ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ 40% ಕಮಿಷನ್ ಸರ್ಕಾರದ ಬಗ್ಗೆ ಪ್ರಧಾನಿ ಮೌನ ಮುರಿಯಲಿ: ರಾಮಲಿಂಗಾ ರೆಡ್ಡಿ ಆಗ್ರಹ

Prasthutha|

ಬೆಂಗಳೂರು: 2018 ರಲ್ಲಿ ಸಿದ್ದರಾಮಯ್ಯ ಸರ್ಕಾರವನ್ನು 10% ಸರ್ಕಾರ ಎಂದು ಮೂದಲಿಸಿ ಆರೋಪ ಹೊರಿಸಿದ ಪ್ರಧಾನಿ ಮೋದಿ ಅವರು ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ 40% ಕಮಿಷನ್ ಸರ್ಕಾರದ ಬಗ್ಗೆ ಮೌನ ಮುರಿಯಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆಗ್ರಹಿಸಿದ್ದಾರೆ.

- Advertisement -

ಇಂದು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು, ಎರಡು ದಿನಗಳ ರಾಜ್ಯ ಪ್ರವಾಸ ಮಾಡಲಿರುವ ಪ್ರಧಾನಿ ಅವರಿಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ ಗಮನ ಸೆಳೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ಮತ್ತು ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಹೊತ್ತಲ್ಲಿ ಎರಡು ದಿನಗಳ ರಾಜ್ಯ ಪ್ರವಾಸ ನಡೆಸುತ್ತಿರುವ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ್ದಾರೆ.

- Advertisement -

2018 ರ ಅಸೆಂಬ್ಲಿ ಚುನಾವಣೆಯ ವೇಳೆ ಸಿದ್ದರಾಮಯ್ಯ ಸರ್ಕಾರವನ್ನು 10% ಕಮಿಷನ್ ಸರ್ಕಾರವೆಂಬ ಆಧಾರರಹಿತ ಆರೋಪ ಹೊರಿಸಿದ ಪ್ರಧಾನಿ ಬೊಮ್ಮಾಯಿ ಸರ್ಕಾರದ 40% ಕಮಿಷನ್ ಬಗ್ಗೆ ಮೌನಕ್ಕೆ ಜಾರಿರುವುದು ಎಷ್ಟು ಸರಿ ಖಾರವಾಗಿ ಪ್ರಶ್ನಿಸಿದ್ದಾರೆ.

ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ವರ್ಷದ ಹಿಂದೆ ನೇರವಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದು, ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆಗೂ ಮುನ್ನ ನಿಮ್ಮನ್ನು ಭೇಟಿಯಾಗಲು ವಿಫಲ ಪ್ರಯತ್ನಿಸಿದ ಬಳಿಕ ಪತ್ರ ಬರೆದ ಹೊರತಾಗಿಯೂ ಈ ಭ್ರಷ್ಟಾಚಾರಗಳ ಕುರಿತು ನೀವು ಮೌನಿ ಬಾಬಾ ಆಗಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ಪಿಎಸ್ಐ, ಸಹಾಯಕ ಪ್ರಾಧ್ಯಪಕರು, ಅರೋಗ್ಯ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳ ನೇಮಕಾತಿಯಲ್ಲಿ ಅಕ್ರಮ ತಾಂಡವವಾಡುತ್ತಿದೆ. ಆದರೂ ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳಿಂದ ತನಿಖೆ ಯಾಕಿಲ್ಲ? ನಿಮಗೆ ನಿಮ್ಮ ಸಚಿವರ ಭ್ರಷ್ಟಾಚಾರ ಕಾಣಿಸುತ್ತಿಲ್ಲವೇ? ಭ್ರಷ್ಟಾಚಾರ ವಿರುದ್ಧದ ಹೋರಾಟ ಎಂದರೆ, ಕಾಂಗ್ರೆಸ್ ನಾಯಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುವುದು ಮಾತ್ರವೇ? ಎಂದು ಪ್ರಶ್ನಿಸಿದ್ದಾರೆ.

2022 ರ ವೇಳೆಗೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದು ನೀವು ಹೇಳಿದ್ದ ಮಾತು ನೆನಪಿದೆಯೇ? ರೈತರ ಆದಾಯದ ಬದಲು 700 ರೂ. ಇದ್ದ ರಸಗೊಬ್ಬರ 2 ಸಾವಿರ ಮುಟ್ಟಿದೆ, ಯಂತ್ರೋಪರಣಗಳ ಬಳಕೆ ವೆಚ್ಚ ಡಬಲ್ ಆಗಿರುವುದರ ಬಗ್ಗೆ ಏನು ಹೇಳುತ್ತೀರಿ ಮೋದಿಯವರೇ? ಇವರು ಕೊಡುವ ಸಬ್ಸಿಡಿ ರಸಗೊಬ್ಬರಕ್ಕೆ ಸಾಲುವುದಿಲ್ಲ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ನೀವು ಹೇಳಿದ್ದಿರಿ, ಆದರೆ ರಾಜ್ಯದಲ್ಲಿ ಹಿಜಾಬ್, ಆಜಾನ್, ಹಲಾಲ್, ಆರ್ಥಿಕ ಜಿಹಾದ್ ಹೆಸರಿನಲ್ಲಿ ಅಲ್ಪ ಸಂಖ್ಯಾತರ ಮೇಲೆ ನಿಮ್ಮ ಸಂಘಪರಿವಾರದವರೇ ಕೋಮು ದೌರ್ಜನ್ಯ ನಡೆಯುತ್ತಿದ್ದು, ಈ ವಿಚಾರದಲ್ಲಿ ನಿಮ್ಮ ನಿಲುವೇನು? ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ಕೋವಿಡ್ ಸಮಯದಲ್ಲಿ ನೀವು ಹೇಳಿದಂತೆ ಜಾಗಟೆ ಬಾರಿಸಿ, ಚಪ್ಪಾಳೆ ಹೊಡೆದು, ದೀಪ ಹಚ್ಚಿದೆವು. ಆದರೆ ತುರ್ತು ಸಮಯದಲ್ಲಿ ಆಕ್ಸಿಜನ್ ಪೂರೈಸದೇ ರಾಜ್ಯದ ಚಾಮರಾಜನಗರದಲ್ಲಿ 34 ಮಂದಿ ಪ್ರಾಣ ನುಂಗಿದ್ದು ಯಾಕೆ? ಆಕ್ಸಿಜನ್, ರೆಮಡಿಸಿವಿಯರ್, ಬೆಡ್, ವೆಂಟಿಲೇಟರ್ ಸಿಗಲಿಲ್ಲ. ಕಡೆಗೆ ಸ್ಮಾಶಾನದಲ್ಲೂ ಜಾಗಸಿಗಲಿಲ್ಲ. ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತೇ ಇಲ್ಲ ಎಂದು ನಿಮಗೆ ಸುಳ್ಳು ವರದಿ ಕೊಟ್ಟ ನಿಮ್ಮ ಸರ್ಕಾರದ ವಿರುದ್ಧ ಕ್ರಮ ಇಲ್ಲ ಯಾಕೆ? ರಾಜ್ಯದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿ ಕೋವಿಡ್ ಗೆ ಬಲಿಯಾಗಿದ್ದರೂ 40 ಸಾವಿರ ಎಂದು ಸುಳ್ಳು ಲೆಕ್ಕ ತೋರಿದ್ದು ಯಾಕೆ? ಎಂದು ಅವರು ಪ್ರಶ್ನಿಸಿದ್ದಾರೆ.

ಇನ್ನು ಮೇಕೆದಾಟು ಹಾಗೂ ಮಹದಾಯಿ ನಮ್ಮ ರಾಜ್ಯಕ್ಕೆ ಅಗತ್ಯವಿರುವ ಎರಡು ಪ್ರಮುಖ ನೀರಾವರಿ ಯೋಜನೆ. ಈ ಯೋಜನೆಗೆ ಯಾವಾಗ ಅನುಮತಿ ಕೊಡಿಸುವಿರಿ? ಈ ಬಗ್ಗೆ ನಿಮ್ಮ ಸ್ಪಷ್ಟ ನಿಲುವು ತಿಳಿಸಿ ಎಂದು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ.

ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಈ ತಂತ್ರ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ‘ಬಿಜೆಪಿಯವರು ಹೈದರಾಬಾದ್ ನಲ್ಲೂ ಇದೇ ರೀತಿ ಮಾಡಿದ್ದರು. ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರಕ್ಕೆ ಪ್ರಧಾನಮಂತ್ರಿಗಳು ಬರಲು ಸಾಧ್ಯವಿಲ್ಲ ಎಂದು ಚುನಾವಣೆ ಸಮಯದಲ್ಲಿ ರೋಡ್ ಶೋ ಮಾಡಿದ್ದರು. ಅದೇ ರೀತಿ ಇಲ್ಲೂ ಮಾಡಲು ಪ್ರಯತ್ನಿಸುತ್ತಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ನಮಗೆ ಒಂದೂ ಸ್ಥಾನವಿಲ್ಲದಿದ್ದರೂ 2 ಸ್ಥಾನವನ್ನು ನಾವು ಗೆದ್ದಿದ್ದೇವೆ. ಇನ್ನು ಹೊರಟ್ಟಿಯವರು ತಮ್ಮ ವರ್ಚಸ್ಸಿನ ಮೇಲೆ ಗೆದ್ದಿದ್ದು, ಅದು ಬಿಜೆಪಿ ಗೆಲುವಾಗುವುದಿಲ್ಲ. ಹಾಗಾಗಿ ಬಿಜೆಪಿ ಗೆದ್ದಿರುವುದು ಕೇವಲ 1 ಕ್ಷೇತ್ರದಲ್ಲಿ ಮಾತ್ರ. ಇನ್ನು ಗ್ರಾಮಪಂಚಾಯ್ತಿ ಚುನಾವಣೆಯಲ್ಲಿ ನಮ್ಮ ಪಕ್ಷದವರೇ ಶೇ.75ರಷ್ಟು ಗೆದ್ದಿದ್ದಾರೆ ಎಂದು ಬಿಜೆಪಿ ಹೇಳಿಕೊಳ್ಳುತ್ತಿತ್ತು. ಆದರೆ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ.48ರಷ್ಟು ಚುನಾಯಿತ ಪ್ರತಿನಿಧಿಗಳು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಇದೆಲ್ಲವೂ ಜನ ಬದಲಾವಣೆ ಬಯಸುತ್ತಿದ್ದಾರೆ ಎಂದು ಅರ್ಥ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ. ಅದರಲ್ಲಿ ಸಂಶಯವೇ ಬೇಡ’ ಎಂದರು.

ಇನ್ನು ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದಾಗ ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿರುವ SBM ನಾಯಕರ ವಿರುದ್ಧ ಟೀಕೆ ಮಾಡಿದ್ದರು. ಈಗ ಅವರನ್ನೇ ಪಕ್ಕ ಕೂರಿಸಿಕೊಂಡು ಕಾರ್ಯಕ್ರಮ ಮಾಡುತ್ತಿದ್ದಾರಲ್ಲವೇ ಎಂಬ ಪ್ರಶ್ನೆಗೆ, ‘ನಿಜ, ಮತದಾರ ಗುರುತಿನ ಚೀಟಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಈ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಈಗ ಈ ಬಗ್ಗೆ ಅವರೇ ಉತ್ತರ ನೀಡಲಿ’ ಎಂದರು.

ಕೋವಿಡ್ ಹರಡಲಿದೆ ಎಂದು ಹೇಳಿರುವ ಸುಧಾಕರ್ ಅವರು ಮೋದಿ ಅವರ ಕಾರ್ಯಕ್ರಮಕ್ಕೆ ಹೋಗುವುದು ಎಷ್ಟು ಸರಿ ಎಂಬ ಪ್ರಶ್ನೆಗೆ, ‘ಈ ಪ್ರಶ್ನೆಯನ್ನು ಮಾಧ್ಯಮಗಳೇ ಅವರನ್ನು ನೇರವಾಗಿ ಕೇಳುವುದು ಉತ್ತಮ. ನಾನು ಹೇಳುವುದನ್ನು ಮಾಧ್ಯಮಗಳು ತೋರಿಸಬೇಕು ಅಷ್ಟೇ’ ಎಂದು ಉತ್ತರಿಸಿದರು.

ಅಭಿವೃದ್ಧಿ ಕಾರ್ಯಕ್ಕಾಗಿ ಮಾಡುವ ಕಾರ್ಯಕ್ರಮ ತಪ್ಪು ಎಂದು ಹೇಗೆ ಹೇಳುತ್ತೀರಿ, ‘ಅಭಿವೃದ್ಧಿ ಮಾಡಲಿ, ಶಂಕುಸ್ಥಾಪನೆ ಮಾಡಿ ಹೋಗಲಿ. ಈ ಹಿಂದೆ ಮೋದಿ ಅವರು ಸುರಂಗ ರಸ್ತೆ ಉದ್ಘಾಟನೆ ಮಾಡಿ ಜನರಿಲ್ಲದಿದ್ದರೂ ಕ್ಯಾಮೆರಾ ಮುಂದೆ ಟಾಟಾ ಮಾಡುತ್ತಾ ಪೋಸ್ ಕೊಟಟಿರಲಿಲ್ಲವೇ? ಅದೇ ರೀತಿ ಈಗಲೂ ಟಾಟಾ ಮಾಡಿ ಹೋಗಲಿ. ಮೋದಿ ಅವರು ಫೋಟೋದಲ್ಲಿ ಅವರೊಬ್ಬರು ಇರುತ್ತಾರೆಯೇ ಹೊರತು, ಮುಖ್ಯಮಂತ್ರಿಗಳು, ಸಚಿವರು, ಇಲಾಖೆ ಅಧಿಕಾರಿಗಳು ಇರುವುದಿಲ್ಲ’ ಎಂದರು.

ಸಬ್ ಅರ್ಬನ್ ರೈಲು ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಹಿಂದೆ ರೈಲ್ವೇ ಯೋಜನೆಗಳಿಗೆ ಭೂಮಿ ನಮ್ಮದು ಯೋಜನಾ ವೇಚ್ಚ ಅವರದು ಎಂದಿತ್ತು, ನಂತರ ಕೇಂದ್ರ ಸರ್ಕಾರ ಶೇ.75 ಹಾಗೂ ರಾಜ್ಯ ಸರ್ಕಾರ ಶೇ.25 ರಷ್ಟು ವೆಚ್ಚ ಭರಿಸುವಂತಿತ್ತು. ಈಗ ಅದು 40:60ಗೆ ಬಂದಿದೆ. ಜತೆಗೆ ಭೂಮಿ ವಶಪಡಿಸಿಕೊಳ್ಳುವ ಜವಾಬ್ದಾರಿಯೂ ರಾಜ್ಯ ಸರ್ಕಾರದ್ದೇ ಆಗಿದ್ದು, ಇದರಿಂದ ಸಹಜವಾಗಿ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೆರೆ ಹೆಚ್ಚಾಗಲಿದೆ. ಈ ಹಿಂದೆ ಕೇವಲ 1 ಕೋಟಿ ಮಾತ್ರ ಬಜೆಟ್ ನಲ್ಲಿ ಮೀಸಲಿಟ್ಟಿದ್ದರು’ ಎಂದರು.

ಅಗ್ನಿಪತ್ ಯೋಜನೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸೇನೆಯಲ್ಲಿ 17ರಿಂದ 23 ವಯೋಮಿತಿಯವರನ್ನು ಸೇನೆಗೆ 4 ವರ್ಷಗಳ ಕಾಲಕ್ಕೆ ತೆಗೆದುಕೊಂಡು ನಂತರ ಮನೆಗೆ ಕಳುಹಿಸುತ್ತಾರೆ. ನಾಲ್ಕು ವರ್ಷದ ನಂತರ ಅವರಿಗೆ ಉದ್ಯೋಗವೂ ಇಲ್ಲ, ಪಿಂಚಣಿ ಹಾಗೂ ಯಾವುದೇ ಸೌಲಭ್ಯಗಳೂ ಇರುವುದಿಲ್ಲ. ಅವರಿಗೆ ಶಿಕ್ಷಣವೂ ಸರಿಯಾಗಿ ಆಗುವುದಿಲ್ಲ. ಅಲ್ಲಿಂದ ಬಂದವರಿಗೆ ಯಾರು ಉದ್ಯೋಗ ನೀಡುತ್ತಾರೆ? ಕೇಂದ್ರ ಸರ್ಕಾರದ 60 ಲಕ್ಷ ಉದ್ಯೋಗಗಳು ಖಾಲಿ ಇದ್ದು, ಕಳೆದ 3 ವರ್ಷದಿಂದ ಸೇನೆಯಲ್ಲೂ ನೇಮಕಾತಿ ಮಾಡಿರಲಿಲ್ಲ. ಇದು ಉದ್ಯೋಗವಲ್ಲ, ಹೊರಗುತ್ತಿಗೆ ಅಥವಾ ಗುತ್ತಿಗೆ ಆಧಾರದಲ್ಲಿ ಯೋಧರನ್ನು ನೇಮಿಸಿಕೊಳ್ಳುವಂತಾಗುತ್ತದೆ. ಮೋದಿ ಹಾಗೂ ಅಮಿತ್ ಶಾ ಅವರು ಮುಂದೆ ಏನೆಲ್ಲಾ ತಹ ಹೊಸ ಕ್ರಮಗಳನ್ನು ತರುತ್ತಾರೋ ಗೊತ್ತಿಲ್ಲ. ಎಲ್ಲ ಕಡೆಯೂ ಇದೇ ರೀತಿ ಮಾಡುತ್ತಿದ್ದಾರೆ’ ಎಂದರು



Join Whatsapp