ಕೇರಳ: 65 ವರ್ಷದ ವೃದ್ಧೆಯ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ, ವೃದ್ಧೆ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಘಟನೆ ಕೇರಳದ ಅಂಬಾಲಪುಳದಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಥೋಪುಂಪಡಿ ನಿವಾಸಿ ಸುನೀಶ್ ಅಲಿಯಾಸ್ ಅಪ್ಪು (22) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಮೇ 25ರ ರಾತ್ರಿ 10 ಗಂಟೆ ಸುಮಾರಿಗೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದು ಬಂದಿವೆ.
ಕಾಂಪೌಂಡ್ ಗೋಡೆಯನ್ನು ಹತ್ತಿ ಮನೆಯ ಆವರಣಕ್ಕೆ ನುಗ್ಗಿದ ಆರೋಪಿ ಬಾಗಿಲು ಬಡಿದಿದ್ದು ಬಾಗಿಲು ತೆರೆಯುತ್ತಿದ್ದಂತೆ ವೃದ್ಧೆಯ ಮೇಲೆರಗಿ ಅತ್ಯಾಚಾರ ಎಸಗಿದ್ದಾನೆ. ಮನೆಯಲ್ಲಿ ವೃದ್ಧೆ ಒಬ್ಬಳೇ ಇರುವುದನ್ನು ಗಮನಿಸಿ ಆರೋಪಿ ಸಂಚು ಹಾಕಿ ಕೃತ್ಯ ಎಸಗಿದ್ದನು ಎನ್ನಲಾಗಿದೆ.
ಅತ್ಯಾಚಾರಕ್ಕೆ ಒಳಗಾದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಸಂಬಂಧಿಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆಂದು ಪೆರುಮಾಳದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಘಟನೆ ನಡೆದ ಮೂರು ದಿನಗಳ ನಂತರ ವೃದ್ಧೆ ಕೊನೆಯುಸಿರೆಳೆದಿದ್ದಾರೆ.
ವಿದೇಶದಲ್ಲಿ ನೆಲೆಸಿರುವ ಪತಿ ಮತ್ತು ಮಗನನ್ನು ವೃದ್ಧೆ ಅಗಲಿದ್ದಾರೆ. ಆರೋಪಿ ಸುನೀಶ್ ಗೆ ವೃದ್ಧೆಯ ಬಗ್ಗೆ ಮೊದಲಿಂದಲೂ ತಿಳಿದಿತ್ತು ಮತ್ತು ಪರಿಚಯವೂ ಇತ್ತು. ಇದನ್ನೇ ದುರ್ಬಳಕೆ ಮಾಡಿಕೊಂಡು ಮನೆಗೆ ನುಗ್ಗಿ ಕೃತ್ಯ ಎಸಗಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಬಳಸಿಕೊಂಡು ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ಸುನೀಶ್ ಪತ್ತನಂತಿಟ್ಟದಲ್ಲಿರುವ ತನ್ನ ಸ್ಥಳದಿಂದ ಕೊಚ್ಚಿಗೆ ತೆರಳಿರುವುದು ಪತ್ತೆಯಾಗಿದ್ದು, ಅಲ್ಲಿಯೇ ಬಂಧಿಸಿ ಕರೆತರಲಾಗಿದೆ.