ವಿಟ್ಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಭಾಷಣವನ್ನು ಹತ್ತನೆಯ ತರಗತಿಯ 2022-23 ನೇ ಸಾಲಿನ ಶೈಕ್ಷಣಿಕ ವರ್ಷದ ಕನ್ನಡ ಪಠ್ಯಕ್ರಮದಲ್ಲಿ ಸೇರ್ಪಡೆ ಮಾಡಿದ್ದು, ಇದು ಶಿಕ್ಷಣದ ಕೇಸರೀಕರಣದ ಮುಂದುವರೆದ ಭಾಗವಾಗಿದ್ದು ಇದನ್ನು ಶೀಘ್ರ ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲಾ ಸಮಿತಿ ವತಿಯಿಂದ ನಗರದ ಕಲ್ಲಡ್ಕ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಿತು.
ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯು ನಿಜವಾದ ಆದರ್ಶ ಪುರುಷ ಯಾರಾಗಬೇಕು? ಎಂಬ ತಲೆಬರಹದಲ್ಲಿ ಹೆಡ್ಗೆವಾರ್ ಭಾಷಣವನ್ನು ಹತ್ತನೇ ತರಗತಿಯ ಕನ್ನಡ ಗದ್ಯಪುಸ್ತಕದಲ್ಲಿ ಐದನೇ ಪಠ್ಯವಾಗಿ ಸೇರಿಸಲಾಗಿದೆ. ದೇಶಾದ್ಯಂತ ನರಮೇಧಗಳನ್ನು ನಡೆಸಿದ, ದೇಶದಲ್ಲಿ ಹಲವು ಬಾರಿ ನಿಷೇಧಿಸಲ್ಪಟ್ಟ ಭಯೋತ್ಪಾದನಾ ಸಂಘಟನೆಯಾದ ಆರ್ಎಸ್ಎಸ್ ಸಂಸ್ಥಾಪಕ ಹೆಡ್ಗೆವಾರ್ ಹೇಗೆ ಆದರ್ಶ ಪುರುಷನಾಗಲು ಸಾಧ್ಯವೆಂದು ಪ್ರಶ್ನಿಸಿದ ಪ್ರತಿಭಟನಾಕಾರರು ಉದ್ದೇಶಪೂರ್ವಕವಾಗಿ ಪಠ್ಯಪುಸ್ತಕದ ಪಠ್ಯ ಕ್ರಮವನ್ನು ಬ್ರಾಹ್ಮಣೀಕರಣಗೊಳಿಸುವ ಗುರಿಯೊಂದಿಗೆ ಸಂಘದ ಗರಡಿಯಲ್ಲಿ ಪಳಗಿರುವ ರೋಹಿತ್ ಚಕ್ರತೀರ್ಥ ರಂತಹವರನ್ನು ಪರಿಷ್ಕರಣಾ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಂವಿಧಾನದ ಆಶಯಗಳನ್ನು ಅರಿತು ಸಮಾಜದಲ್ಲಿ ಸೌಹಾರ್ದತೆ, ಸಾಮರಸ್ಯಕ್ಕೆ ಒತ್ತು ಕೊಡುವ ನಿಟ್ಟಿನಲ್ಲಿ ಕಲಿಕೆ, ವಿದ್ಯೆಯನ್ನು ನೀಡಬೇಕು ಹೊರತು ಹಿಂದೂ ರಾಷ್ಟ್ರವೆಂಬ ಸಂವಿಧಾನಕ್ಕೆ ಅಪಚಾರವೆಸಗುವ ದೇಶವಿರೋಧಿ ಆಲೋಚನೆ ಹೊಂದಿದ್ದ ವ್ಯಕ್ತಿಗಳ ಭಾಷಣ ಹೇಳಿ ಕೊಡುವ ಸರಕಾರದ ಈ ಕೃತ್ಯ ನೈಜ ಸ್ವಾತಂತ್ರ್ಯ ಹೋರಾಟಗಾರರರಿಗೆ ಅಪಮಾನ ಮಾಡುವಂತಿದೆ ಅದಲ್ಲದೆ, ಇದು ದೇಶದ್ರೋಹದ ನಡೆಯಾಗಿದೆ ಎಂದರು.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ತನ್ನದೇ ಆದ ಹಿಂದೂ ರಾಷ್ಟ್ರದ ಕಲ್ಪನೆಯೊಂದಿಗೆ ಜನರ ದಾರಿ ತಪ್ಪಿಸಿದ ದೇಶದ್ರೋಹಿಯ ಭಾಷಣವನ್ನು ಪಠ್ಯಕ್ರಮದಲ್ಲಿ ಸೇರಿಸಿರುವುದು ಶಿಕ್ಷಣದಲ್ಲಿ ಹಿಂದುತ್ವ ಸಿದ್ದಾಂತದ ಹೇರಿಕೆಯೆಂಬುದು ಸ್ಪಷ್ಟವಾಗಿದೆ, ಇದನ್ನು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ತೀವ್ರವಾಗಿ ವಿರೋಧಿಸುತ್ತಿದೆ ಹಾಗೂ ಈ ಹೆಡ್ಗೆವಾರ್ ಭಾಷಣವನ್ನು ಶೀಘ್ರ ಪಠ್ಯಕ್ರಮದಿಂದ ಕೈ ಬಿಡಬೇಕು ಎಂದು ಕ್ಯಾಂಪಸ್ ಫ್ರಂಟ್ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂಶುದ್ದೀನ್ ಕರಾಯಿ ರವರು ಪ್ರತಿಭಟನೆಯಲ್ಲಿ ಆಗ್ರಹಿಸಿದರು. ವಿಟ್ಲ ಜಿಲ್ಲಾ ಅಧ್ಯಕ್ಷರಾದ ಫಯಾಝ್ ಕಲ್ಲಡ್ಕ ಮಾತನಾಡಿದರು.
ಪ್ರತಿಭಟನೆಯಲ್ಲಿ ಕ್ಯಾಂಪಸ್ ಫ್ರಂಟ್ ವಿಟ್ಲ ಜಿಲ್ಲಾ ಅಧ್ಯಕ್ಷರಾದ ಫಯಾಝ್ ಕಲ್ಲಡ್ಕ , ಕಾರ್ಯದರ್ಶಿ ಮುಕ್ತಾರ್ ಕಲ್ಲಡ್ಕ , ಜಿಲ್ಲಾ ಸಮಿತಿ ಸದಸ್ಯರಾದ ಇರ್ಶಾದ್ , ಹಕಂ , ಸವಾದ್ ಮತ್ತು ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.