ಬೆಂಗಳೂರು: ಕೆರೆಯಲ್ಲಿ ಈಜಲು ಹೋಗಿ ಎಸ್ಎಸ್ಎಲ್ಸಿ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಚಿಕ್ಕಬಳ್ಳಾಪುರ
ಜಿಲ್ಲೆಯ ಗುಡಿಬಂಡೆ ತಾಲೂಕಿನ ಗರುಡಾಚಾರ್ಲಹಳ್ಳಿ ಕೆರೆಯಲ್ಲಿ ನಡೆದಿದೆ. ಪಸುಪಲೋಡು ಗ್ರಾಮದ ಅಜಯ್ ಕುಮಾರ್ ಮೃತ ವಿದ್ಯಾರ್ಥಿ.
ಅಜಯ್ ಮಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ. ಎಂದಿನಂತೆ ನಿನ್ನೆ ಶಾಲೆ ಮುಗಿಸಿಕೊಂಡು ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿ ನೀರಿನಲ್ಲಿ ಸಿಲುಕಿಕೊಂಡಿದ್ದಾನೆ.
ಇದನ್ನು ಗಮನಿಸಿದ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.ಆದರೆ ಚಿಕಿತ್ಸೆ ಫಲಕಾರಿಯಾಗದೇ ಅಜಯ್ ಮೃತಪಟ್ಟಿದ್ದಾನೆ.
ಮೃತ ಅಜಯ್ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದ. ತಾಯಿ ಶಾರದಮ್ಮಗೆ ಒಬ್ಬನೇ ಮಗ. ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.