಕಯ್ಯಾರರಿಗೆ. ನಾರಾಯಣ ಗುರುಗಳಿಗೆ ಅವಮಾನ ಮಾಡಿರುವುದು ಖಂಡನೀಯ. ಜನರ ಭಾವನೆ ಜೊತೆಗೆ ಆಟವಾಡುವ ಸಂಘಿ ಮತ್ತು ಬಿಜೆಪಿಯವರಿಗೆ ಕ್ಷಮೆ ಕೇಳಲು ಒತ್ತಾಯಿಸುತ್ತೇವೆ. ಸರಕಾರ ಕೂಡಲೆ ಇದನ್ನು ಸರಿಪಡಿಸಲಿ ಎಂದು ಮಿಥುನ್ ರೈ ಹೇಳಿದರು.
ಇನ್ನೊಮ್ಮೆ ಚಕ್ರತೀರ್ಥ ಸನ್ಮಾನ ನಡೆದರೆ ನಾವು ಅದೇ ದಾರಿಯಲ್ಲಿ ಉತ್ತರಿಸುವುದಾಗಿ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ನೀರಜ್ ಪಾಲ್ ಮೊದಲಾದವರು ಉಪಸ್ಥಿತರಿದ್ದರು.