ಪ್ರವಾದಿ ವಿರುದ್ಧ ಹೇಳಿಕೆ: ‘ದ್ವೇಷ ಪ್ರಚಾರ’ ಹರಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಕೇರಳ ಸಿಎಂ ಮನವಿ

Prasthutha|

ತಿರುವನಂತಪುರಂ: ಉಚ್ಚಾಟಿತರಾಗಿರುವ ಇಬ್ಬರು ಬಿಜೆಪಿ ನಾಯಕರು ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಹಲವಾರು ಕೊಲ್ಲಿ ರಾಷ್ಟ್ರಗಳು ಪ್ರತಿಭಟನೆಗೆ ಕೈ ಜೋಡಿಸುತ್ತಿದ್ದಂತೆ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೆಸ್ಸೆಸ್ ದೇಶವನ್ನು ಮುಜುಗರದ ಸ್ಥಿತಿಗೆ ತಂದಿದೆ ಮತ್ತು “ದ್ವೇಷವನ್ನು ಪ್ರಚಾರ ಮಾಡುವವರ” ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸಿದ್ದಾರೆ.

- Advertisement -

“ಜಾತ್ಯತೀತ ಪ್ರಜಾಪ್ರಭುತ್ವ ಎಂದು ಎಲ್ಲರೂ ಗೌರವಿಸುವ ನಮ್ಮ ದೇಶವನ್ನು ಸಂಘ ಪರಿವಾರದ ಶಕ್ತಿಗಳು ವಿಶ್ವದ ಮುಂದೆ ಮುಜುಗರದ ಸ್ಥಿತಿಗೆ ತಂದಿವೆ” ಎಂದು ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ಪಕ್ಷದ ಉಚ್ಚಾಟಿತ ದೆಹಲಿ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರು ಪ್ರವಾದಿ ವಿರುದ್ಧ ನೀಡಿದ ಹೇಳಿಕೆಗಳು ಸಾಮಾಜಿಕ ಭದ್ರತೆಯ ಮೇಲೆ ಮಾತ್ರವಲ್ಲದೆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತವೆ ಎಂದು ಅವರು ಹೇಳಿದರು.

- Advertisement -

“ಹಿಂದುತ್ವ ಕೋಮುವಾದಿ ರಾಜಕೀಯವು ನಮ್ಮ ಸಾಮಾಜಿಕ ಭದ್ರತೆಯ ಮೇಲೆ ಮಾತ್ರವಲ್ಲದೆ ನಮ್ಮ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ” ಎಂದು ಆತಂಕ ವ್ಯಕ್ತಪಡಿಸಿದರು.

ಲಕ್ಷಾಂತರ ಭಾರತೀಯರಿಗೆ ಉದ್ಯೋಗ ನೀಡುವ ಮತ್ತು ನಮ್ಮ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಅನೇಕ ಇಸ್ಲಾಮಿಕ್ ದೇಶಗಳು ಬಿಜೆಪಿ ಮತ್ತು ಸಂಘ ಪರಿವಾರದ “ದ್ವೇಷದ ರಾಜಕೀಯ”ಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿವೆ ಎಂದು ಮುಖ್ಯಮಂತ್ರಿ ಹೇಳಿದರು.



Join Whatsapp