ಬೆಂಗಳೂರು: ನಗರದಲ್ಲಿ ಎಗ್ಗಿಲ್ಲದೇ ವಾಹನ ಸಂಚಾರ ವೇಗವಾಗುತ್ತಿದೆ. ವೇಗದ ವಾಹನ ಚಾಲನೆಯಲ್ಲಿ ರಾಷ್ಟ್ರದ ಎರಡನೇ ಸ್ಥಾನವನ್ನು ಬೆಂಗಳೂರು ಅಲಂಕರಿಸಿದೆ. ರಸ್ತೆ ಸಾರಿಗೆ ಹೆದ್ದಾರಿ ಸಚಿವಾಲಯದ ಇತ್ತೀಚಿನ ವರದಿಯ ಪ್ರಕಾರ ಬೆಂಗಳೂರು ವೇಗದ ಚಾಲನೆಯಲ್ಲಿ ರಾಷ್ಟ್ರದ ಎರಡನೇ ಸ್ಥಾನದಲ್ಲಿದ್ದರೆ, ಮೆಟ್ರೋ ನಗರಗಳಲ್ಲಿ ಮೊದಲ ಸ್ಥಾನದಲ್ಲಿದೆ.
ದತ್ತಾಂಶದ ಪ್ರಕಾರ ಅತಿವೇಗವು ನಗರದಲ್ಲಿ ವೇಗದ ವಾಹನ ಚಾಲನೆಯಿಂದ ಹೆಚ್ಚು ಅಪಘಾತಗಳು ಉಂಟಾಗಿ ಗಾಯಗೊಳ್ಳುವುದು ಹಾಗೂ ಸಾವು ಪ್ರಮಾಣವು ಅಧಿಕವಾಗುತ್ತಿದೆ.ನಗರದಲ್ಲಿ ಕಳೆದ 2020ರಲ್ಲಿ ಅತಿವೇಗದ ಚಾಲನೆಯಿಂದ 2,993 ಅಪಘಾತಗಳು ಸಂಭವಿಸಿದ್ದು, 596 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂದೋರ್ 3,032 ಪ್ರಕರಣಗಳೊಂದಿಗೆ ಬೆಂಗಳೂರಿಗಿಂತ ಸ್ವಲ್ಪ ಮುಂದಿದೆ.
ಕೋವಿಡ್ ಹಾಗೂ ಲಾಕ್‌ಡೌನ್ ಗಳಿಂದಾಗಿ 2020ರಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿತ್ತು. ಆದಾಗ್ಯೂ, ಅಂಕಿಅಂಶಗಳು ಅದಕ್ಕಿಂತ ಹಿಂದಿನ ವರ್ಷಗಳಲ್ಲಿ ಭೀಕರವಾಗಿವೆ.
ಮೂರನೇ ಸ್ಥಾನ:
2016 ರಲ್ಲಿ ನಗರದಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 835 ಜನರು ಸಾವನ್ನಪ್ಪಿದ್ದಾರೆ. ಈ ಸಂಖ್ಯೆ 2017ರಲ್ಲಿ 653, 2018ರಲ್ಲಿ 686 ಆಗಿತ್ತು. 2019ರಲ್ಲಿ 768ರ ಇದ್ದರೆ 2020 ರಲ್ಲಿ 646ಕ್ಕೆ ಇಳಿದಿದೆ. 2016ಕ್ಕೆ ಹೋಲಿಸಿದರೆ, ನಗರದಲ್ಲಿ ಅಪಘಾತಗಳಲ್ಲಿ ಶೇಕಡಾ 15.9 ರಷ್ಟು ಕಡಿಮೆಯಾಗಿದೆ. ಇನ್ನೂ, ಲಾಕ್‌ಡೌನ್‌ಗಳ ಹೊರತಾಗಿಯೂ, 2020 ರಲ್ಲಿ ದೇಶದ ಅಪಘಾತ ಸಾವುಗಳಲ್ಲಿ ನಗರವು ಮೂರನೇ ಸ್ಥಾನದಲ್ಲಿದೆ. 1,196 ಸಾವುಗಳೊಂದಿಗೆ ದೆಹಲಿ ಅಗ್ರಸ್ಥಾನದಲ್ಲಿದ್ದು, 872 ರೊಂದಿಗೆ ಚೆನ್ನೈ ನಂತರದ ಸ್ಥಾನದಲ್ಲಿದೆ.
ಇಂದೋರ್ ನಲ್ಲಿ ಏರಿಕೆ:
ಕಳೆದ ಐದು ವರ್ಷಗಳಲ್ಲಿ (2016 – 2020), ಟಾಪ್ 10 ಮಿಲಿಯನ್-ಪ್ಲಸ್ ನಗರಗಳು ಭಾರತದಲ್ಲಿನ ಒಟ್ಟು ರಸ್ತೆ ಅಪಘಾತಗಳ ಸಾವುಗಳಲ್ಲಿ 40 ಪ್ರತಿಶತಕ್ಕಿಂತ ಹೆಚ್ಚಿನದನ್ನು ಹಂಚಿಕೊಳ್ಳುತ್ತಿವೆ ಎಂದಿದೆ. ಟಾಪ್ 10 ಮಿಲಿಯನ್ ಪ್ಲಸ್ ನಗರಗಳ ಸೂಕ್ಷ್ಮ ವಿಶ್ಲೇಷಣೆಯು 2018 ರಿಂದ ದೆಹಲಿ, ಚೆನ್ನೈ, ಕಾನ್ಪುರ್, ಅಲಹಾಬಾದ್, ಬೆಂಗಳೂರು ಮತ್ತು ಆಗ್ರಾದಂತಹ ನಗರಗಳಲ್ಲಿ ಅಪಘಾತ ಸಾವಿನ ಪ್ರಕರಣಗಳಲ್ಲಿ ಇಳಿಕೆಯನ್ನು ತೋರಿಸಿದರೆ ಇಂದೋರ್ ಮಾತ್ರ ಗಮನಾರ್ಹ ಏರಿಕೆಯನ್ನು ದಾಖಲಿಸಿದೆ.
ದೆಹಲಿಗೆ 2ನೇ ಸ್ಥಾನ:
ಅಪಘಾತ ಪ್ರಕರಣದ ಸಾವುನೋವುಗಳಲ್ಲಿ, 2019 ಕ್ಕಿಂತ 2020ರಲ್ಲಿ 39.9 ಪ್ರತಿಶತ ಹೆಚ್ಚಾಗಿದೆ, ಇದು ವಾಹನ ಸವಾರರ ಅತಿ ವೇಗವನ್ನು ತೋರಿಸುತ್ತದೆ. ಅಪಘಾತಗಳನ್ನು ಪರಿಗಣಿಸುವುದಾದರೆ, 2019ರಲ್ಲಿ ನಾಲ್ಕನೇ ಸ್ಥಾನದಿಂದ ಬೆಂಗಳೂರು ಮೂರನೇ ಸ್ಥಾನದಲ್ಲಿದೆ (ಏಕಮಾತ್ರ ಬದಲಾವಣೆಯೆಂದರೆ ಚೆನ್ನೈ ಮೊದಲ ಸ್ಥಾನ ಮತ್ತು ದೆಹಲಿ ಎರಡನೇ ಸ್ಥಾನ ಪಡೆದಿದೆ).
ಲಾಕ್ ಡೌನ್ ನಲ್ಲಿ ಕಡಿಮೆ:
2018ರಿಂದ ಬೆಂಗಳೂರು, ಹೈದರಾಬಾದ್, ಜೈಪುರ ಮತ್ತು ಗ್ವಾಲಿಯರ್ ಹೊರತುಪಡಿಸಿ ನಗರಗಳು ಅಪಘಾತ ಪ್ರಕರಣಗಳಲ್ಲಿ ಇಳಿಕೆ ಕಂಡಿವೆ. “ಭೋಪಾಲ್ ಮತ್ತು ಚೆನ್ನೈನಲ್ಲಿ, ಅಪಘಾತಗಳ ಘಟನೆಗಳು 2018ರಲ್ಲಿ ಕ್ರಮವಾಗಿ 3.4 ಶೇಕಡಾ ಮತ್ತು 4.5 ಶೇಕಡಾ ಹೆಚ್ಚಳವನ್ನು ಹೊರತುಪಡಿಸಿ ಇಳಿಮುಖವಾಗಿವೆ. 2019ಕ್ಕೆ ಹೋಲಿಸಿದರೆ 2020 ರಲ್ಲಿ ಲಾಕ್ ಡೌನ್ ಕಾರಣದಿಂದ ಎಲ್ಲರೂ ಮನೆಯಲ್ಲಿದ್ದ ಸಲುವಾಗಿ ಅಪಘಾತಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.
ರಾಷ್ಟ್ರವ್ಯಾಪಿ ಚಿತ್ರಣ:
ದಟ್ಟವಾದ ಜನಸಂಖ್ಯೆ ಮತ್ತು ಸಂಚಾರ ದಟ್ಟಣೆಯಿಂದಾಗಿ ರಸ್ತೆ ಅಪಘಾತಗಳು ನಗರ ಪ್ರದೇಶಗಳಲ್ಲಿ ಹೆಚ್ಚಾಗಿವೆ. 2020ರಲ್ಲಿ ನಗರಗಳಲ್ಲಿ ಒಟ್ಟು 58,736 ರಸ್ತೆ ಅಪಘಾತಗಳು ದಾಖಲಾಗಿವೆ ಮತ್ತು 13,542 ಸಾವು ಪ್ರಕರಣಗಳು ಮತ್ತು 50,515 ಜನರಿಗೆ ಗಾಯಗಳಾಗಿವೆ.
2020 ರಲ್ಲಿ, ಈ 50 ನಗರಗಳು ದೇಶದ ಒಟ್ಟು ಅಪಘಾತಗಳಲ್ಲಿ 16.04 ಪ್ರತಿಶತ ಮತ್ತು ಒಟ್ಟು ಸಾವುಗಳಲ್ಲಿ 10.3 ಪ್ರತಿಶತವನ್ನು ಹೊಂದಿವೆ. MORTH ವರದಿಯ ಪ್ರಕಾರ 2020ರಲ್ಲಿ ಮಧ್ಯಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಅಪಘಾತಗಳು ಮತ್ತು ಸಾವುಗಳ ಸಂಖ್ಯೆ ದಾಖಲಾಗಿದೆ.