ಬೆಂಗಳೂರು: ನಮ್ಮ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಧರ್ಮ, ಧರ್ಮಗಳ ನಡುವೆ ನಡೆಯುತ್ತಿರುವ ಅಪನಂಬಿಕೆಯ ಸಂಘರ್ಷವನ್ನು ತಡೆಯುವ ನಿಟ್ಟಿನಲ್ಲಿ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಎಚ್.ಎಂ.ಟಿ. ಮೈದಾನದಲ್ಲಿ ಜೂ.26ರಂದು ಸಂಜೆ 4 ಗಂಟೆಗೆ ನಾಡಪ್ರಭು ಕೆಂಪೇಗೌಡ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸರಕಾರದ ದಿಲ್ಲಿಯ ಮಾಜಿ ವಿಶೇಷ ಪ್ರತಿನಿಧಿ ಹಾಗೂ ಜೆಡಿಎಸ್ ಮುಖಂಡ ಡಾ.ಸೈಯ್ಯದ್ ಮೋಹಿದ್ ಅಲ್ತಾಫ್ ತಿಳಿಸಿದರು.
ಬುಧವಾರ ಆರ್.ಟಿ.ನಗರದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು 500 ವರ್ಷಗಳ ಹಿಂದೆ ಯಾವುದೇ ಒಂದು ಜಾತಿ, ಧರ್ಮದ ಜನರಿಗಾಗಿ ಸೀಮಿತವಾಗಿ ಬೆಂಗಳೂರನ್ನು ನಿರ್ಮಿಸಲಿಲ್ಲ. ಇಲ್ಲಿ ಸರ್ವ ಧರ್ಮ, ಜಾತಿಗಳ ಜನರು ನೆಲೆಸಿದ್ದಾರೆ. ಈ ನಗರ ಅವರಿಗೆ ಜೀವನ ಕಟ್ಟಿಕೊಟ್ಟಿದೆ ಎಂದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ಅಧಿಕಾರವಧಿಯಲ್ಲಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೆ ತಂದಿರುವ ಹಲವಾರು ಯೋಜನೆಗಳನ್ನು ನಾವು ಸ್ಮರಿಸಬೇಕಿದೆ ಎಂದು ಮೋಹಿದ್ ಅಲ್ತಾಫ್ ಹೇಳಿದರು.
ಬೆಂಗಳೂರಿಗೆ ಕಾವೇರಿ ಕುಡಿಯುವ ನೀರು, ಹೊರ ವರ್ತುಲ ರಸ್ತೆ, ಫೆರಿಫೆರಲ್ ವರ್ತುಲ ರಸ್ತೆ, ಮೆಟ್ರೊ, ಐಟಿ, ಬಿಟಿ, ಬಿಬಿಎಂಪಿ ರಚನೆ, ರೈತರ 25 ಸಾವಿರ ಕೋಟಿ ರೂ.ಸಾಲ ಮನ್ನಾ ಇವೆಲ್ಲವೂ ಜೆಡಿಎಸ್ ಸರಕಾರಗಳ ಕೊಡುಗೆಯಾಗಿದೆ. ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿಯಾಗಿ ಹಾಗೂ ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಮಾಡಿರುವ ಕೆಲಸಗಳು ಸದಾ ಸ್ಮರಣೀಯವಾದದ್ದು ಎಂದು ಅವರು ಹೇಳಿದರು.
ಕೆಂಪೇಗೌಡ ದಿನಾಚರಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಮ್, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಎಚ್.ಕೆ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಅನಿತಾ ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಮೋಹಿದ್ ಅಲ್ತಾಫ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಬಿಎಂಪಿ ಮಾಜಿ ಸದಸ್ಯ ರಾಜಶೇಖರ್, ಜೆಡಿಎಸ್ ಮುಖಂಡ ಅಬ್ದುಲ್ ಹಕೀಮ್ ಖಾನ್ (ಬಾಬು) ಉಪಸ್ಥಿತರಿದ್ದರು.
ಜೂ.26ರಂದು ಹೆಬ್ಬಾಳದಲ್ಲಿ ಕೆಂಪೇಗೌಡ ದಿನಾಚರಣೆ: ಡಾ.ಸೈಯ್ಯದ್ ಮೊಹೀದ್ ಅಲ್ತಾಫ್
Prasthutha|