ಮಂಗಳೂರು: ಬಜಾಲ್ ಪ್ರದೇಶದ ಡಿವೈಎಫ್ಐ ಮುಖಂಡ ಶ್ರೀನಿವಾಸ್ ಬಜಾಲ್ ಅವರನ್ನು ಸಂಘಪರಿವಾರ ಸಂಘಟನೆಗಳ ಕಾರ್ಯಕರ್ತರು ಹತ್ಯೆಗೈದು ಜೂನ್ 24ಕ್ಕೆ 20 ವರುಷಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ಅವರ ನೆನಪಿಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜೂ.26ರಂದು ಸಾಮೂಹಿಕ ರಕ್ತದಾನ ಶಿಬಿರವು ಬೆಳಗ್ಗೆ 9 ರಿಂದ ಮಧ್ಯಾಹ್ನ 1ರವರೆಗೆ ಭಗತ್ ಸಿಂಗ್ ಭವನದಲ್ಲಿ ಆಯೋಜಿಸಲಾಗಿದೆ.
ಅದೇ ದಿನ ಸಂಜೆ 4 ಗಂಟೆಗೆ ಪಕ್ಕಲಡ್ಕ ಮೈದಾನದಲ್ಲಿ ಕೋಮುವಾದಿ ವಿರೋಧಿ ಅಭಿಯಾನ ಸಾಮರಸ್ಯ ಸಭೆಯು ನಡೆಯಲಿದೆ. ಈ ಸಭೆಯಲ್ಲಿ ಪ್ರಮುಖ ಭಾಷಣಗಾರರಾಗಿ ಚಿಂತಕ ಪ್ರೊ. ಕೆ.ಫಣಿರಾಜ್ ಭಾಗವಹಿಸಲಿದ್ದಾರೆ. ಈ ವೇಳೆ ಮುಖ್ಯ ಅತಿಥಿಗಳಾಗಿ ಡಿವೈಎಫ್ಐ ಮಾಜಿ ಮುಖಂಡ ಸುನೀಲ್ ಕುಮಾರ್ ಬಜಾಲ್ , ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ , ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಡಿವೈಎಫ್ಐ ಬಜಾಲ್ ಪಕ್ಕಲಡ್ಕ ಘಟಕದ ಕಾರ್ಯದರ್ಶಿ ಧೀರಜ್ ಪಕ್ಕಲಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಡಿವೈಎಫ್ಐ ಸಂಘಟನೆಯ ನಾಯಕತ್ವದಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್ ಬಜಾಲ್ ಪ್ರದೇಶದ ಜನರ ಸಮಸ್ಯೆಗಳಿಗೆ ನಿರಂತರ ಸ್ಪಂದಿಸುತ್ತಾ, ಕೋಮು ಸೌಹಾರ್ದತೆಯ ಉಳಿವಿಗಾಗಿ ಶ್ರಮಿಸುತ್ತಾ, ಸಂಘಟನೆಯ ತತ್ವ ಸಿದ್ದಾಂತಕ್ಕೆ ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ಹಗಲಿರುಳು ಎನ್ನದೆ ದುಡಿಯುತ್ತಿದ್ದರು. ಶ್ರೀನಿವಾಸ ಬಜಾಲ್ ಆ ದಿನದಂದು(24-06-2002) ತಾನು ರೋಗಿಯೊಬ್ಬರಿಗೆ ರಕ್ತದಾನ ಮಾಡಲೆಂದು ಹೊರಟ ವೇಳೆ ಹೊಂಚು ಹಾಕಿ ಕುಳಿತಿದ್ದ ಹಿಂದೂ ಯುವ ಸೇನೆ ಕಾರ್ಯಕರ್ತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಹತ್ಯೆಯಾದ ದಿನದಿಂದ ಕಳೆದ 19 ವರುಷಗಳಿಂದ ಬಜಾಲ್ ಪ್ರದೇಶದ ಡಿವೈಎಫ್ ಐ ಕಾರ್ಯಕರ್ತರು ಶ್ರೀನಿವಾಸ್ ಬಜಾಲ್ ಹುತಾತ್ಮ ದಿನದಂದು ರಕ್ತದಾನ ಶಿಬಿರ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದ ಬಜಾಲ್ ವಿಭಾಗ ಮಟ್ಟದ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಸಾರ್ವಜನಿಕ ಸಭೆಗಳನ್ನು ಆಯೋಜಿಸುವ ಮೂಲಕ ಅವರ ತ್ಯಾಗ ಬಲಿದಾನವನ್ನು ನೆನಪಿಸುತ್ತಾ ಬಂದಿದ್ದಾರೆ ಎಂದು ಧೀರಜ್ ಪಕ್ಕಲಡ್ಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.