35ನೇ ವಸಂತಕ್ಕೆ ಕಾಲಿಟ್ಟ ಕಾಲ್ಚೆಂಡಿನ ಚತುರ ಲಿಯೋನೆಲ್ ಮೆಸ್ಸಿ

Prasthutha|

ವಿಶ್ವದ ಶ್ರೀಮಂತ ಕ್ರೀಡಾಪಟು, 7 ಬಾರಿ ವಿಶ್ವ ಶ್ರೇಷ್ಠ ಫುಟ್ಬಾಲಿಗ ಪ್ರಶಸ್ತಿ, ಕೋಟ್ಯಂತರ ಅಭಿಮಾನಿಗಳ ಪಾಲಿನ ಆರಾದ್ಯ ದೈವ. ವಿಶೇಷಣಗಳಿಗೆ ಅತೀತ ಫುಟ್ಬಾಲ್‌ ಮಾಂತ್ರಿಕ ಲಿಯೊನೆಲ್‌ ಮೆಸ್ಸಿ ಶುಕ್ರವಾರ 35ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

- Advertisement -

ಜೂನ್‌ 24, 1987ರಲ್ಲಿ ಅರ್ಜಿಂಟೀನಾದ ರೋಸಾರಿಯೋದಲ್ಲಿ ಕಡುಬಡತನದ ಕುಟುಂಬದಲ್ಲಿ ಮೆಸ್ಸಿ ಜನಿಸಿದ್ದರು. ತಮ್ಮ 8ನೇ ವಯಸ್ಸಿನಲ್ಲೇ ಸ್ಥಳೀಯ ನ್ಯೂವೆಲ್ಸ್‌ ಓಲ್ಡ್‌ ಬಾಯ್‌ ಕ್ಲಬ್‌ ಪರ ಆಡಲು ಆರಂಭಿಸಿದ್ದ ಮೆಸ್ಸಿ, ಫುಟ್ಬಾಲ್‌ ಮೇಲಿನ ಅನಿಯಂತ್ರಿತ ಪ್ರೀತಿಯಿಂದಾಗಿ ಚಿಕ್ಕ ವಯಸ್ಸಿನಲ್ಲಿಯೇ ಅರ್ಜಿಂಟೀನಾದಿಂದ ಸ್ಪೈನ್‌ಗೆ ಬಂದಿಳಿದಿದ್ದರು. ತಮ್ಮ 13ನೇ ವಯಸ್ಸಿನಲ್ಲಿ, ಜಗತ್ತಿನ ಶ್ರೇಷ್ಠ ಫುಟ್ಬಾಲ್‌ ಕ್ಲಬ್‌ಗಳಲ್ಲಿ ಒಂದಾದ ಬಾರ್ಸಿಲೋನಾದ ಜೂನಿಯರ್‌ ತಂಡಕ್ಕೆ ಮೆಸ್ಸಿ ಆಯ್ಕೆಯಾಗಿದ್ದರು. 2004ರಲ್ಲಿ 18ನೇ ವಯಸ್ಸಿನಲ್ಲಿ ವೃತ್ತಿಪರ ಫುಟ್ಬಾಲ್‌ ಆಡಲು ಆರಂಭಿಸಿದ ಮೆಸ್ಸಿ, 2005ರಲ್ಲಿ ಅರ್ಜಿಂಟೀನಾ ರಾಷ್ಟ್ರೀಯ ತಂಡದ ಪರ ಚೊಚ್ಚಲ ಪಂದ್ಯವನ್ನಾಡಿದ್ದರು. ಆನಂತರದಲ್ಲಿ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು ಲಿಯೊನೆಲ್‌ ಮೆಸ್ಸಿ.

ಎಫ್‌ಸಿ ಬಾರ್ಸಿಲೋನಾ ಜೊತೆಗಿನ 21 ವರ್ಷಗಳ ಸುದೀರ್ಘ ಒಡನಾಟದಲ್ಲಿ 778 ಪಂದ್ಯಗಳನ್ನು ಆಡಿದ್ದ ಮೆಸ್ಸಿ, 268 ಅಸಿಸ್ಟ್‌ (ಗೋಲು ಗಳಿಸಲು ಅವಕಾಶ ಸೃಷ್ಟಿಸುವುದು) ಜೊತೆಗೆ 672 ಗೋಲುಗಳನ್ನು ದಾಖಲಿಸುವ ಮೂಲಕ, ಒಂದೇ ಕ್ಲಬ್‌ ಪರವಾಗಿ ಅತಿಹೆಚ್ಚು ಗೋಲು ದಾಖಲಿಸಿದ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದರು.

- Advertisement -

ಬಾರ್ಸಿಲೋನಾ ಜೊತೆಗಿನ ಸುದೀರ್ಘ ಸಂಬಂಧಕ್ಕೆ ತೆರೆ ಎಳೆದಿದ್ದ ಮೆಸ್ಸಿ, ಫ್ರಾನ್ಸ್‌ನ ಲೀಗ್‌- 1 ತಂಡ ಪ್ಯಾರಿಸ್ ಸೇಂಟ್ ಜರ್ಮೈನ್‌ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಿದ್ದರು. ಬಾರ್ಸಿಲೋನಾದಲ್ಲಿ 10 ಸಂಖ್ಯೆಯ ಜೆರ್ಸಿಯನ್ನು ಜನಪ್ರಿಯಗೊಳಿಸಿದ್ದ ಮೆಸ್ಸಿ, ಜೆರ್ಸಿ ಸಂಖ್ಯೆ ಪಿಎಸ್‌ಜಿಯಲ್ಲಿ 30 ಆಗಿ ಬದಲಾಗಿದೆ.

ದಿಗ್ಗಜ ಆಟಗಾರನ ಮಂತ್ರಮುಗ್ಧಗೊಳಿಸುವ ಆಟದ ವೈಖರಿ ಮನಸೋಲದವರೂ ಯಾರೂ ಇಲ್ಲ. ಎದುರಾಳಿ ತಂಡದವರು, ರೊನಾಲ್ಡೋ- ನೆಯ್ಮರ್‌ ಅಭಿಮಾನಿಗಳು ಕೂಡ ಮೆಸ್ಸಿ ಆಟವನ್ನು ಗಮನಿಸುತ್ತಾರೆ. ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಮಕ್ಕಳಿಂದ ಹಿಡಿದು ಮುದುಕರವರೆಗೂ ಮೆಸ್ಸಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ. ಫುಟ್ಬಾಲ್‌ ಆಡದವರು- ನೋಡದವರೂ ಮೆಸ್ಸಿಯನ್ನು ಇಷ್ಟಪಡುತ್ತಾರೆ ಎನ್ನುವುದೇ ಅವರ ಯಶಸ್ಸಿನ ಅತಿದೊಡ್ಡ ಸಾಕ್ಷಿ.

ಫುಟ್ಬಾಲ್‌ ಜಗತ್ತಿನಲ್ಲಿ ವಿಶ್ವಕಪ್‌ ಗೆಲುವೊಂದೇ ಮೆಸ್ಸಿ ವೃತ್ತಿಜೀವನದ ಟ್ರೋಫಿ ಸಾಲಿನಲ್ಲಿ ಕೊರತೆಯಾಗಿ ಉಳಿದಿದೆ. ಅಂತಾರಾಷ್ಟ್ರೀಯ ಕೂಟಗಳಲ್ಲಿ ಕೋಪಾ ಅಮೆರಿಕ, ಫೈನಲಿಸಿಮಾ ಟ್ರೋಫಿಗಳು ಮೆಸ್ಸಿ ನಾಯಕತ್ವದಡಿ ಅರ್ಜೆಂಟೀನಾ ಮಡಿಲು ಸೇರಿವೆ. ಉಳಿದಂತೆ ಮೂರು ಬಾರಿ ಫಿಫಾ ವರ್ಲ್ಡ್ ಕಪ್‌, ಎರಡು ಬಾರಿ FIFA ವರ್ಲ್ಡ್ ಪ್ಲೇಯರ್, 7 ಬಾರಿ ಬ್ಯಾಲನ್ ಡಿ’ಓರ್, ನಾಲ್ಕು ಬಾರಿ UEFA ಚಾಂಪಿಯನ್ಸ್‌ ಲೀಗ್‌, ಗೋಲ್ಡನ್‌ ಬಾಯ್‌, ಪಿಚಿಚಿ ಟ್ರೋಫಿ, ಸೇರಿದಂತೆ 40ಕ್ಕೂ ಅಧಿಕ  ಪ್ರಮುಖ ಪ್ರಶಸ್ತಿಗಳು ಮೆಸ್ಸಿ ಪಾಲಿಗೆ ಒಲಿದಿವೆ. ಕ್ಲಬ್‌ ಫುಟ್ಬಾಲ್‌ನ 22 ಆವೃತ್ತಿಗಳಲ್ಲಿ ಅತಿಹೆಚ್ಚು ಗೋಲು ದಾಖಲಿಸಿದ ಏಕೈಕ ಆಟಗಾರ ಎಂಬ ದಾಖಲೆಯೂ ಮೆಸ್ಸಿ ಹೆಸರಿನಲ್ಲಿದೆ.



Join Whatsapp