ಹೊಸದಿಲ್ಲಿ: 2021- 22ನೇ ಸಾಲಿನ ಹಣಕಾಸು ವರ್ಷದಲ್ಲಿ ಎಲ್ಲ ಮುಖಬೆಲೆಯ ನೋಟುಗಳ ನಕಲಿಯಲ್ಲಿ ಹೆಚ್ಚಳವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗಿನ ವರದಿಯಲ್ಲಿ ತಿಳಿಸಿತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ, 500 ರೂ ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ 101.9ರಷ್ಟು ಮತ್ತು 2,000 ರೂ ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ 54.16ರಷ್ಟು ಹೆಚ್ಚಳವಾಗಿದೆ ಎಂದು ವರದಿ ಮಾಡಿತ್ತು.
ಕೇಂದ್ರದ ಅಪನಗದೀಕರಣದ ನಿರ್ಧಾರದ ಹೊರತಾಗಿಯೂ ನಕಲಿ ನೋಟುಗಳು ಹೆಚ್ಚಾಗಿರುವ ಕುರಿತಾದ ವರದಿಗೆ ಕಿಡಿಕಾರಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನೋಟು ರದ್ದತಿಯ ಏಕೈಕ ದುರದೃಷ್ಟಕರ ಯಶಸ್ಸು ಎಂದರೆ ಭಾರತದ ಆರ್ಥಿಕತೆಯ ನಾಶ ಎಂದಿದ್ದಾರೆ.
2016ರಲ್ಲಿ ಕೇಂದ್ರ ಸರ್ಕಾರ ಕಪ್ಪು ಹಣ ಪತ್ತೆ ಮತ್ತು ನಕಲಿ ನೋಟುಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ 500 ಹಾಗೂ 1,000 ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಆದರೆ ದೇಶದಲ್ಲಿ ನಕಲಿ ನೋಟು ಹೆಚ್ಚುತ್ತಿರುವ ಮಾಹಿತಿ ಹೊರಬಿದ್ದಿದ್ದು ರಾಹುಲ್ ಗಾಂಧಿ ಸಹಿತ ಟಿಎಂಸಿ ಸಂಸದ ಓಬ್ರೇನ್ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.