ರಾಷ್ಟ್ರಪತಿ ಅಭ್ಯರ್ಥಿ ವಿರುದ್ಧ ಅವಹೇಳನಕಾರಿ ಟ್ವೀಟ್ ಆರೋಪ: ಖ್ಯಾತ ನಿರ್ದೇಶಕನ ವಿರುದ್ಧ ದೂರು

Prasthutha|

ತೆಲಂಗಾಣ: ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ ಆರೋಪಕ್ಕೆ ಸಂಬಂಧಿಸಿ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ತೆಲಂಗಾಣದಲ್ಲಿ ಬಿಜೆಪಿ ದೂರು ದಾಖಲಿಸಿದೆ. ದ್ರೌಪದಿ ರಾಷ್ಟ್ರಪತಿಯಾದರೆ ಪಾಂಡವರು ಯಾರು ಎಂದು ಟ್ವೀಟ್ ಮಾಡಿ ವರ್ಮಾ ವಿವಾದಕ್ಕೆ ಸಿಲುಕಿದ್ದರು. ಇದೀಗ ಟ್ವೀಟ್’ಗೆ ಸಂಬಂಧಿಸಿ ಬಿಜೆಪಿ ದೂರನ್ನು ನೀಡಿದೆ.

- Advertisement -

ಟ್ವೀಟ್ ನಲ್ಲಿ ರಾಮ್ ಗೋಪಾಲ್ ವರ್ಮಾ ‘ದ್ರೌಪದಿ ರಾಷ್ಟ್ರಪತಿಯಾದರೆ, ಪಾಂಡವರು ಯಾರು? ಎಲ್ಲಕ್ಕಿಂತ ಮುಖ್ಯವಾಗಿ ಕೌರವರು ಯಾರು’ ಎಂದು ಪ್ರಶ್ನಿಸಿದ್ದರು. ಟ್ವೀಟ್ ವಿರುದ್ಧ ಕಿಡಿಕಾರಿದ್ದ ಬಿಜೆಪಿ, ಹಿರಿಯ ಬುಡಕಟ್ಟು ಮಹಿಳಾ ರಾಜಕಾರಣಿಯನ್ನು ಅವಮಾನಿಸಿರುವ ವರ್ಮಾ ವಿರುದ್ಧ ಎಸ್‌ಸಿ –ಎಸ್‌ಟಿ ಕಾನೂನಿನ ಅಡಿಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಪೊಲೀಸರಿಗೆ ದೂರನ್ನು ನೀಡಿದೆ. ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿರುವ ಅಬಿಡ್‌ ರೋಡ್‌ ಪೊಲೀಸ್‌ ಠಾಣೆ ಇನ್ಸ್‌ಪೆಕ್ಟರ್ ಬಿ.ಪ್ರಸಾದ್ ರಾವ್, ಕಾನೂನು ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ನಿರ್ದೇಶಕ ವರ್ಮಾ, ಕೇವಲ ವ್ಯಂಗ್ಯವಾಗಿ ಹೇಳಿಕೆಯನ್ನು ನೀಡಿದ್ದೇನೆ. ಹೇಳಿಕೆಯಲ್ಲಿ ಯಾವುದೇ ಉದ್ದೇಶವಿಲ್ಲ. ಮಹಾಭಾರತದಲ್ಲಿ ದ್ರೌಪದಿ ನನಗೆ ನೆಚ್ಚಿನ ಪಾತ್ರ, ಈ ಹೆಸರು ಅಪರೂಪವಾಗಿದ್ದರಿಂದ ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಆ ಹೆಸರಿಗೆ ಸಂಬಂಧಿಸಿದ ಪಾತ್ರಗಳನ್ನು ನೆನಪಿಸಿಕೊಂಡಿದ್ದೇನೆ. ಇದರಲ್ಲಿ ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.



Join Whatsapp