ಇ.ಡಿ. ಕಚೇರಿಗೆ ಜಾಥಾ ನಡೆಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಬಂಧನ

Prasthutha|

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ಕಚೇರಿಯತ್ತ ಹೊರಟ ಕಾಂಗ್ರೆಸ್ ಪ್ರತಿಭಟನಾ ಜಾಥಾವನ್ನು  ಪೊಲೀಸರು ಅರ್ಧದಲ್ಲಿಯೇ ತಡೆದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ಸೇರಿದಂತೆ ಹಲವು ಮುಖಂಡರನ್ನು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದ್ದಾರೆ.

- Advertisement -

ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್  ನೇತೃತ್ವದಲ್ಲಿ ಲಾಲ್ ಬಾಗ್ ಮುಖ್ಯ ದ್ವಾರದಿಂದ ಇಡಿ ಕಚೇರಿಯತ್ತ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಸ್ವಲ್ಪ ದೂರ ಸಾಗುತ್ತಿದ್ದಂತೆ ಪೊಲೀಸರು ತಡೆದಿದ್ದು, ಆಗ ಬ್ಯಾರಿಕೇಡ್ ಮೇಲೇರಿದ ಕಾಂಗ್ರೆಸ್ ನಾಯಕರು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ಇದಕ್ಕೂ ಮೊದಲು ಪ್ರತಿಭಟನೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ‘ಇದೊಂದು ಐತಿಹಾಸಿಕ ಹೋರಾಟ. ನಮ್ಮದು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಜನರ ಧ್ವನಿಯಾಗಿ ಕೆಲಸ ಮಾಡುತ್ತಿತ್ತು. ಸೋನಿಯಾಗಾಂಧಿಗೆ ಪ್ರಧಾನಿ ಸ್ಥಾನ ಒಲಿದು ಬಂದಿತ್ತು. ಆದರೆ, ಅದನ್ನು ಅವರು ನಿರಾಕರಿಸಿದ್ದರು. ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ಗೆ ತ್ಯಾಗ ಮಾಡಿದ್ದರು. ಇಲ್ಲಿ ಸಾಕಷ್ಟು ಮಂದಿ ಹಳ್ಳಿಗಳಿಂದ ಬಂದಿದ್ದೀರಿ. ನೀವು ಪಂಚಾಯ್ತಿ ಸ್ಥಾನವನ್ನು ಬಿಟ್ಟುಕೊಡುತ್ತೀರಾ? ರಾಹುಲ್ ಗಾಂಧಿ ಅವರೂ ಕೂಡ ಪ್ರಧಾನಮಂತ್ರಿ, ಉಪಪ್ರಧಾನಿಯಾಗಬಹುದಿತ್ತು. ಮಂತ್ರಿಯಾಗಬಹುದಿತ್ತು. ಆದರೆ ಈ ದೇಶಕ್ಕಾಗಿ 10 ವರ್ಷಗಳ ಕಾಲ ತ್ಯಾಗ ಮಾಡಿದ್ದಾರೆ. ಇಂದಿರಾಗಾಂಧಿ ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಕಿರುಕುಳ ಕೊಡಲು ಹೊರಟಿದ್ದಾರೆ. ಇದು ಎಂದಿಗೂ ಸಾಧ್ಯವಿಲ್ಲ’ ಎಂದರು.

- Advertisement -

‘ಪ್ರತಿಭಟನೆ ಮಾಡುವ ಹಾಗಿಲ್ಲ ಎಂದು ಪೊಲೀಸ್ ನವರು ಪತ್ರ ಬರೆದಿದ್ದರು. ಪ್ರತಿಭಟನೆ ಮಾಡುವುದು ನಮ್ಮ ಮೂಲಭೂತ ಹಕ್ಕು. ಬಿಜೆಪಿ ವಿರುದ್ಧ ಯಾರೂ ಧ್ವನಿ ಎತ್ತುವ ಹಾಗಿಲ್ಲ. ನಮ್ಮ ವಶಕ್ಕೆ ಪಡೆದ ಪೊಲೀಸರು, ಪರಪ್ಪನ ಅಗ್ರಹಾರಕ್ಕಾದರೂ ಕರೆದುಕೊಂಡು ಹೋಗಲಿ. ಏನು ಬೇಕಾದರೂ ಮಾಡಲಿ. ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿದರು.



Join Whatsapp