ಹೊರ ರಾಜ್ಯಗಳ ಪ್ರವಾಸಕ್ಕೆ ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಹಿಂದಿ ಮಾತನಾಡುವ ವಿದ್ಯಾರ್ಥಿಗಳ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ ಆಕ್ರೋಶ

Prasthutha|

►ಕನ್ನಡ ಅಸ್ಮಿತೆಯನ್ನೇ ಕಣ್ಮರೆಗೊಳಿಸುವ ಕಿರಾತಕ ಹುನ್ನಾರ

- Advertisement -

ಬೆಂಗಳೂರು: ಒಂದು ಭಾರತ, ಒಂದು ಭಾಷೆ’ಯ ಹುನ್ನಾರ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳು; ಶಾಲಾ ಮಕ್ಕಳ ಪ್ರವಾಸದಲ್ಲಿಯೂ ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಕನ್ನಡವನ್ನು ಹತ್ತಿಕ್ಕುವ ಹೀನಕೃತ್ಯ ಎಸಗುತ್ತಿವೆ. ಇದು ಅಕ್ಷಮ್ಯ ಮತ್ತು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆ್ರಕೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ನಿಮಿತ್ತ ‘ಒಂದು ಭಾರತ-ಶ್ರೇಷ್ಠ ಭಾರತ’ ಕಾರ್ಯಕ್ರಮದಡಿ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳನ್ನು ಹೊರ ರಾಜ್ಯಗಳ ಪ್ರವಾಸಕ್ಕೆ ಕರೆದೊಯ್ಯಲು ಕನ್ನಡ ವಿದ್ಯಾರ್ಥಿಗಳನ್ನು ಕಡೆಗಣಿಸಿ ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನೇ ಆಯ್ಕೆ ಮಾಡುವಂತೆ ಆದೇಶಿಸಲಾಗಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವ ಈ ಆಘಾತಕಾರಿ ಸುದ್ದಿ ನನಗೆ ತೀವ್ರ ಕಳವಳ ಉಂಟು ಮಾಡಿದೆ. ಹಿಂದಿ ಮಾತನಾಡುವ ವಿದ್ಯಾರ್ಥಿಗಳನ್ನು ಮಾತ್ರ ಪ್ರವಾಸಕ್ಕೆ ಆಯ್ಕೆ ಮಾಡುವಂತೆ ಬೆಂಗಳೂರು ಡಿಡಿಪಿಐ ಆದೇಶ ನೀಡಿರುವುದು ಕನ್ನಡಕ್ಕೆ ಬಗೆದಿರುವ ಘೋರ ದ್ರೋಹ ಎಂದು ಕಿಡಿಕಾರಿದ್ದಾರೆ.

- Advertisement -

ಇಂಥ ಕರಾಳ ಆದೇಶಕ್ಕೆ ರಾಜ್ಯ ಬಿಜೆಪಿ ಸರಕಾರ ಮತ್ತು ಶಿಕ್ಷಣ ಸಚಿವರೇ ನೇರ ಹೊಣೆ. ಸರಕಾರಕ್ಕೆ ಗೊತ್ತಿಲ್ಲದೆಯೇ ಇಂಥ ಆದೇಶ ಬರಲು ಸಾಧ್ಯವೇ? ತಿಳಿಗೇಡಿ ಆಡಳಿತಕ್ಕೆ ಹಿಡಿದ ಕನ್ನಡಿ ಇದು. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರಗಳು ಅಧಿಕಾರಕ್ಕೆ ಬಂದ ಮೇಲೆ ಕನ್ನಡ ಮತ್ತು ಕರ್ನಾಟಕದ ಮೇಲೆ ದಬ್ಬಾಳಿಕೆ ಹೆಚ್ಚುತ್ತಲೇ ಇದೆ. ಕನ್ನಡವನ್ನೇ ಮೂಲೋತ್ಪಾಟನೆ ಮಾಡಿ, ಕನ್ನಡ ಅಸ್ಮಿತೆಯನ್ನೇ ಕಣ್ಮರೆಗೊಳಿಸುವ ಕಿರಾತಕ ಹುನ್ನಾರ ಇದಾಗಿದೆ. ಕನ್ನಡ, ಕರ್ನಾಟಕ ಎರಡೂ ಕಟುಕರ ಕೈಯ್ಯಲ್ಲೇ ಸಿಕ್ಕಿಬಿದ್ದಿವೆ. ಹಿಂದಿ ಪೋಷಿತ ಆ ಕಬಂಧ ಸಂಕೋಲೆಗಳಿಂದ ನಮ್ಮ ಕನ್ನಡ, ಕರ್ನಾಟಕವನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಕೂಡಲೇ ಇಂಥ ದ್ರೋಹದ ಆದೇಶ ನೀಡಿದ ಅಧಿಕಾರಿಯನ್ನು ಕಿತ್ತೊಗೆಯಬೇಕು ಮತ್ತು ಆ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಪ್ರವಾಸಕ್ಕೆ ಕನ್ನಡ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಆಯ್ಕೆ ಮಾಡಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.



Join Whatsapp