ಕೊಡಗು: ಭಾನುವಾರ ಕೊಡಗು ಜಿಲ್ಲೆಯ ಮಡಿಕೇರಿ ಬಳಿಯ ಅಬ್ಬಿ ಜಲಪಾತದಲ್ಲಿ ಹೈದರಾಬಾದ್ ನ ಮೂವರು ಪ್ರವಾಸಿಗರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಶ್ಯಾಮ್ (36), ಶ್ರೀಹರ್ಷ (18) ಮತ್ತು ಶಾಹೀಂದ್ರ (16) ಎಂದು ಪೊಲೀಸರು ಗುರುತಿಸಿದ್ದಾರೆ. ಜಿಲ್ಲೆಯ ಕುಶಾಲನಗರದ ಹೋಂಸ್ಟೇಯಲ್ಲಿ ತಂಗಿದ್ದ 16 ಮಂದಿ ಪ್ರವಾಸಿಗರು ವಾರಾಂತ್ಯದ ಪ್ರವಾಸಕ್ಕೆಂದು ಕೊಡಗಿಗೆ ಬಂದಿದ್ದರು.
ನದಿಯ ದಡದಲ್ಲಿ ಕುಳಿತಿದ್ದ 16 ಪ್ರವಾಸಿಗರ ಗುಂಪಿನಲ್ಲಿ ಮೂವರು ಸೇರಿದ್ದು, ಅವರಲ್ಲಿ ಒಬ್ಬರು ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಉಳಿದ ಇಬ್ಬರು ಆತನನ್ನು ರಕ್ಷಿಸಲು ಹಾರಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಎ ಅಯ್ಯಪ್ಪ ಮಾತನಾಡಿ, ಮೂವರಿಗೆ ಈಜು ಗೊತ್ತಿರಲಿಲ್ಲ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮಡಿಕೇರಿಯಲ್ಲಿರುವ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತೆಲಂಗಾಣದಿಂದ ಬಂದಿದ್ದ ಸಂಬಂಧಿಕರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.