ಮೂಡಿಗೆರೆ: ಕಾಲೇಜಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಯೊಂದಿಗೆ ಅದೇ ಊರಿನ ಪಕ್ಕದ ಗ್ರಾಮಸ್ಥ ಅಸಭ್ಯವಾಗಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ವಿದ್ಯಾರ್ಥಿನಿ ಕಾಲೇಜಿನಿಂದ ತರಗತಿ ಮುಗಿಸಿ ಮನೆಗೆ ಬರುವ ಸಮಯದಲ್ಲಿ ಊರಿನ ಪಕ್ಕದ ಅಂಗಡಿ ಗ್ರಾಮದ ಆರೋಪಿ ದೇವರಾಜ್ ಎಂಬುವನು, ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಗೆ ಹತ್ತಿಸಿಕೊಂಡಿದ್ದಾನೆ. ಬೈಕ್ ನಲ್ಲಿ ಕುಳಿತ ಬಳಿಕ ಅಸಭ್ಯವಾಗಿ ವರ್ತಿಸಿದ್ದಾನೆಂದು ಯುವತಿ ಆರೋಪಿಸಿದ್ದಾಳೆ.
ಈ ವರ್ತನೆಯನ್ನು ಕಂಡು ಆಕೆಯು ಬೈಕಿನಿಂದ ಇಳಿಯಲು ಪ್ರಯತ್ನಿಸಿದಾಗ ಮೈಮೇಲೆ ಕೈ ಹಾಕಿ ಬಲತ್ಕಾರ ನಡೆಸಲು ಯತ್ನಿಸಿದ್ದಾನೆ. ಈ ವಿಷಯ ಯಾರಿಗಾದರೂ ಹೇಳಿದ್ದಲ್ಲಿ ಕೊಲೆಗೈಯ್ಯುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಯುವತಿಯು ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಘಟನಾ ಸಂಬಂಧ ಆರೋಪಿಯನ್ನು ಬಂಧಿಸಿರುವ ಗೋಣಿಬೀಡು ಪಿ.ಎಸ್.ಐ ಧನಂಜಯ್ ಹಾಗೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.