ಮಗಳ ಮೃತದೇಹದ ಜೊತೆ ನಾಲ್ಕು ದಿನ ಕಳೆದ ತಾಯಿ !

Prasthutha|

ಮಂಡ್ಯ: ನಾಲ್ಕು ದಿನಗಳಿಂದ ಮಗಳ ಮೃತದೇಹದ ಜೊತೆ ತಾಯಿ ವಾಸವಿದ್ದ ಭಯಾನಕ ಘಟನೆ ಹಾಲಹಳ್ಳಿ ಕೆರೆಯ ನ್ಯೂ ತಮಿಳು ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ. ನ್ಯೂ ತಮಿಳು ಕಾಲೋನಿಯ ರೂಪಾ (30) ಮೃತಪಟ್ಟಿದ್ದು, ಮಗಳ ಸಾವಿನ ವಿಚಾರ ಯಾರಿಗೂ ತಿಳಿಸದ ತಾಯಿ ನಾಗಮ್ಮ ಶವದ ಜೊತೆಯೇ ನಾಲ್ಕು ದಿನ ಕಳೆದಿದ್ದಾರೆ.

- Advertisement -


ನಾಲ್ಕು ದಿನಗಳ ಹಿಂದೆಯೇ ರೂಪ ಮೃತಪಟ್ಟಿದ್ದಾರೆ. ತಾಯಿ ನಾಗಮ್ಮ ಮಾತ್ರ ಮಗಳ ಸಾವಿನ ವಿಚಾರ ಯಾರಿಗೂ ತಿಳಿಸಿರಲಿಲ್ಲ. ಮನೆಯ ಬಾಗಿಲು ಹಾಕಿಕೊಂಡು ಮನೆ ಒಳಗೇ ಇದ್ದರು. ಆದರೆ ಮೃತದೇಹ ಕೊಳೆತು ದುರ್ವಾಸನೆ ಬರಲು ಆರಂಭಿಸಿದೆ. ಆರಂಭದಲ್ಲಿ ಇಲಿ, ಹೆಗ್ಗಣ ಸತ್ತಿರಬಹುದು ಎಂದುಕೊಂಡು ಹುಡುಕಾಡಿದ್ದ ಅಕ್ಕಪಕ್ಕದವರು ಯಾವಾಗ ನಾಗಮ್ಮ ಮತ್ತು ರೂಪ ಮನೆಯಿಂದ ಹೊರಬರದೇ ಇದ್ದಾಗ ಅನುಮಾನಗೊಂಡಿದ್ದರು.


ಬಳಿಕ ಮಿಕ್ಸಿ ರಿಪೇರಿಗೆಂದು ಬಂದವನನ್ನು ಕರೆದು ಮನೆಯ ಬಾಗಿಲು ಹೊಡೆಸಿದ ಸ್ಥಳೀಯರು ಮನೆ ಒಳಗಿನ ದೃಶ್ಯ ನೋಡಿ ಬೆಚ್ಚಿಬಿದ್ದಿದ್ದರು. ಮೃತಪಟ್ಟ ರೂಪಾಳ ಶವದ ಜೊತೆ ನಾಗಮ್ಮ ಕುಳಿತಿದ್ದಳು. ಆತಂಕದ ನಡುವೆಯೇ ಪೂರ್ವ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದ ಸ್ಥಳೀಯರು ಪೊಲೀಸರ ಸಹಾಯದೊಂದಿಗೆ ಮೃತದೇಹ ಆಸ್ಪತ್ರೆಗೆ ರವಾನಿಸಿದ್ದಾರೆ.

- Advertisement -


ನಿಗೂಢ ಸಾವು:
ಮೃತ ರೂಪ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಕೆಲ ತಿಂಗಳ ಹಿಂದೆ ಕಾರಣಾಂತರಗಳಿಂದ ಸಸ್ಪೆಂಡ್ ಆಗಿದ್ದರು. ಇತ್ತೀಚಿಗೆ ಮತ್ತೆ ಕೆಲಸಕ್ಕೆ ಬರುವುದಾಗಿ ಪತ್ರ ಬರೆದಿದ್ದಾರೆ. ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದ ರೂಪ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 5 ವರ್ಷಗಳ ಹಿಂದೆ ಪತಿ ಇಬ್ಬರು ಮಕ್ಕಳನ್ನು ಬಿಟ್ಟು ಪ್ರತ್ಯೇಕವಾಗಿದ್ದಾರೆ. ಪತಿಯಿಂದ ದೂರವಾದ ಬಳಿಕ ತಾಯಿ ಮನೆಯಲ್ಲೇ ವಾಸವಿದ್ದರು. ಕೆಲದಿನಗಳಿಂದ ಕುಡಿತದ ಚಟಕ್ಕೆ ತಾಯಿ ಮಗಳಿಬ್ಬರು ಬಿದ್ದಿದ್ದರು.


ಇಬ್ಬರ ಮಧ್ಯೆ ಜಗಳ:
ಪ್ರತಿನಿತ್ಯ ಒಂದಲ್ಲ ಒಂದು ಕಾರಣಕ್ಕೆ ತಾಯಿ, ಮಗಳ ಮಧ್ಯೆ ಜಗಳವಾಗುತ್ತಿದ್ದು, ಆದರೆ ನಾಲ್ಕು ದಿನಗಳಿಂದ ಯಾವುದೇ ಮಾತುಕತೆ ಇಲ್ಲದೇ ಇಬ್ಬರು ಮನೆಯಿಂದ ಹೊರಬಾರದೆ ಇದ್ದಾಗ ಅಕ್ಕಪಕ್ಕದವರು ಅನುಮಾನಗೊಂಡಿದ್ದರು. ದುರ್ವಾಸನೆಗೆ ಬೇಸತ್ತು ಮನೆ ಬಾಗಿಲು ಒಡೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆದರೆ ರೂಪ ಸಾವಿಗೆ ಕಾರಣ ಮಾತ್ರ ಇನ್ನು ತಿಳಿದು ಬಂದಿಲ್ಲ. ನಾಲ್ಕು ದಿನಗಳ ಹಿಂದೆ ಅಕ್ಕಪಕ್ಕದವರನ್ನು ಪ್ರೀತಿಯಿಂದಲೇ ಮಾತನಾಡಿಸಿದ್ದ ರೂಪಾ ಬಳಿಕ ನಿಗೂಢವಾಗಿ ಸಾವನ್ನಪ್ಪಿರುವುದು ಅನುಮಾನ ಸೃಷ್ಟಿಸಿದೆ. ಶವಾಗಾರಕ್ಕೆ ಮೃತದೇಹ ರವಾನೆ ಮಾಡಲಾಗಿದ್ದು. ಶವಪರೀಕ್ಷೆ ಬಳಿಕ ಸಹಜ ಸಾವೋ ಇಲ್ಲವೋ ಎಂಬ ಸತ್ಯ ಹೊರಬರಲಿದೆ.

Join Whatsapp