ಕೊಡಗು: ಸೆರೆ ಕಾರ್ಯಾಚರಣೆ ವೇಳೆ ಕಾಡಾನೆ ಸಾವು

Prasthutha|

ಮಡಿಕೇರಿ: ಅರಣ್ಯ ಇಲಾಖೆ ವತಿಯಿಂದ ನಡೆಯುತ್ತಿದ್ದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಒಂದು ಹೆಣ್ಣು ಕಾಡಾನೆ ಸಾವನ್ನಪ್ಪಿದ ಘಟನೆ ಚೆಯ್ಯಂಡಾಣೆ ಸಮೀಪದ ಮರಂದೋಡ ಗ್ರಾಮದಲ್ಲಿ ನಡೆದಿದೆ.

- Advertisement -

ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಕೂಂಬಿಂಗ್ ನಡೆಸುತ್ತಿದ್ದರು. ಮೂರು ದಿನಗಳಿಂದ ನಡೆಯುತ್ತಿರುವ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಇತ್ತೀಚೆಗಷ್ಟೇ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು.

ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲು ನಿರ್ಧರಿಸಿದ್ದ ಅಂದಾಜು 35 ವರ್ಷದ ಹೆಣ್ಣಾನೆಗೆ ಅರಿವಳಿಕೆ ಚುಚ್ಚು ಮದ್ದನ್ನು ಡಾಟ್ ಮಾಡಲಾಗಿತ್ತು. ಸ್ಥಳದಿಂದ ಸ್ವಲ್ಪ ದೂರ ಓಡಿದ ಕಾಡಾನೆ ಬಳಿಕ ಅನತಿ ದೂರದಲ್ಲಿ ಬಿದ್ದಿದೆ.

- Advertisement -

ಅರಣ್ಯ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಆನೆಗೆ ಹಗ್ಗವನ್ನು ಬಿಗಿದು, ಲಾರಿಯಲ್ಲಿ ಸಾಗಿಸಲು ಪ್ರಯತ್ನಿಸಿದ್ದರು. ಈ ವೇಳೆ ಕಾಡಾನೆ ಕುಸಿದು ಬಿದ್ದು, ಮೃತಪಟ್ಟಿದೆ. ಅರಿವಳಿಕೆ ನೀಡಿದ ನಂತರ ಹೃದಾಯಾಘಾತದಿಂದ ಕಾಡಾನೆ ಸಾವನ್ನಪ್ಪಿರುವ ಕುರಿತು ಶಂಕೆ ವ್ಯಕ್ತವಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಫ್‍ ಓ ಚಕ್ರಪಾಣಿ, ಪ್ರಾರಂಭದಲ್ಲಿ ಕಾಡಾನೆ ಸೆರೆಗಾಗಿ ಅರಿವಳಿಕೆ ನೀಡಲಾಗಿತ್ತು. ಆ ಬಳಿಕವೂ ಆನೆ ಓಡಾಡುತ್ತಿತ್ತು, ಆದರೆ ಅದನ್ನು ಹಿಡಿದು ತರುವ ಸಂದರ್ಭ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದೆ. ಕಾಡಾನೆ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.



Join Whatsapp