ಕೊಡಗು| ರಸ್ತೆ-ಪ್ರವಾಸೋದ್ಯಮದ ಅಭಿವೃದ್ಧಿ; ಸಚಿವ ಗಡ್ಕರಿ ಯೊಂದಿಗೆ ಶಾಸಕ ಬೋಪಯ್ಯ ಚರ್ಚೆ

Prasthutha|

ಮಡಿಕೇರಿ: ಖಾಸಗಿ ಭೇಟಿ ನಿಮಿತ್ತ ಕುಟುಂಬ ಸಮೇತರಾಗಿ ಕೊಡಗಿಗೆ ಆಗಮಿಸಿರುವ ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದರು.

- Advertisement -

ಮಡಿಕೇರಿಯ ತಾಜ್ ರೆಸಾರ್ಟ್ ನಲ್ಲಿ ಸುಮಾರು ಒಂದು ಗಂಟೆಗಳ ಕಾಲ ನಡೆದ ಮಾತುಕತೆ ಸಂದರ್ಭ ಶಾಸಕ ಬೋಪಯ್ಯ, ಕೊಡಗಿನ ಹೆದ್ದಾರಿಗಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮದ ಬಗ್ಗೆ ಗಡ್ಕರಿ ಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು.

ಈ ವೇಳೆ ಸಚಿವ ಗಡ್ಕರಿ ಕೊಡಗಿನ ಹೆದ್ದಾರಿಗಳ ಅಭಿವೃದ್ಧಿ ಬಗ್ಗೆ ರಾಜ್ಯ ಸರಕಾರದಿಂದ ಸೂಕ್ತ ಪ್ರಸ್ತಾವನೆ ಕೇಂದ್ರಕ್ಕೆ ಕಳುಹಿಸಿದರೆ ತಮ್ಮ ಇಲಾಖೆಯಿಂದ  ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಕೊಡಗಿನಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಪ್ರವಾಸೋದ್ಯಮದಿಂದ ಸ್ಥಳೀಯವಾಗಿ ಉದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರ ಸೇವೆ ಹಾಗೂ ಕೊಡಗಿನವರು ಸೈನ್ಯಕ್ಕೆ ನೀಡುತ್ತಿರುವ ಕೊಡುಗೆಯನ್ನು ಗಡ್ಕರಿ ಅವರು ಮುಕ್ತ ಕಂಠದಿಂದ ಪ್ರಶಂಶಿಸಿದರು.

ಕೆ.ಜಿ.ಬೋಪಯ್ಯ ಅವರು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದ ಬಗ್ಗೆ ಮತ್ತು ಆಗಿನ ರಾಜಕೀಯ ಬಿಕ್ಕಟ್ಟಿನ ಬಗ್ಗೆ ಗಡ್ಕರಿಯವರು ಮಾತಿನ ನಡುವೆ ಸ್ಮರಿಸಿದರು.

ಇದೇ ಸಂದರ್ಭ ಶಾಸಕರು ಸಚಿವರಿಗೆ ಶಾಲು ಹೊದಿಸಿ ಪುಸ್ತಕವನ್ನು ಉಡುಗೊರೆಯಾಗಿ ನೀಡಿದರು. ಶಾಸಕರಿಂದ ಕೊಡಗಿನ ಜೇನು ತುಪ್ಪ, ಕಾಳು ಮೆಣಸು, ಏಲಕ್ಕಿ ಮತ್ತು ಕಾಫಿಯನ್ನು ಸ್ವೀಕರಿಸಿದ ಗಡ್ಕರಿ ಅವರು ಸ್ವತಃ ಜೇನುತುಪ್ಪವನ್ನು ಸವಿದು ಅದರ ತಾಜಾತನ ಮತ್ತು ಗುಣಮಟ್ಟವನ್ನು ಕೊಂಡಾಡಿದರು.

ಕೊಡಗಿನ ಕಿತ್ತಳೆ ಬಗ್ಗೆ ಶಾಸಕರಿಂದ ಮಾಹಿತಿ ಬಯಸಿದ ಸಚಿವರು, ಕೊಡಗಿನಲ್ಲಿ ಕಿತ್ತಳೆ ಇಳುವರಿ ಕ್ಷೀಣಿಸುತ್ತಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರಲ್ಲದೆ, ಕೊಡಗಿನಲ್ಲಿ ಕಿತ್ತಳೆ ಪುನಶ್ಚೇತನಕ್ಕೆ ನಾಗ್ಪುರ ಮಾದರಿ ಕಿತ್ತಳೆಗೆ ಪೂರಕ ವಾತಾವರಣ ಸೃಷ್ಟಿ ಮತ್ತು ತಳಿ ಸಂವರ್ಧನೆ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಶಾಸಕರಿಗೆ ಸಲಹೆ ನೀಡಿದರು.

ಸಚಿವರ ಭೇಟಿ ಸಂದರ್ಭ ಡಾ.ಕುಶ್ವಂತ್ ಕೋಳಿಬೈಲು ಮತ್ತು ಮಲ್ಲಂಡ ಮಧು ದೇವಯ್ಯ ಹಾಜರಿದ್ದರು.



Join Whatsapp