ಕನ್ನಡದ ಅಸ್ಮಿತೆಗೆ ಧಕ್ಕೆಯಾದಾಗ ಕನ್ನಡಪರ ಮನಸುಗಳ ಹೋರಾಟ ಅನಿವಾರ್ಯ: ಸಿದ್ದರಾಮಯ್ಯ

Prasthutha|

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಅವರು ಆಯೋಜಿಸಿದ್ದ ಪ್ರತಿಭಟನಾ ಪಾದಯಾತ್ರೆಯ ಸಮಾರೋಪ ಸಮಾರಂಭವನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಇಂದು ನಾವು ನಡೆಸಿರುವ ಪಾದಯಾತ್ರೆ ಯಾವುದೇ ರಾಜಕೀಯ ಲಾಭಕ್ಕಾಗಿ ಮಾಡಿರುವ ಹೋರಾಟ ಅಲ್ಲ. ಇಂದು ಕನ್ನಡದ ಮನಸುಗಳಿಗೆ ನೋವಾಗುವ ಕೆಲಸ ರಾಜ್ಯದಲ್ಲಿ ಆಗುತ್ತಿದೆ. ಕನ್ನಡದ ಅಸ್ಮಿತೆಗೆ ಧಕ್ಕೆಯಾದಾಗ ಕನ್ನಡಪರ ಮನಸುಗಳು ಹೋರಾಟಕ್ಕೆ ಇಳಿಯಬೇಕಾಗುತ್ತದೆ. ಇಂದು ಬಸವಣ್ಣ, ಅಂಬೇಡ್ಕರ್, ಕುವೆಂಪು, ನಾರಾಯಣ ಗುರುಗಳಂತಹಾ ಮಹಾಪುರುಷರ ಚರಿತ್ರೆಯನ್ನು ತಿರುಚಲಾಗ್ತಿದೆ. ಈಗಾಗಲೇ ಚರಿತ್ರೆಯನ್ನು ಸಾಕಷ್ಟು ತಿರುಚಲಾಗಿದೆ. ಈ ನಿಟ್ಟಿನಲ್ಲಿ ದೇಶದ ಭವಿಷ್ಯ ನಿರ್ಮಾಣ ಮಾಡುವ ಮಕ್ಕಳಿಗೆ ಎಂತಹಾ ಜ್ಞಾನ ತುಂಬಿಕೊಡಬೇಕು ಎಂಬುದು ಬಹಳ ಮುಖ್ಯ ಎಂದರು.
ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾದ ಮನುಷ್ಯ ಧರ್ಮದ ಸ್ಥಾಪನೆ ಮಾಡಿದರು. ಅವರು ಎಲ್ಲಾ ಮೌಢ್ಯ, ಕಂದಾಚಾರ, ಜಾತಿ ವ್ಯವಸ್ಥೆಗಳ ವಿರುದ್ಧ ಹೋರಾಟ ಮಾಡಿ ಮನುಷ್ಯ ಮನುಷ್ಯನಾಗಿ ಬಾಳುವ ಅವಕಾಶವಾಗಬೇಕು ದುಡಿದರು. ವೈದಿಕ ಧರ್ಮ ಮನುಷ್ಯ ವಿರೋಧಿಯಾಗಿತ್ತು, ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ಮುಂತಾದ ಹಲವು ಮನುಷ್ಯ ವಿರೋಧಿ ಆಚರಣೆಗಳು ಇದ್ದವು. ಇಂಥಾ ಜಾತಿ, ಧರ್ಮಗಳ ನಡುವೆ ಕಂದರ ಸೃಷ್ಟಿಯಾಗಬಾರದು ಎಂದು ಹೋರಾಟ ಮಾಡಿದ ಬಸವಣ್ಣನವರ ಆಶಯಗಳಿಗೆ ವಿರುದ್ಧವಾಗಿ ಜನರನ್ನು ಮತ್ತೆ ವೈದಿಕ ಧರ್ಮದ ಕಡೆಗೆ ತೆಗೆದುಕೊಂಡು ಹೋಗುವ ಪ್ರಯತ್ನ ಇಂದು ಮಾಡಲಾಗುತ್ತಿದೆ. ಇದು ಆಗಬಾರದು ಎಂದು ಹೇಳಿದರು.
ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗದೇ ಹೋಗಿದ್ದರೆ ಈ ದೇಶಕ್ಕೆ ಇಂತಹಾ ಯೋಗ್ಯ ಸಂವಿಧಾನ ಸಿಗುತ್ತಿರಲಿಲ್ಲ. ಆರ್. ಎಸ್. ಎಸ್ ಮತ್ತು ಅಂಗ ಸಂಸ್ಥೆಗಳಿಗೆ ಸಂವಿಧಾನ ರಚನೆಯಾದ ದಿನದಿಂದಲೂ ಅದರ ಬಗ್ಗೆ ಗೌರವ ಇಲ್ಲ. ಕಾರಣ ಸಂವಿಧಾನ ಸಮಾನತೆ, ಜಾತ್ಯತೀತತೆಯನ್ನು ಸಾರುತ್ತದೆ, ಎಲ್ಲರಿಗೂ ಸಮಾನ ಅವಕಾಶಗಳನ್ನು ಒದಗಿಸಿಕೊಡುತ್ತದೆ. ಇದು ಮನುವಾದಿಗಳಿಗೆ ಇಷ್ಟವಿಲ್ಲ. ಎಲ್ಲಿ ಸಾಮಾಜಿಕ ಅಸಮಾನತೆ ಇರುತ್ತದೆ ಅಲ್ಲಿ ಮೇಲ್ವರ್ಗದ ಜನರು ಕೆಳವರ್ಗದ ಜನರನ್ನು ಶೋಷಣೆ ಮಾಡಲು ಅವಕಾಶ ಇರುತ್ತದೆ. ಇದು ಅವರ ಉದ್ದೇಶ. ಸಾವಿರಾರು ವರ್ಷಗಳ ಕಾಲ ಅಸಮಾನತೆ, ದೌರ್ಜನ್ಯವನ್ನು, ಗುಲಾಮಗಿರಿಯನ್ನು ಸಹಿಸಿಕೊಂಡು ಬದುಕ್ಕಿದ್ದೇವೆ. ಇದರ ವಿರುದ್ಧ ಧ್ವನಿಯೆತ್ತಿ, ಶಾಂತಿಯುತವಾದ ಪ್ರತಿಭಟನೆಯನ್ನು ಮಾಡಬೇಕಿದೆ. ಇಲ್ಲದಿದ್ದರೆ ಸಮಾನತೆ ಸಿಗುವುದಿಲ್ಲ. ಕಾರಣ ಜಾತಿ ವ್ಯವಸ್ಥೆ ಸಾಮಾಜಿಕವಾಗಿ ಬಹಳ ಆಳವಾಗಿ ಬೇರು ಬಿಟ್ಟಿದೆ. ಅಷ್ಟು ಸುಲಭದಲ್ಲಿ ಅದನ್ನು ನಿರ್ಮೂಲನೆ ಮಾಡಲಾಗಲ್ಲ ಎಂದು ಹೇಳಿದರು.
ಬಸವರಾಜ ಬೊಮ್ಮಾಯಿ ಪಠ್ಯಪುಸ್ಕರ ಪರಿಷ್ಕರಣಾ ಸಮಿತಿಯನ್ನು ವಿಸರ್ಜನೆ ಮಾಡಿದ್ದಾರೆ, ಆದರೆ ಆ ಸಮಿತಿ ಶಿಫಾರಸು ಮಾಡಿದ್ದ ಪಠ್ಯಗಳನ್ನು ತಿರಸ್ಕಾರ ಮಾಡಿಲ್ಲ. ಶಿಕ್ಷಣ ಸಚಿವ ನಾಗೇಶ್ ಅವರ ತಂದೆ ಚಂದ್ರಶೇಖರಯ್ಯ ಅವರು ರಾಮಕೃಷ್ಣ ಹೆಗಡೆ ಅವರ ಶಿಷ್ಯ, ಆದರೆ ಈ ಪುಣ್ಯಾತ್ಮ ನಾಗೇಶ್ ಆರ್. ಎಸ್. ಎಸ್ ಸೇರಿಕೊಂಡು ಬರೀ ಸುಳ್ಳು ಹೇಳುತ್ತಾರೆ. ಇಂಥವರು ಮಕ್ಕಳಿಗೆ ವಿದ್ಯೆ ಕಲಿಸಲು ಅರ್ಹರೆ? ಇಲ್ಲಿನ ಶಾಸಕ ಜ್ಞಾನೇಂದ್ರರಿಗೆ ಜ್ಞಾನವೇ ಇಲ್ಲ. ಆತ ಅಜ್ಞಾನಿ. ಕರ್ನಾಟಕ ಕಂಡ ಅತ್ಯಂತ ಅಸಮರ್ಥ ಗೃಹ ಸಚಿವ ಅಂದರೆ ಆರಗ ಜ್ಞಾನೇಂದ್ರ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹಾ ಅಸಮರ್ಥ ಗೃಹ ಸಚಿವರನ್ನೇ ನಾನು ನೋಡಿಲ್ಲ. ಮಕ್ಕಳಿಗೆ ವಿಷ ಉಣಿಸುವ ಇಂಥವರ ವಿರುದ್ಧ ನಾವು ಹೋರಾಟವನ್ನು ಮಾಡಲೇಬೇಕು. ಈ ನಿಟ್ಟಿನಲ್ಲಿ ಇಂಥಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು.



Join Whatsapp