ಒಡಿಸ್ಸಾ: ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತನ್ನ ಸಂಪುಟದ 20 ಸಚಿವರ ರಾಜೀನಾಮೆಯನ್ನಿ ಶನಿವಾರ ಪಡೆದಿದ್ದರು. ಆದಾದ ಒಂದೇ ದಿನದಲ್ಲಿ ಇಂದು ಹೊಸ ಸಂಪುಟ ರಚನೆಯಾಗಿದೆ. ಒಟ್ಟು 13 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕರಿಸಿದ್ದಾರೆ.
ಭುವನೇಶ್ವರದ ಲೋಕಸೇವಾ ಭವನದ ನೂತನ ಸಮಾವೇಶ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಡಿ ಶಾಸಕರಾದ ಮೀಳಾ ಮಲ್ಲಿಕ್, ಉಷಾದೇವಿ, ತುಕುನಿ ಸಾಹು, ಆರ್ ಪಿ ಸ್ವೈನ್, ಜಗನ್ನಾಥ್ ಸರಕಾ ಮತ್ತು ನಿರಂಜನ್ ಪೂಜಾರಿ ಸೇರಿದಂತೆ 13 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ನೂತನ ಸಚಿವರಿಗೆ ರಾಜ್ಯಪಾಲ ಗಣೇಶಿ ಲಾಲ್ ಪ್ರತಿಜ್ಞಾವಿಧಿ ಬೋಧಿಸಿದರು.
ಮುಂಬರುವ 2024ನ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಿರಿಯರನ್ನು ಸಂಪುಟದಿಂದ ಕೈಬಿಟ್ಟು ಹೊಸ ಯುವ ಮುಖಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ತನ್ನ ಸಂಪುಟದ ಎಲ್ಲಾ 20 ಸಚಿವರ ರಾಜೀನಾಮೆಯನ್ನು ಪಡೆದಿದ್ದರು.